ನಾವೆಂದೂ ಸಚಿನ್ ಗುತ್ತಿಗೆದಾರ ಎಂದು ಹೇಳಿಯೇ ಇಲ್ಲ, ನಮಗೆ ಅದು ಗೊತ್ತೂ ಇಲ್ಲ ಎಂದಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸುರೇಖಾ, ಈಗ ಸಚಿನ್ ಗುತ್ತಿಗೆದಾರನೇ ಅಲ್ಲ ಎಂಬ ಮಾತು ಗುತ್ತಿಗೆದಾರರ ಸಂಘದಲ್ಲಿ ಕೇಳಿ ಬರುತ್ತಿದೆ.
ಬೀದರ್ (ಜ.02): ತನ್ನ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಕಿರುಕುಳ ಕಾರಣ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಂಚಾಳ ಗುತ್ತಿಗೆದಾರನೇ ಅಲ್ಲ ಎಂದು ಬೀದರ್ ಗುತ್ತಿಗೆದಾರರು, ಕಂಟ್ರಾಕ್ಟರ್ ಸಂಘಕ್ಕೆ ಟಿಪ್ಪಣಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ, ತಾವು ಈ ತರಹದ ಟಿಪ್ಪಣಿ ನೀಡಿಲ್ಲ ಎಂದು ಗುತ್ತಿಗೆದಾರರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸ್ವತಃ ಅವರ ಸಹೋದರಿ ಸುರೇಖಾ ಮಾತನಾಡಿದ್ದು, ನಾವೆಂದೂ ಸಚಿನ್ ಗುತ್ತಿಗೆದಾರ ಎಂದು ಹೇಳಿಯೇ ಇಲ್ಲ, ನಮಗೆ ಅದು ಗೊತ್ತೂ ಇಲ್ಲ ಎಂದಿದ್ದಾರೆ. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಸುರೇಖಾ, ಈಗ ಸಚಿನ್ ಗುತ್ತಿಗೆದಾರನೇ ಅಲ್ಲ ಎಂಬ ಮಾತು ಗುತ್ತಿಗೆದಾರರ ಸಂಘದಲ್ಲಿ ಕೇಳಿ ಬರುತ್ತಿದೆ.
ನಾವೆಂದೂ ಸಚಿನ್ ಗುತ್ತಿಗೆದಾರ ಎಂದು ಹೇಳಿಯೇ ಇಲ್ಲ, ನಮಗೆ ಅದು ಗೊತ್ತೂ ಇಲ್ಲ. ಆತನ ಎಲ್ಲ ದಾಖಲೆಗಳು ಆತ ಕೆಲಸ ಮಾಡಿದ ಕಲಬುರಗಿ ಕಚೇರಿಯಲ್ಲಿದ್ದು, ಅವುಗಳನ್ನೀಗ ನಾಶಪಡಿಸಲಾಗಿದೆ ಎಂದು ಆರೋಪಿಸಿದರು. ಸಚಿನ್ ಪಾಂಚಾಳ ಆತ್ಮಹತ್ಯೆ ಕುರಿತಂತೆ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ತನಿಖೆಯ ದಿಕ್ಕನ್ನೇ ಬದಲಿಸುವಂಥ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಪ್ರಕರಣದ ಸಿಬಿಐ ತನಿಖೆಗೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಡೆತ್‌ನೋಟ್‌ನಲ್ಲಿ ಸ್ಪಷ್ಟವಾಗಿ ಕಿರುಕುಳ ನೀಡಿದವರ ಹೆಸರು ಬರೆಯಲಾಗಿದೆ. ಆದರೆ, ಈವರೆಗೂ ಆರೋಪಿಗಳ ವಿಚಾರಣೆಯನ್ನೇ ಮಾಡಿಲ್ಲ. ತನಿಖಾಧಿಕಾರಿಗಳು ನಮ್ಮನ್ನು ಮಾತ್ರ ವಿಚಾರಣೆ ಮಾಡುತ್ತಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದಿರುವ ಬಗ್ಗೆ, ಶವಪರೀಕ್ಷೆಯ ವರದಿ ಬಗ್ಗೆ ಏನೂ ಮಾಹಿತಿ ಹೇಳುತ್ತಿಲ್ಲ. ಈ ಸರ್ಕಾರವನ್ನು ನಾವು ಹೇಗೆ ನಂಬಬೇಕು. ನಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಕೂಡಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯುತ್ತೇವೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿ.ಕೆ.ಶಿವಕುಮಾರ್
ಎಸ್‌ಐ ಕಲಬುರಗಿಗೆ ವರ್ಗ: ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಚಿನ್ ಕುಟುಂಬಸ್ಥರ ಆರೋಪದ ಹಿನ್ನೆಲೆಯಲ್ಲಿ ಧನ್ನೂರ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವಾರಾಧ್ಯ ಅವರನ್ನು ಕಲಬುರಗಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೀದರ್‌ನ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಧನ್ನೂರ ಪೊಲೀಸರಿಂದ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಧನ್ನೂರ ಪೊಲೀಸ್ ಠಾಣೆಯಿಂದ ಕಲಬುರಗಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು ಕಲಬುರಗಿ ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸಿಸಲಾಗಿದೆ ಎಂದು ತಿಳಿದುಬಂದಿದೆ.