
ಹುಬ್ಬಳ್ಳಿ: ಶನಿವಾರ ಬೆಂಗಳೂರಿನಿಂದ ಬೆಳಗಾವಿಗೆ ತೆರಳಬೇಕಿದ್ದು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು 2 ಗಂಟೆ ವಿಳಂಬವಾಗಿ ಪ್ರಯಾಣಿಕರು ಪರದಾಡಿದರು.
ಮಧ್ಯಾಹ್ನ 2.20ಕ್ಕೆ ಹೊರಡಬೇಕಿದ್ದ ರೈಲು ಸಂಜೆ 4.20ಕ್ಕೆ ಹೊರಟಿತು. ಆದರೆ, ಹೀಗೆ ರೈಲು ಎರಡು ತಾಸು ವಿಳಂಬ ಆಗುವ ಬಗ್ಗೆ ನಿಲ್ದಾಣದಲ್ಲಿ ಯಾವುದೇ ಮಾಹಿತಿ ಇಲ್ಲದೇ ಈ ರೈಲಿಗಾಗಿ ಕಾದು ನಿಂತಿದ್ದ ಪ್ರಯಾಣಿಕರು ಅಕ್ಷರಶಃ ಪರದಾಡಿದರು.
ರೈಲು ವಿಳಂವಾಗಿದ್ದಕ್ಕೆ ಮುಂಗಡ ಕಾಯ್ದಿರಿಸಿದ ಪ್ರಯಾಣಿಕರ ಮೊಬೈಲಿಗೆ ಸಂದೇಶ ಕಳಿಸಿ ಕೈ ತೊಳೆದುಕೊಂಡಿದ್ದ ರೈಲ್ವೆ ಸಿಬ್ಬಂದಿ, ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ತಿಳಿಸುವುದನ್ನೇ (ಅನೌನ್ಸ್) ಮರೆತದ್ದು, ಈ ಅವಘಡಕ್ಕೆ ಕಾರಣವಾಗಿತ್ತು.
ಯಾವುದೇ ರೈಲು ಬರುವ ಮತ್ತು ಹೊರಡುವ ಕುರಿತಂತೆ ಧ್ವನಿವರ್ಧಕದ ಮೂಲಕ ತಿಳಿಸಲಾಗುತ್ತಿದೆ. ಆದರೆ, ಈ ರೈಲು ವಿಷಯದಲ್ಲಿ ನಿಲ್ದಾಣದ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ರೈಲು ನಿಲ್ಲುವ ಪ್ಲಾಟ್ ಫಾರ್ಮ್-8ರಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದ್ದರಿಂದ ಧೂಳು ಆವರಿಸಿತ್ತು. ಜತೆಗೆ ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ಜಾಗವೂ ಇರಲಿಲ್ಲ. ಈ ಪ್ಲಾಟ್ ಫಾರ್ಮ್ ಬಳಿ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಶೌಚಾಲಯ, ನೆರಳು ಕೂಡ ಇಲ್ಲದ ಕಾರಣ ಪ್ರಯಾಣಿಕರು ಉರಿ ಬಿಸಿಲಿನಲ್ಲಿಯೇ ಕಾದು ನಿಂತರು.
ಕೊನೆಗೆ ಪ್ರಯಾಣಿಕರೊಬ್ಬರು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿ, ಇಲ್ಲಿನ ಅವ್ಯಸ್ಥೆ ಅರುಹಿದ ಬಳಿಕ ನಿಲ್ದಾಣದ ಧ್ವನಿವರ್ಧಕದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಡುವ ವಂದೇ ಭಾರತ್ ರೈಲು (ರೈಲು ನಂ. 26752) ಎರಡು ತಾಸು ವಿಳಂಬವಾಗಿ ಹೊರಡಲಿದೆ. ಅನಾನುಕೂಲಕ್ಕೆ ವಿಷಾದಿಸುತ್ತೇವೆ.... ಎನ್ನುವ ಶುಷ್ಕ ಘೋಷಣೆ ಮೊಳಗಿತು.
ಕಾರವಾರದ ಕೃಷ್ಣಾ ನಾಯಕ ವೃದ್ಧ ದಂಪತಿ ಟ್ರಾಫಿಕ್ ಕಿರಿಕಿರಿ ಬೇಡ ಎಂಬ ಕಾರಣಕ್ಕೆ ನಿಗದಿತ ಸಮಯಕ್ಕೆ ಒಂದು ತಾಸು ಮುಂಚಿತ ನಿಲ್ದಾಣಕ್ಕೆ ಬಂದು ಮೂರು ತಾಸು ಕಾದು ಕುಳಿತು ಹೈರಾಣಾಗಿದ್ದರು. ಎರಡು ದೊಡ್ಡದಾದ ಬ್ಯಾಗ್ ತಂದಿದ್ದ ಅವರು ಅವುಗಳನ್ನು ಹೊತ್ತುಕೊಂಡು ಹೊರಗೆ ಹೋಗಲಾಗದೆ, ಅಲ್ಲಿಯೇ ಇದ್ದು ನೈಸರ್ಗಿಕ ಕರೆಯ ಬಾಧೆ ತಾಳಿಕೊಳ್ಳಲಾಗದೆ ಚಡಪಡಿಸುತ್ತಿದ್ದ ಸ್ಥಿತಿ ನಿಜಕ್ಕೂ ಮರುಕ ಹುಟ್ಟಿಸುವಂತಿತ್ತು. ತಾಳ್ಮೆ ಕಳೆದುಕೊಂಡ ಅವರು ಅಲ್ಲಿ ಕಾಣುವ ರೈಲು ಸಿಬ್ಬಂದಿಯನ್ನು ವಾಚಾಮಗೋಚರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರ ಆಕ್ರೋಶಕ್ಕೆ ಅಲ್ಲಿದ್ದ ಪ್ರಯಾಣಿಕರೂ ದನಿಗೂಡಿಸುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ