ಹುಬ್ಬಳ್ಳಿಗೆ ಹೋಗಲು ಜಯದೇವ ಆಸ್ಪತ್ರೆ ಹಿಂದೇಟು!

By Kannadaprabha NewsFirst Published Jan 26, 2020, 11:03 AM IST
Highlights

ಹುಬ್ಬಳ್ಳಿಗೆ ಹೋಗಲು ಜಯದೇವ ಆಸ್ಪತ್ರೆ ಹಿಂದೇಟು!| ಕಿಮ್ಸ್‌ನಲ್ಲಿ ಸಿದ್ಧಪಡಿಸಿರುವ ಬೃಹತ್‌ ಕಟ್ಟಡ ಧೂಳು ತಿನ್ನುತ್ತಿದೆ| ಮೂಲಸೌಕರ‍್ಯಗಳಿಲ್ಲ ಎನ್ನುತ್ತಿರುವ ಜಯದೇವ ಆಸ್ಪತ್ರೆ ಆಡಳಿತ ಮಂಡಳಿ

ಶಿವಾನಂದ ಗೊಂಬಿ

ಹುಬ್ಬಳ್ಳಿ[ಜ.26]: ಹುಬ್ಬಳ್ಳಿಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ ಬರಲು ಹಿಂದೇಟು ಹಾಕುತ್ತಿರುವ ಅಂಶ ಇದೀಗ ಬೆಳಕಿಗೆ ಬಂದಿದೆ. ಇದರಿಂದಾಗಿ ಇದಕ್ಕಾಗಿ ಇಲ್ಲಿನ ಕಿಮ್ಸ್‌ನಲ್ಲಿ ಸಿದ್ಧಪಡಿಸಿರುವ ಬೃಹತ್‌ ಕಟ್ಟಡ ಅಕ್ಷರಶಃ ಧೂಳು ತಿನ್ನುವಂತಾಗಿದೆ.

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ ಹುಬ್ಬಳ್ಳಿಗೆ ಬರಬೇಕು ಎಂಬುದು ಬಹು ವರ್ಷಗಳ ಬೇಡಿಕೆ. ಇದಕ್ಕಾಗಿ ಇಲ್ಲಿನ ಕಿಮ್ಸ್‌ ಆವರಣದಲ್ಲಿ ಪ್ರತ್ಯೇಕ ಕಟ್ಟಡವನ್ನೂ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣ ಕೆಲಸ ಮುಗಿದು ಆಗಲೇ ವರ್ಷವೇ ಗತಿಸಿದೆ. ಆದರೆ, ಇದೀಗ ಜಯದೇವ ಆಸ್ಪತ್ರೆಯ ಘಟಕವನ್ನು ಇಲ್ಲಿ ತೆರೆಯಲು ಆಗುವುದಿಲ್ಲ ಎಂಬ ಮಾತು ಅಲ್ಲಿನ ಆಡಳಿತ ಮಂಡಳಿಯಿಂದ ಬಂದಿದೆ.

ಹುಬ್ಬಳ್ಳಿ: ಮೂರು ದಿನದಿಂದ ಕಿಮ್ಸ್‌ನಲ್ಲಿ ನೀರಿಲ್ಲ, ರೋಗಿಗಳ ಪರದಾಟ

ಕಿಮ್ಸ್‌ನಲ್ಲಿ ಪ್ರತಿ ತಿಂಗಳು ಕನಿಷ್ಠವೆಂದರೂ 500-600 ಹೃದ್ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಇಲ್ಲಿ ಹೃದ್ರೋಗಕ್ಕೆ 8 ಜನ ತಜ್ಞ ವೈದ್ಯರಿದ್ದಾರೆ. ಆದರೆ, ಕಾಯಂ ಪರಿಣಿತ ಹೃದ್ರೋಗ ಶಸ್ತ್ರಚಿಕಿತ್ಸಕರ ನೇಮಕ ಆಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಯಾವುದಾದರೂ ಬೈಪಾಸ್‌ ಸರ್ಜರಿ ಸೇರಿದಂತೆ ಪ್ರಮುಖ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಅಂತ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಲ್ಲವೇ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗುತ್ತಿದೆ.

ಹಿಂದೇಟು ಏಕೆ?:

ಪ್ರಾರಂಭದಲ್ಲಿ ಇಲ್ಲಿ ಘಟಕ ತೆರೆಯಲು ಒಪ್ಪಿದ್ದ ಜಯದೇವ ಆಸ್ಪತ್ರೆಯ ಆಡಳಿತ ಮಂಡಳಿ ನಂತರ ಬರಲು ಸಾಧ್ಯವಾಗಲ್ಲ. ಈಗಾಗಲೇ ಮೈಸೂರು ಹಾಗೂ ಕಲಬುರಗಿಯಲ್ಲಿ ನಮ್ಮ ಘಟಕಗಳಿವೆ. ಹುಬ್ಬಳ್ಳಿಯಲ್ಲೂ ಮಾಡಿದರೆ ನಿರ್ವಹಣೆ ಸಮಸ್ಯೆಯಾಗುತ್ತೆ. ಜತೆಗೆ ನಮಗೆ ಬೇಕಾದಂಥ ಮೂಲಸೌಲಭ್ಯಗಳು ಅಲ್ಲಿಲ್ಲ ಎಂದು ಸಬೂಬನ್ನು ಹೇಳುತ್ತಿದೆ ಎಂದು ಕಿಮ್ಸ್‌ ಮೂಲಗಳು ತಿಳಿಸಿವೆ.

ವೇತನ ಕೊಟ್ಟಿಲ್ಲವೆಂದು ಕಿಮ್ಸ್‌ ಸಿಬ್ಬಂದಿ ಆತ್ಮಹತ್ಯೆ

ಹೌದು ಜಯದೇವ ಆಸ್ಪತ್ರೆ ಬರಲು ಹಿಂದೇಟು ಹಾಕಿದೆ. ಕೆಲವೊಂದು ಮೂಲಸೌಲಭ್ಯಗಳ ಕೊರತೆಯಿದೆ ಎಂದು ತಿಳಿಸಿತ್ತು. ಆದರೆ, ನಾವು ಜಯದೇವ ಆಸ್ಪತ್ರೆ ಕೇಳಿರುವ ಸೌಲಭ್ಯ ಕಲ್ಪಿಸಲು ಸಿದ್ಧ. ಅಲ್ಲಿನ ಮುಖ್ಯಸ್ಥ ಡಾ.ಮಂಜುನಾಥ ಅವರಿಗೆ ಇದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಶೀಘ್ರದಲ್ಲೇ ಕಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

-ಜಗದೀಶ್‌ ಶೆಟ್ಟರ್‌, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ

click me!