
ಬೆಂಗಳೂರು (ಜು.19): ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣ ಕುರಿತ ವಿಚಾರಣೆಗಾಗಿ ಶನಿವಾರ (ಜು.19) ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಭಾರತೀನಗರ ಪೊಲೀಸ್ ಠಾಣೆಗೆ ಹಾಜರಾಗುವಂತೆ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ. ಪ್ರಕರಣ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬೈರತಿ ಬಸವರಾಜ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಬುಧವಾರಕ್ಕೆ (ಜು.23) ಮುಂದೂಡಿದೆ.
ವಿಚಾರಣೆ ವೇಳೆ ಬೈರತಿ ಬಸವರಾಜ ಪರ ವಕೀಲರು, ವಿಚಾರಣೆಗೆ ಹಾಜರಾಗಲು ಅನುಮತಿಸಿದರೆ, ಬಸವರಾಜ ಅವರನ್ನು ಬಂಧಿಸಬಾರದು. ಅವರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ಪೊಲೀಸರು ನೀಡಿರುವ ನೋಟಿಸ್ ಪ್ರಕಾರ ಬಸವರಾಜ ವಿಚಾರಣೆಗೆ ಹಾಜರಾಗಲಿ. ತನಿಖೆ ನಡೆಯಲಿ. ಆದರೆ. ಪೊಲೀಸರು ಅವರನ್ನು ಬಂಧಿಸಬಾರದು ಎಂದು ಒಂದು ಹಂತದಲ್ಲಿ ಆದೇಶ ನೀಡಲು ನ್ಯಾಯಮೂರ್ತಿಗಳು ಮುಂದಾದರು. ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ ಅವರು.
ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಬಾರದು ಮತ್ತು ಅರ್ಜಿದಾರ ಶಾಸಕ ಬಸವರಾಜ ಅವರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಬಾರದು. ಪೊಲೀಸರು ತನಿಖೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ವಾದಿಸಿದರು. ಸರ್ಕಾರಿ ಅಭಿಯೋಜಕರ ವಾದವನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ಶುಕ್ರವಾರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಬೇಕು. ಬಸವರಾಜ ವಿಚಾರಣೆಗೆ ಹಾಜರಾದರೆ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ (3)(4)(5) ಮತ್ತು ಅರ್ನೇಶ್ ಕುಮಾರ್, ಗೋಸ್ವಾಮಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ನಿರ್ದೇಶನಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಜು.23ಕ್ಕೆ ಮುಂದೂಡಿತು.
ಅಲ್ಲದೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಭಾರತಿನಗರ ಠಾಣಾ ಪೊಲೀಸರಿಗೆ ನ್ಯಾಯಪೀಠ ಇದೇ ವೇಳೆ ಸೂಚನೆ ನೀಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ, ಶಿವಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ ಅವರ ತಾಯಿ ದೂರು ನೀಡಿದ್ದಾರೆ. ಆಕೆ ಪ್ರಕರಣದ ಪ್ರತ್ಯಕ್ಷ ದರ್ಶಿ. 8-9 ಅಕ್ರಮಣಕಾರರು ಶಿವಪ್ರಕಾಶ್ ಮೇಲೆ ದಾಳಿ ನಡೆಸಿ ಹತ್ಯೆ ನಡೆಸಿದ್ದಾರೆ ಎಂದಷ್ಟೇ ದೂರಿನಲ್ಲಿ ಹೇಳಿದ್ದಾರೆ. ಮಾಧ್ಯಮದವರು ಕೊಲೆಯಲ್ಲಿ ಶಾಸಕರ ಪಾತ್ರವಿದೆಯೇ ಎಂದು ಪ್ರಶ್ನಿಸಿದಾಗ ಬಸವರಾಜ ಹೆಸರನ್ನು ದೂರುದಾರೆ ಹೇಳಲಿಲ್ಲ. ಆದರೂ ಪೊಲೀಸರು ಮಾತ್ರ ಬಸವರಾಜ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ಅರ್ಜಿದಾರರು ವಿಚಾರಣೆಗೆ ಸಹಕರಿಸಲು ಸಿದ್ದರಿದ್ದಾರೆ. ಬಸವರಾಜ ಅವರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಅದಕ್ಕೆ ಸರ್ಕಾರಿ ಅಭಿಯೋಜಕರು, ಅರ್ಜಿದಾರರನ್ನು ಬಂಧಿಸದಂತೆ ಆದೇಶ ಮಾಡಬಾರದು. ಯಾರನ್ನು ಬಂಧಿಸಬೇಕು ಅಥವಾ ಬಂಧಿಸಬಾರದು ಎಂಬುದು ತನಿಖಾಧಿಕಾರಿಗೆ ಬಿಟ್ಟ ವಿಚಾರ. ಹೇಗೆ ತನಿಖೆ ನಡೆಸಬೇಕು ಎಂಬುದು ಅವರು ತೀರ್ಮಾನಿಸುತ್ತಾರೆ. ಆ ವಿಚಾರದಲ್ಲಿ ನ್ಯಾಯಾಲಯ ನಿರ್ದೇಶನ ನೀಡಬಾರದು. ಆಸ್ತಿ ವಿಚಾರವಾಗಿ ಶಿವಪ್ರಕಾಶ್ ಕೊಲೆಯಾಗಿದೆ. ಐದು ತಿಂಗಳ ಹಿಂದೆ ಮೃತ ವ್ಯಕ್ತಿ ದೂರು ನೀಡಿ, ಬೈರತಿ ಬಸವರಾಜ್ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು. ಐದು ತಿಂಗಳ ನಂತರ ಕೊಲೆ ನಡೆದಿದೆ. ಎಲ್ಲ ಸತ್ಯವನ್ನು ಪೊಲೀಸರು ಬಯಲಿಗೆ ಎಳೆಯಬೇಕಿದೆ. ಹಾಗಾಗಿ, ಪೊಲೀಸರು ಕೈಗಳನ್ನು ನ್ಯಾಯಾಲಯ ಕಟ್ಟಿಹಾಕಬಾರದು ಎಂದು ಒತ್ತಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಂಧಿಸುವ ಉದ್ದೇಶವಿಲ್ಲದಿರುವುದಾಗ ಪೊಲೀಸರು ಬಿಎನ್‌ಎಸ್ 35 ಅಡಿ ಏಕೆ ನೋಟಿಸ್ ನೀಡುತ್ತಾರೆ. ಹೀಗಾಗಿ ಮುಂದಿನ ವಿಚಾರಣೆವರೆಗೆ ಬಂಧಿಸದೆ ಇರಬಹುದಲ್ಲ. ಬಂಧಿಸಿದರೆ ಪೊಲೀಸರಿಗೆ ಉಂಟಾಗುವ ತೊಂದರೆ ಏನು ಎಂದು ಪ್ರಶ್ನಿಸಿತು. ಇದಕ್ಕೆ ಬೆಳ್ಳಿಯಪ್ಪ ಉತ್ತರಿಸಿ, ವ್ಯಕ್ತಿಯೊಬ್ಬ ಮೃತಪಟ್ಟಿರುವಾಗ ತಾಂತ್ರಿಕ ಕಾರಣ ನೀಡಿ ನ್ಯಾಯಾಲಯ ರಕ್ಷಣೆ ನೀಡಬಹುದೇ? 7 ವರ್ಷಕ್ಕಿಂತಲೂ ಕಡಿಮೆ ಶಿಕ್ಷೆ ಇದ್ದರೆ ಮಾತ್ರ ಈ ನೋಟಿಸ್ ಅಡಿ ಬಂಧಿಸುವಂತಿಲ್ಲ. ಆದರೆ ಕೊಲೆ ಪ್ರಕರಣವಾಗಿರುವುದರಿಂದ ಬಂಧಿಸಲು ಅವಕಾಶವಿದೆ. ದೂರು ದಾಖಲಾದ 24 ಗಂಟೆಯಲ್ಲಿಯೇ ದೂರುದಾರೆ ಮೇಲೆ ಪ್ರಭಾವ ಬೀರಿದ್ದಾರೆ. ಕೋರ್ಟ್ ಆದೇಶವನ್ನು ಅವರ ರಕ್ಷಣೆಗೆ ಬಳಸುವಂತಾಗಬಾರದು ಎಂದು ಹೇಳಿತು. ಅಂತಿಮವಾಗಿ ಬಸವರಾಜ ವಿಚಾರಣೆಗೆ ಹಾಜರಾಗಲಿ, ಪೊಲೀಸರು ಬಿಎನ್‌ಎಸ್ ಸೆಕ್ಷನ್ 35 ಪಾಲಿಸಲಿ ಎಂದು ಸೂಚಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ