
ಗಿರೀಶ್ ಮಾದೇನಹಳ್ಳಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣ ಸಂಬಂಧ ಉತ್ತರ ಪತ್ರಿಕೆ ತಿದ್ದುಪಡಿ (ಒಎಂಆರ್ ಶೀಟ್) ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯಗಳ ಬಳಿಕ ಈಗ ಆಯೋಗದ ಕೆಲ ಸದಸ್ಯರ ‘ಸರ್ಕಾರಿ ಹುದ್ದೆ ಮಾರಾಟದ ‘ಹೊಸ ಮಾದರಿ’ಯನ್ನು (ಮೋಡಸ್) ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಯಲುಗೊಳಿಸಿದ್ದಾರೆ.
ಕೆಪಿಎಸ್‌ಸಿ ಸದಸ್ಯರ ‘ಸರ್ಕಾರಿ ಹುದ್ದೆ’ ಮಾರಾಟ ಡೀಲ್ ಬಗ್ಗೆ ಇ.ಡಿ. ಮುಂದೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಬಾಯ್ಬಿಟ್ಟಿದ್ದು, ಪಶುವೈದ್ಯಾಧಿಕಾರಿಗಳ ಹುದ್ದೆ ಮಾತ್ರವಲ್ಲದೆ ಕಳೆದ ಎರಡು ವರ್ಷಗಳಲ್ಲಿ ಆಯೋಗ ನಡೆಸಿದ 13 ನೇಮಕಾತಿಗಳಲ್ಲಿ ಆ ಸದಸ್ಯರಿಂದ ಹುದ್ದೆಗಳು ಮಾರಾಟವಾಗಿವೆ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಈಗಾಗಲೇ ಇ.ಡಿ. ನಿಗಾದಲ್ಲಿದ್ದ ಸದಸ್ಯರಿಗೆ ಮತ್ತಷ್ಟು ಆತಂಕ ಎದುರಾಗಿದೆ ಎಂದು ತಿಳಿದು ಬಂದಿದೆ.
ಕೆಪಿಎಸ್‌ಸಿ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರ ‘ಅರ್ಹತಾ ಪಟ್ಟಿ’ ಪಡೆದು ಹುದ್ದೆ ಆಯ್ಕೆ ಪಟ್ಟಿಗೂ ಮುನ್ನ ಅಭ್ಯರ್ಥಿಗಳ ಜತೆ ಆಯೋಗದ ಕೆಲ ಸದಸ್ಯರು ಡೀಲ್ ಮಾಡುತ್ತಿದ್ದರು. ಡೀಲ್ ಕುದುರಿಸಿಕೊಂಡವರು ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದು ಉದ್ಯೋಗಸ್ಥರಾಗುತ್ತಿದ್ದರು, ಹುದ್ದೆಗೆ ಅನುಸಾರವಾಗಿ ಕೋಟ್ಯಂತರ ರು. ವಹಿವಾಟು ನಡೆದಿದೆ. ಈ ಹಣದ ಮೂಲಗಳನ್ನು ಇ.ಡಿ. ಜಾಲಾಡುತ್ತಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಪಶುವೈದ್ಯರ ನೇಮಕಾತಿಯಲ್ಲಿ ಪ್ರಶ್ನೆಗಳ ಸೋರಿಕೆಯಾಗಿರುವ ಬಗ್ಗೆ ಇ.ಡಿ ಹಾಗೂ ಸಿಐಡಿ ನಡೆಸಿದ ಪ್ರತ್ಯೇಕ ತನಿಖೆಯಲ್ಲಿ ಪತ್ತೆಯಾಗಿತ್ತು. ಹಾಗೆಯೇ ಕೆಪಿಎಸ್‌ಸಿ ಆಂತರಿಕ ವಿಚಾರಣೆಯಲ್ಲಿ ರಾಜ್ಯ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ಹುದ್ದೆಗಳ ನೇಮಕಾತಿಯಲ್ಲಿ ಉತ್ತರ ಪತ್ರಿಕೆ ತಿದ್ದುಪಡಿ ನಡೆದಿರುವುದು ಬಯಲಾಗಿತ್ತು. ಈಗ ಹೊಸದಾಗಿ ‘ಅರ್ಹತಾ ಪಟ್ಟಿ’ ಮೂಲಕ ಕೆಪಿಎಸ್‌ಸಿ ಸದಸ್ಯರು ಶಾಮೀಲಾಗಿರುವ ಗೋಲ್ಮಾಲ್ ಬೆಳಕಿಗೆ ಬಂದಿದೆ.
ಕೆಪಿಎಸ್‌ಸಿಯಲ್ಲಿ ನೇಮಕಾತಿ ಅಕ್ರಮಗಳ ತಡೆಗೆ ಪರೀಕ್ಷಾ ನಿಯಂತ್ರಕ ಹುದ್ದೆಯನ್ನು ಸರ್ಕಾರ ಸೃಷ್ಟಿಸಿತು. ನನ್ನನ್ನು ಆ ಹುದ್ದೆಗೆ ಸರ್ಕಾರ ನೇಮಿಸಿತು. ಎರಡು ವರ್ಷಗಳ ಅವಧಿಯಲ್ಲಿ ಕೆಎಎಸ್ ಅಧಿಕಾರಿಗಳು, ಸಾರಿಗೆ ಇಲಾಖೆ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್, ಆರೋಗ್ಯ ಇಲಾಖೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯಕ ಎಂಜಿನಿಯರ್ ಹಾಗೂ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆ ಪಶುವೈದ್ಯಾಧಿಕಾರಿಗಳ ಹುದ್ದೆ ಸೇರಿ ಒಟ್ಟು 13 ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿದ್ದೇನೆ ಎಂದು ಇ.ಡಿ. ವಿಚಾರಣೆ ವೇಳೆ ಜ್ಞಾನೇಂದ್ರ ಗಂಗ್ವಾರ್ ಹೇಳಿದ್ದಾರೆ ಎನ್ನಲಾಗಿದೆ.
ಪ್ರತಿ ನೇಮಕಾತಿಯ ಲಿಖಿತ ಪರೀಕ್ಷೆಯ ಮೌಲ್ಯಮಾಪನೆ ಮುಗಿದ ಬಳಿಕ ನನ್ನನ್ನು ಕೆಲ ಆಯೋಗದ ಸದಸ್ಯರು ಭೇಟಿಯಾಗುತ್ತಿದ್ದರು. ಆಗ ನನ್ನಿಂದ ಅರ್ಹತಾ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಹೆಸರನ್ನು ಸದಸ್ಯರು ಪಡೆಯುತ್ತಿದ್ದರು. ತರುವಾಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೂ ಮುನ್ನ ಕೆಲ ಅಭ್ಯರ್ಥಿಗಳ ಜತೆ ಮಾತುಕತೆ ನಡೆಸಿ, ಅಂತಿಮ ಪಟ್ಟಿ ಅಖೈರುಗೊಳಿಸುತ್ತಿದ್ದರು ಎಂದು ಆಯೋಗದ ಮಾಜಿ ಪರೀಕ್ಷಾ ನಿಯಂತ್ರಕ ಸ್ಫೋಟಕ ಹೇಳಿಕೆ ನೀಡಿರುವುದು ಗೊತ್ತಾಗಿದೆ.
ಅರ್ಹತೆ-ಆಯ್ಕೆ ಪಟ್ಟಿ ಹೇಗೆ?
ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ಅರ್ಹತಾ ಪಟ್ಟಿಯನ್ನು ಆಯೋಗ ಸಿದ್ದಪಡಿಸುತ್ತಿತ್ತು. ಬಳಿಕ ಅದರಲ್ಲಿ ಅತ್ಯುತ್ತಮ ಅಂಕ ಪಡೆದವರ ಹೆಸರನ್ನು ‘ಆಯ್ಕೆ ಪಟ್ಟಿ’ಯಲ್ಲಿ ಬಹಿರಂಗಪಡಿಸಲಾಗುತ್ತಿತ್ತು. ಈ ಎರಡು ಪಟ್ಟಿ ಪ್ರಕಟಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಅರ್ಹತಾ ಪಟ್ಟಿಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ವಿವರವನ್ನು ಆಯೋಗ ಬಹಿರಂಗಪಡಿಸದೆ ಗೌಪ್ಯವಾಗಿಡುತ್ತಿತ್ತು. ಇದು ಅಕ್ರಮಕ್ಕೆ ಕಾರಣವಾಗಿದೆ ಎನ್ನಲಾಗಿದೆ.
400 ಪಶುವೈದ್ಯರ ನೇಮಕಾತಿಗೆ ಕೆಪಿಎಸ್‌ಸಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ 600 ಅಭ್ಯರ್ಥಿಗಳು ಅರ್ಹತಾ ಪಟ್ಟಿಯಲ್ಲಿದ್ದರು. ಆದರೆ ಅಂತಿಮ ಆಯ್ಕೆ ಪಟ್ಟಿಗೆ ಅವರಲ್ಲಿ 329 ಜನ ಆಯ್ಕೆಯಾಗಿದ್ದರು. ಹೀಗಾಗಿ ಅರ್ಹತಾ ಪಟ್ಟಿಯಲ್ಲಿದ್ದವರ ಜತೆ ಕೆಪಿಎಸ್‌ಸಿ ಕೆಲ ಸದಸ್ಯರು ‘ಡೀಲ್’ ನಡೆಸುತ್ತಿದ್ದರು ಎಂದು ಮೂಲಗಳು ಹೇಳಿವೆ.
ಕೆಪಿಎಸ್‌ಸಿ ಅಧಿಕಾರಿ-ಸಿಬ್ಬಂದಿ ಸಾಕ್ಷಿದಾರರು
ನೇಮಕಾತಿ ಹಗರಣ ಸಂಬಂಧ ಮಾಜಿ ಕಾರ್ಯದರ್ಶಿ ಸೇರಿ ಆಯೋಗದ ಕೆಲ ಅಧಿಕಾರಿ-ಸಿಬ್ಬಂದಿಯನ್ನು ಇ.ಡಿ ಸಾಕ್ಷಿದಾರರನ್ನಾಗಿ ಪರಿಗಣಿಸಿದೆ. ನೇಮಕಾತಿ ಪ್ರಕ್ರಿಯೆ ವೇಳೆ ‘ಅರ್ಹತಾ’ ಹಾಗೂ ‘ಆಯ್ಕೆ’ ಪಟ್ಟಿ ತಯಾರಿಕೆಯಲ್ಲಿ ಮಾಜಿ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಪಾತ್ರವಹಿಸಿದ್ದರು. ಹೀಗಾಗಿ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದು ಕೆಲ ಸದಸ್ಯರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ