ಕೆ.ಆರ್.ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆನ್ನಲಾದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಡು ಹೋಬಳಿಯ ಹೊಸಹುಡ್ಯ ಗ್ರಾಮದ ವ್ಯಾಪ್ತಿಯ ಸರ್ವೆ ನಂ.1 ಮತ್ತು 2ರಲ್ಲಿನ 61 ಎಕರೆ 39 ಗುಂಟೆ ಅರಣ್ಯ ಜಮೀನು ಕುರಿತು ಜ.15ರಂದು ಜಂಟಿ ಸರ್ವೇ ನಡೆಸಲು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು (ಜ.02): ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆನ್ನಲಾದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಡು ಹೋಬಳಿಯ ಹೊಸಹುಡ್ಯ ಗ್ರಾಮದ ವ್ಯಾಪ್ತಿಯ ಸರ್ವೆ ನಂ.1 ಮತ್ತು 2ರಲ್ಲಿನ 61 ಎಕರೆ 39 ಗುಂಟೆ ಅರಣ್ಯ ಜಮೀನು ಕುರಿತು ಜ.15ರಂದು ಜಂಟಿ ಸರ್ವೇ ನಡೆಸಲು ಹೈಕೋರ್ಟ್ ಆದೇಶಿಸಿದೆ.
ಜಮೀನಿನ ಸರ್ವೇನಡೆಸಲು ರಚಿಸಲಾಗಿದ್ದ ಸಮಿತಿಯನ್ನು ಬದಲಾಯಿಸಿ ಬೆಂಗಳೂರು ಜಿಲ್ಲಾ ಪ್ರಾದೇಶಿಕ ಆಯುಕ್ತರು ನೀಡಿರುವ ಪತ್ರವನ್ನು ರದ್ದುಪಡಿಸಬೇಕು ಎಂದು ಕೋರಿ ಮತ್ತು ಕೆ.ಆರ್.ರಮೇಶ್ ಕುಮಾರ್ ಅವರು ಲಭ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಜಮೀನಿನ ಸರ್ವೇಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ರಾಯಲ್ಪಡು ಹೋಬಳಿ ನಿವಾಸಿ ಕೆ.ವಿ.ಶಿವಾರೆಡ್ಡಿ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರ ಪೀಠ, ವಿವಾದಿತ ಜಮೀನ ಕುರಿತು ಜ.15ರಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರು ಜಂಟಿಯಾಗಿ ಸರ್ವೇ ನಡೆಸಬೇಕು. ಈ ವೇಳೆ ಖುದ್ದು ಹಾಜರಿರಲು ಕೆ.ಆರ್. ರಮೇಶ್ ಕುಮಾರ್ ಅವರಿಗೆ ಕೋಲಾರ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಬೇಕು.
ಒಂದೊಮ್ಮೆ ಕೆ.ಆರ್.ರಮೇಶ್ ಕುಮಾರ್ ಅವರಾಗಲಿ ಅಥವಾ ಅವರ ಪ್ರತಿನಿಧಿಯಾಗಲಿ ಹಾಜರಾಗದಿದ್ದರೆ ಸರ್ವೇ ಮುಂದುರಿಸಬೇಕು. ಆಗ ರಮೇಶ್ ಕುಮಾರ್ ಯಾವುದೇ ಹಕ್ಕನ್ನು ಕ್ಷೇಮು ಮಾಡುವಂತಿಲ್ಲ ಹಾಗೂ ಸರ್ವೇ ಯನ್ನು ಪ್ರಶ್ನಿಸುವಂತಿಲ್ಲ. ಜಂಟಿ ಸರ್ವೇ ವರದಿಯನ್ನು ಜ.30ರಂದು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಸೂಚಿಸಿದೆ. ಜಮೀನು ಕುರಿತು ಸರ್ವೇ ನಡೆಸಲು 2010ರಲ್ಲಿ ಹೈಕೋರ್ಟ್ ಆದೇಶಿಸಿದೆ. ಆ ಆದೇಶ ಹೊರಬಿದ್ದು 14 ವರ್ಷ ಕಳೆದರೂ ಅರಣ್ಯ ಜಮೀನಿನ ಸರ್ವೇಯನ್ನು ನಡೆಸಿಲ್ಲ. ಜಿಲ್ಲಾ ಪ್ರಾದೇಶಿಕ ಆಯುಕ್ತರು ಸರ್ವೇ ನಡೆಸಬೇಕಿದ್ದ ಸಮಿತಿ ಬದಲಾವಣೆ ಮಾಡಿದ್ದಾರೆ.
ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತೆ, ಯಾಕೆ ಸೋತೆ ಅಂದ್ರೆ ನಂಬಿಕೆ ದ್ರೋಹ: ರಮೇಶ್ ಕುಮಾರ್
ಇದು ಪ್ರಕರಣ ಸಂಬಂಧ ಹೈಕೋರ್ಟ್ ಹೊರಡಿಸಿರುವ ಆದೇಶದ ಉಲ್ಲಂಘನೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದೆ. ಹಾಗೆಯೇ,ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಜಿಲ್ಲಾ ಪ್ರಾದೇ ಶಿಕ ಆಯುಕ್ತರು, ಬೆಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಮತ್ತು ಕೋಲಾರ ಕೆ.ಆರ್. ರಮೇಶ್ ಕುಮಾರ್ ಅವರಿಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ.