
ಬೆಂಗಳೂರು(ಡಿ.10): 2019ರ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ IPS ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ರದ್ದುಗೊಳಿಸಿದ್ದು ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಅಲೋಕ್ ಕುಮಾರ್‌ಗೆ ಎಡಿಜಿಪಿಯಿಂದ ಡಿಜಿಪಿಯಾಗಿ ಬಡ್ತಿ ನೀಡಿದೆ.
ಕಾರಾಗೃಹ ಇಲಾಖೆಯ ಡಿಜಿಪಿಯಾಗಿ ಅಲೋಕ್ ಕುಮಾರ್ ನೇಮಕವಾಗಿರುವ ಹಿನ್ನೆಲೆ, ಕಾರಾಗೃಹ ಇಲಾಖೆಯ ಎಡಿಜಿಪಿ ಆಗಿದ್ದ ಬಿ. ದಯಾನಂದ್ ಅವರನ್ನು ಪೊಲೀಸ್ ತರಬೇತಿ ಇಲಾಖೆಯ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಅಲೋಕ್ ಕುಮಾರ್ ಅವರ ಬಡ್ತಿ ಆದೇಶದ ಹಿಂದಿರುವ ದೊಡ್ಡ ಹಿನ್ನೆಲೆ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತಾದ ಕಾನೂನು ಹೋರಾಟವಾಗಿದೆ. 2019 ರಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಿ 'ಬಿ ರಿಪೋರ್ಟ್' ಸಲ್ಲಿಸಿತ್ತು. ಆದರೆ, 2025ರ ಮೇ ತಿಂಗಳಲ್ಲಿ ರಾಜ್ಯ ಸರ್ಕಾರವು ಅಲೋಕ್ ಕುಮಾರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿತ್ತು. ಈ ಅವಧಿಯಲ್ಲಿ ಅವರು ನಗರ ಪೊಲೀಸ್ ಆಯುಕ್ತರಾಗಿದ್ದರು.
ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಕೇಂದ್ರೀಯ ಆಡಳಿತ ನ್ಯಾಯಮಂಡಳಿ (CAT) ಮೊರೆ ಹೋಗಿದ್ದರು. ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ವಾದಿಸಿದ್ದ ಅಲೋಕ್ ಕುಮಾರ್ ಪರವಾಗಿ ಸಿಎಟಿ ತೀರ್ಪು ನೀಡಿತ್ತು.
ಸಿಎಟಿ ನ್ಯಾಯಮಂಡಳಿಯು ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ರದ್ದುಗೊಳಿಸಿತ್ತು ಮತ್ತು ಅಲೋಕ್ ಕುಮಾರ್ ಅವರಿಗೆ ಬಡ್ತಿ ಹಾಗೂ ಸವಲತ್ತುಗಳನ್ನು ನೀಡುವಂತೆ ಆದೇಶಿಸಿತ್ತು. ಸಿಎಟಿ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಹೈಕೋರ್ಟ್ ಕೂಡ ಸಿಎಟಿ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು. ನ್ಯಾಯಾಲಯಗಳ ಈ ತೀರ್ಪುಗಳ ಹಿನ್ನೆಲೆಯಲ್ಲಿ, ಸುಮಾರು 8 ತಿಂಗಳ ಕಾನೂನು ಹೋರಾಟದ ನಂತರ ರಾಜ್ಯ ಸರ್ಕಾರವು ಅಲೋಕ್ ಕುಮಾರ್ ಅವರಿಗೆ ಡಿಜಿಪಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ