
ಬೆಂಗಳೂರು (ಮಾ.22): ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವ ಮುನ್ನವೇ ದಾಖಲೆಗಳ ಸಂಗ್ರಹಣೆ ಮಾಡುವುದು ಈ ಕುರಿತ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯಿತಿ ಕಚೇರಿಯ 2015-16ನೇ ಸಾಲಿನಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಎಸ್.ಲಕ್ಷ್ಮೀ ಸೇರಿ ಇತರೆ ಇಬ್ಬರು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1983ರ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಲೋಕಾಯುಕ್ತ ಪೊಲೀಸರು ಅನಾಮಧೇಯ ದೂರು ಆಧರಿಸಿ ಸರ್ಕಾರಿ ಸೇವಕರ ವಿರುದ್ಧ ಎಫ್‌ಐಆರ್ ದಾಖಲಿಸುವ ಹಾಗೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಮುನ್ನ ವಿವರವಾದ ಪ್ರಾಥಮಿಕ ತನಿಖೆ ನಡೆಸುವುದು, ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವುದು ಮತ್ತು ದಾಖಲೆ ಸಂಗ್ರಹಿಸುವುದು, ದಸ್ತಾವೇಜು ನಿರ್ಮಿಸುವುದನ್ನು ಮಾಡುವಂತಿಲ್ಲ. ಹೀಗೆ ಮಾಡಿದರೆ ಅದು ಕಾಯ್ದೆಯ ಸೆಕ್ಷನ್ 17ಎ ಅನ್ನು ರೂಪಿಸಿದ ಶಾಸಕಾಂಗದ ಉದ್ದೇಶವನ್ನೇ ನಿಷ್ಪಲಗೊಳಿಸುತ್ತದೆ ಎಂದು ಪೀಠ ಹೇಳಿದೆ.
ಇದನ್ನೂ ಓದಿ: Allahabad High Court | ಸ್ತನಗಳನ್ನು ಸ್ಪರ್ಶಿಸುವುದು, ಪೈಜಾಮಾ ದಾರ ಎಳೆಯುವುದು ಅತ್ಯಾಚಾರ ಯತ್ನವಲ್ಲ: ಕೋರ್ಟ್!
ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸದೆ ಮತ್ತು ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿ ಪಡೆಯದೆ ಲೋಕಾಯುಕ್ತ ಪೊಲೀಸರು ವಿವರವಾದ ವಿಚಾರಣೆ ಅಥವಾ ತನಿಖೆ ನಡೆಸಿದ್ದಾರೆ. ಹೀಗಾಗಿ, ಅರ್ಜಿದಾರರ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸಿರುವ ಎಲ್ಲಾ ಕಾರ್ಯಗಳೂ ಈ ಅನೂರ್ಜಿತವಾಗಲಿದೆ ಎಂದು ಪೀಠ ಹೇಳಿದೆ.
ಆದರೆ, ಅರ್ಜಿದಾರರ ವಿರುದ್ಧದ ಭ್ರಷ್ಟಾಚಾರ ಆರೋಪಗಳಿದ್ದರೆ, ಆ ಬಗ್ಗೆ ತನಿಖೆ ನಡೆಸುವುದು ಅಗತ್ಯ. ಅರ್ಜಿದಾರರ ವಿರುದ್ಧದ ತನಿಖೆಗೆ ಸೆಕ್ಷನ್ 17ಎ ಅಡಿ ಸಕ್ಷಮ ಪ್ರಾಧಿಕಾರದಿಂದ ಸದ್ಯ ಪೂರ್ವಾನುಮತಿ ದೊರೆತಿದೆ. ಹೀಗಾಗಿ ಈ ಪ್ರಕರಣದಲ್ಲಿ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ಮುಕ್ತವಾಗಿರಿಸಲಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣವೇನು?:
ಅರ್ಜಿದಾರೆ ಲಕ್ಷ್ಮೀ ಅವರು 2015-16ನೇ ಸಾಲಿನಲ್ಲಿ ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಜಿ.ಎಸ್.ಸುರೇಂದ್ರ ಅವರು 2014-15ನೇ ಸಾಲಿನಲ್ಲಿ ಮುಖ್ಯ ಅಧಿಕಾರಿಯಾಗಿದ್ದರು. ಈ ಇಬ್ಬರ ಅವಧಿಯಲ್ಲಿಯೇ ಎಚ್.ಶ್ರೀನಿವಾಸ್ ಅವರು ಜ್ಯೂನಿಯರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರು ಆ ಹುದ್ದೆಯಿಂದ ಬೇರೆಡೆಗೆ ವರ್ಗಾವಣೆಯಾದ ನಂತರ 2019ರ ಏ.20ರಂದು ಅನಾಮಧೇಯ ಪತ್ರವೊಂದು ಲೋಕಾಯುಕ್ತ ಪೊಲೀಸರಿಗೆ ಬಂದಿತ್ತು. 2013-ರಿಂದ 2018ರವರೆಗೆ ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಸರ್ಕಾರದ ಕೋಟಿಗಟ್ಟಲೆ ಅನುದಾನವನ್ನು ಲೂಟಿ ಮಾಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು.
ಆ ಪತ್ರ ಆಧರಿಸಿ ಲೋಕಾಯುಕ್ತ ಪೊಲೀಸರು, ಎಫ್‌ಐಆರ್ ದಾಖಲಿಸದೆ ತನಿಖೆ ಮಾಡಿ ದಾಖಲೆ ಸಂಗ್ರಹಿಸಿದ್ದರು. 2023ರ ಮಾರ್ಚ್‌ನಲ್ಲಿ ಸೆಕ್ಷನ್ 17ಎ ಅಡಿ ತನಿಖೆಗೆ ಪೂರ್ವಾನುಮತಿ ಕೋರಿ ಅರ್ಜಿದಾರರು ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಅರ್ಜಿದಾರರು ಸುಮಾರು 50 ಲಕ್ಷ ರು. ಅವ್ಯವಹಾರ ನಡೆಸಿದ್ದಾರೆ ಎಂದು ಆ ಪತ್ರದಲ್ಲಿ ಆರೋಪಿಸಲಾಗಿತ್ತು. ಸಕ್ಷಮ ಪ್ರಾಧಿಕಾರ 2023ರ ಜೂ.17ರಂದು ಅರ್ಜಿದಾರರ ವಿರುದ್ಧ ವಿಚಾರಣೆ/ತನಿಖೆಗೆ ಅನುಮತಿ ನೀಡಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಪತ್ನಿ ಹೆಸರಿನಲ್ಲಿ ಖರೀದಿ ಮಾಡಿದ ಆಸ್ತಿ ಯಾರ ಪಾಲಾಗುತ್ತೆ?
ತಪ್ಪಿತಸ್ಥ ನೌಕರಗೆ ಭ್ರಷ್ಟಾಚಾರ ನಿಯಂತ್ರಣ
ಕಾಯ್ದೆಯ ಸೆಕ್ಷನ್ 17ಎ ರಕ್ಷಣೆ ಸಿಗಲ್ಲ: ಕೋರ್ಟ್
ಸರ್ಕಾರಿ ನೌಕರಿಗೆ ಕಿರುಕುಳ ನೀಡುವಂತಹ ಪ್ರಾಸಿಕ್ಯೂಷನ್ ಹಾಗೂ ದೂರುಗಳಿಂದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1983ರ ಸೆಕ್ಷನ್ 17ಎ ರಕ್ಷಣೆ ಕಲ್ಪಿಸುತ್ತದೆ. ಇದಲ್ಲದಿದ್ದರೆ ಅಮಾಯಕ ಅಧಿಕಾರಿಗಳಿಗೆ ಕಿರುಕುಳ ಉಂಟು ಮಾಡುವ ಪ್ರಾಸಿಕ್ಯೂಷನ್‌ಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಈ ರಕ್ಷಣಾ ಕವಚವನ್ನು ತಪ್ಪಿತಸ್ಥ ಸರ್ಕಾರಿ ನೌಕರನಿಗೆ ಕಲ್ಪಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಪೀಠ ಅಭಿಪ್ರಾಯಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ