ಜಿಎಸ್ಟಿ ನೋಟಿಸ್ ಬಳಿಕ ಐಟಿ ನೋಟಿಸ್ ಶಾಕ್?: ಸಣ್ಣ ವ್ಯಾಪಾರಿಗಳಿಗೆ ಈಗ ಮತ್ತೊಂದು ಸಂಕಷ್ಟ

Published : Jul 19, 2025, 08:58 AM ISTUpdated : Jul 19, 2025, 03:04 PM IST
UPI

ಸಾರಾಂಶ

ಜಿಎಸ್ಟಿ ನೋಂದಣಿ ಕುರಿತು ಯಾವುದೇ ಮಾಹಿತಿ, ಜ್ಞಾನ ಇಲ್ಲದ ಅನೇಕ ವ್ಯಾಪಾರಿಗಳು ಸಾಮಾನ್ಯ ಉಳಿತಾಯ ಖಾತೆಯನ್ನು ಯುಪಿಐಗೆ ಲಿಂಕ್ ಮಾಡಿ ಹಣ ಸ್ವೀಕರಿಸಿದ್ದಾರೆ.

ಬೆಂಗಳೂರು (ಜು.19): ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನೋಂದಣಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಲಕ್ಷಾಂತರ ರು. ತೆರಿಗೆ, ದಂಡ ಮತ್ತು ಬಡ್ಡಿ ಕಟ್ಟಬೇಕು ಎನ್ನುವ ನೋಟಿಸ್ ಸ್ವೀಕರಿಸಿರುವ ಸಣ್ಣ ವ್ಯಾಪಾರಿಗಳಿಗೆ, ಮುಂದಿನ ದಿನಗಳಲ್ಲಿ ಇದೇ ವಹಿವಾಟುಗಳ ಕಾರಣಕ್ಕೆ ಕೇಂದ್ರ ಆದಾಯ ತೆರಿಗೆ (ಐಟಿ) ಇಲಾಖೆಯಿಂದಲೂ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ಜಿಎಸ್ಟಿ ನೋಂದಣಿ ಕುರಿತು ಯಾವುದೇ ಮಾಹಿತಿ, ಜ್ಞಾನ ಇಲ್ಲದ ಅನೇಕ ವ್ಯಾಪಾರಿಗಳು ಸಾಮಾನ್ಯ ಉಳಿತಾಯ ಖಾತೆಯನ್ನು ಯುಪಿಐಗೆ ಲಿಂಕ್ ಮಾಡಿ ಹಣ ಸ್ವೀಕರಿಸಿದ್ದಾರೆ. ಇನ್ನು ಚಾಲ್ತಿ ಖಾತೆ ಹೊಂದಿದ್ದರೂ ಅದರಲ್ಲಿ ವಹಿವಾಟು ನಡೆಸುವುದಕ್ಕೂ ಕೆಲ ನಿಯಮಗಳು ಇರುತ್ತವೆ.

ಮಾಹಿತಿ ಇಲ್ಲದ ವ್ಯಾಪಾರಿಗಳು ಜಿಎಸ್ಟಿ ನೋಂದಣಿ ಇಲ್ಲದೆ ಚಾಲ್ತಿ ಖಾತೆಗೂ ಯುಪಿಐ ಮೂಲಕ ಹಣ ಸ್ವೀಕರಿಸಿದ್ದಾರೆ. ಈಗಾಗಲೇ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ನಿಂದ ಆಘಾತಗೊಂಡಿರುವ ವ್ಯಾಪಾರಿಗಳು, ಶೀಘ್ರದಲ್ಲೇ ಆದಾಯ ತೆರಿಗೆ ನೋಟಿಸ್‌ನ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ‘ಬ್ಯಾಂಕ್ ಮೂಲಕ ವಹಿವಾಟು ನಡೆಸುವ ವ್ಯಾಪಾರಿಗಳು ಕಾಲಮಿತಿಯಲ್ಲಿ ವಾರ್ಷಿಕ ಐಟಿ ರಿಟರ್ನ್ ಸಲ್ಲಿಕೆ ಮಾಡಬೇಕು. ಚಾರ್ಟರ್ಡ್ ಅಕೌಂಟೆಂಟ್ ಸಂಪರ್ಕಿಸಬೇಕು. ಒಂದು ವೇಳೆ ನಿಗದಿತ ಕಾಲ ಮಿತಿಯಲ್ಲಿ ಐಟಿ ರಿಟರ್ನ್ ಸಲ್ಲಿಕೆ ಮಾಡದಿದ್ದರೆ ಮತ್ತೊಂದು ನೋಟಿಸ್ ಸ್ವೀಕರಿಸುವುದು ನಿಶ್ಚಿತ. ಎರಡೆರೆಡು ಕಡೆ ವಿವರಣೆ ನೀಡುವುದು ಅನಿವಾರ್ಯವಾಗಲಿದೆ’ ಎಂದು ಹೆಸರಾಂತ ಆರ್ಥಿಕ ಸಲಹೆಗಾರ ವಿಜಯ್ ರಾಜೇಶ್ ಹೇಳಿದ್ದಾರೆ.

3-4 ವರ್ಷದ ಲೆಕ್ಕ ತರುವುದೆಲ್ಲಿಂದ?: ಚಹಾ, ಹಾಲು-ಮೊಸಲು, ಹಣ್ಣು-ತರಕಾರಿ, ಬೇಕರಿ ಉತ್ಪನ್ನಗಳು ಸೇರಿ ಬೇರೆ ಬೇರೆ ಜಿಎಸ್ಟಿ ತೆರಿಗೆ ಸ್ಲ್ಯಾಬ್ ಹೊಂದಿರುವ ವಸ್ತುಗಳನ್ನು ಮಾರಾಟ ಮಾಡಿರುವ ವ್ಯಾಪಾರಿಗಳನ್ನು ಒಂದೇ ತಕ್ಕಡಿಯಲ್ಲಿ ನೋಡುವ ಮೂಲಕ ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಗದಿಪಡಿಸಿ, ಭಾರಿ ಮೊತ್ತದ ಬಡ್ಡಿ ಮತ್ತು ದಂಡ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದು ಬಡ ವ್ಯಾಪಾರಿಗಳಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಈ ಕ್ರಮವನ್ನು ಅವೈಜ್ಞಾನಿಕ ಮತ್ತು ವಿವೇಚನರಹಿತ ಎಂದು ಟೀಕಿಸಿರುವ ಹೆಸರಾಂತ ಆರ್ಥಿಕ ಸಲಹೆಗಾರ ವಿಜಯ್ ರಾಜೇಶ್, ಸಣ್ಣ ಬೇಕರಿಯಲ್ಲಿ ಜಿಎಸ್ಟಿ ವಿನಾಯಿತಿ ಇರುವ ಮತ್ತು ಜಿಎಸ್ಟಿ ವ್ಯಾಪ್ತಿಗೆ ಬರುವ ವಸ್ತುಗಳನ್ನೂ ಮಾರಾಟ ಮಾಡಲಾಗುತ್ತದೆ. ಈ ಎಲ್ಲವನ್ನು ಒಂದೇ ರೀತಿಯ ಜಿಎಸ್ಟಿಗೆ ಪರಿಗಣಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಇನ್ನು ವಹಿವಾಟಿಗೆ ಸಂಬಂಧಿಸಿದ ವಿವರಣೆ ನೀಡಿ ಎಂದು ಕೇಳಲಾಗಿದೆ. ಆದರೆ, ಮೂರ್ನಾಲ್ಕು ವರ್ಷಗಳ ಹಿಂದೆ ಮಾಡಿರುವ ವ್ಯಾಪಾರದ ಲೆಕ್ಕದ ವಿವರಣೆಯನ್ನು ಈಗ ಏಕಾಏಕಿ ನೀಡುವಂತೆ ಕೇಳಿದರೆ ಅವರು ಕೊಡುವುದು ಹೇಗೆ?

ಇಡೀ ವರ್ಷದಲ್ಲಿ ನಡೆದಿರುವ ಬ್ಯಾಂಕ್ ಟ್ರಾನ್ಸ್ಯಾಕ್ಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ವಿಶ್ಲೇಷಣೆ ಮಾಡಲು ಸಾಧ್ಯವೇ? ಅವುಗಳಿಗೆ ಸಂಬಂಧಿಸಿದ ಚೀಟಿ, ಸ್ವೀಕೃತಿಗಳನ್ನು ವರ್ಷಗಳವರೆಗೆ ಇಟ್ಟುಕೊಂಡಿರುತ್ತಾರೆಯೇ? ಎಂದು ವಿಜಯ್ ರಾಜೇಶ್ ಕೇಳಿದರು. ಕೇವಲ ಬ್ಯಾಂಕ್ ಖಾತೆಯಲ್ಲಿ ನಡೆದಿರುವ ಟ್ರಾನ್ಸ್ಯಾಕ್ಷನ್ ಆಧಾರದ ಮೇಲೆ ನೋಟಿಸ್ ನೀಡಿರುವುದು ಅವೈಜ್ಞಾನಿಕ ಕ್ರಮ. ಹಣ ಸ್ವೀಕರಿಸಿದವರಲ್ಲಿ ಅನೇಕರು ಕೈಸಾಲ, ಸಂಬಂಧಿಕರು, ಸ್ನೇಹಿತರಿಂದಲೂ ಹಣ ಪಡೆದುಕೊಂಡಿರುತ್ತಾರೆ. ಅಲ್ಲದೆ, ತುರ್ತಾಗಿ ಪೇಮೆಂಟ್ ಮಾಡಲು ಗೊತ್ತಿರುವವರಿಂದ ಹಣವನ್ನು ಯುಪಿಐನಲ್ಲಿ ಪಡೆದಿರುತ್ತಾರೆ.

ಹೀಗೆ ಪಡೆದಿರುವ ಎಲ್ಲಾ ಹಣವನ್ನು ವ್ಯಾಪಾರದಿಂದ ಬಂದ ಹಣವೆಂದು ಪರಿಗಣಿಸಿ ನೋಟಿಸ್ ನೀಡಿದರೆ ಸಣ್ಣ ವ್ಯಾಪಾರಿಗಳು ಆ ಲೆಕ್ಕ ಕೊಡಲು ಸಾಧ್ಯವೇ? ಕೈ ಸಾಲಕ್ಕೆ ರಸೀದಿಗಳನ್ನು ಎಲ್ಲಿಂದ ತರುವುದು ಎಂದು ವಿಜಯ್ ರಾಜೇಶ್ ಪ್ರಶ್ನಿಸಿದರು. ನೋಟಿಸ್ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ವಿವೇಚನೆ ಬಳಸಬೇಕಿತ್ತು. ಬ್ಯಾಂಕ್ ವಹಿವಾಟು ಆಧಾರದ ಮೇಲೆಯೇ ಎಲ್ಲವನ್ನು ನಿಗದಿಪಡಿಸುವ ಬದಲು ವಿಶ್ಲೇಷಣೆ ಮಾಡುವ ಮುಖಾಂತರ ಸಣ್ಣ ವ್ಯಾಪಾರಿಗಳಿಗೆ, ಅವರು ಮಾಡುವ ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗದ ರೀತಿಯಲ್ಲಿ ಹೆಜ್ಜೆಗಳನ್ನು ಇಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ವಿಜಯ್ ರಾಜೇಶ್ ಅಭಿಪ್ರಾಯಪಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: ಕುರ್ಚಿ ಕಸರತ್ತು ನಡುವೆ ಇಂದು ಸಿದ್ದು ದೆಹಲಿಗೆ
ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್‌ ಆಗಿದ್ದು ಹೇಗೆ?: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ