
ಬೆಂಗಳೂರು (ಡಿ.10): ರಾಜ್ಯದಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಹುದ್ದೆಗಳು ಸೇರಿ ಬರೋಬ್ಬರಿ 2.84 ಲಕ್ಷ ಹುದ್ಎಗಳು ಖಾಲಿಯಿದೆ. ನಾಲ್ಕೈದು ವರ್ಷಗಳಿಂದ ಸರಿಯಾಗಿ ನೇಮಕಾತಿ ಮಾಡದೇ ನಿರುದ್ಯೋಗ ತಾಂಡವಾಡುವಂತೆ ಮಾಡಿದ ಸರ್ಕಾರ 24 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದನ್ನೇ ದೊಡ್ಡ ಹಿರಿಮೆ ಎನ್ನುವಂತೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಇನ್ನು ಜಗಳೂರಿನಲ್ಲಿ ಒಬ್ಬ ಯುವಕ ಸರ್ಕಾರಿ ಹುದ್ದೆಗೆ ಅಭ್ಯಾಸ ಮಾಡಿ, ನೇಮಕಾತಿಗಳು ಸರಿಯಾಗಿ ನಡೆಯದ ಹಿನ್ನೆಲೆಯಲ್ಲಿ ಬೇಸತ್ತು ಸಾವಿಗೆ ಶರಣಾಗಿದ್ದಾನೆ.
ರಾಜ್ಯದ ವಿವಿಧ ಸರ್ಕಾರಿ ಮತ್ತು ಅರೆ-ಸರ್ಕಾರಿ ಇಲಾಖೆಗಳಲ್ಲಿ ಒಟ್ಟಾರೆ 2,84,881 ಹುದ್ದೆಗಳು ಭರ್ತಿಗಾಗಿ ಬಾಕಿ ಉಳಿದಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಆದರೆ, ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿ, ಆರ್ಥಿಕ ಇಲಾಖೆಯು ಪ್ರಸ್ತುತ ಒಟ್ಟು 24,300 ಹುದ್ದೆಗಳನ್ನು (ಶೇ.09ರಷ್ಟು ಮಾತ್ರ) ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ. ಈ ಬಗ್ಗೆ ಸರ್ಕಾರಕ್ಕೆ ವಿಧಾನಸಭಾ ಅಧಿವೇಶನಕ್ಕೆ ಮುನ್ನ ವೇ ಪ್ರಶ್ನೆ ಕೇಳಿ ಮಾಹಿತಿ ಸಂಗ್ರಹಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಯುವ ಜನರಿಗೆ ಉದ್ಯೋಗ ನೀಡಲು ನೇಮಕಾತಿ ನಡೆಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನೂ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು.
ರಾಜ್ಯದಲ್ಲಿ ಸರ್ಕಾರವನ್ನೇ ನಡೆಸಲಾಗದಷ್ಟು ಹುದ್ದೆಗಳು ಖಾಲಿಯಿದ್ದು, ಶಿಕ್ಷಕರು ಇಲ್ಲದೇ ಶಾಲೆಗಳನ್ನು ಮುಚ್ಚುತ್ತಿದ್ದರೂ 5 ಗ್ಯಾರಂಟಿಗಳನ್ನು ಕೊಟ್ಟ ಸರ್ಕಾರ ರಾಜಕಾರಣ ಮಾಡುವುದರಲ್ಲಿ ಮುಳುಗಿ ಹೋಗಿದೆ. ಪ್ರತಿಬಾರಿ ನೇಮಕಾತಿ ಆರಂಭವಾಗುಷ್ಟರಲ್ಲಿ ಸಮೀಕ್ಷೆಗಳು, ತಿದ್ದುಪಡಿ, ವರದಿಗಳನ್ನು ಮುನ್ನೆಲೆಗೆ ತಂದು ಸರ್ಕಾರದ ನೇಮಕಾತಿಗಳನ್ನು ಮಾಡಲಾಗದಂತಹ ವಾತಾವರಣ ನಿರ್ಮಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದೆ. ಬೆಟ್ಟದಷ್ಟಿರುವ ಕೆಲಸದಲ್ಲಿ ಒಂದು ಕಲ್ಲನ್ನು ಮೇಲಕ್ಕೆತ್ತಿ ತನ್ನದೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳಲು ಪ್ರಚಾರ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ವಿರೋಧ ಪಕ್ಷಗಳ ನಾಯಕರು ಛೀಮಾರಿ ಹಾಕಿದ್ದನ್ನು ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ ನೋಡಿದ್ದು ಇದೇ ಮೊದಲೆನಿಸುತ್ತದೆ.
'ಆರ್ಥಿಕ ಇಲಾಖೆಯು ಒಟ್ಟು 24,300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಸರ್ಕಾರ ಉದ್ದೇಶ ಹೊಂದಿದೆಯೇ ಎಂಬ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಸಿಎಂ ಲಿಖಿತ ಉತ್ತರ ನೀಡಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ 79694, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37572, ಒಳಾಡಳಿತದಲ್ಲಿ 28188 ಹುದ್ದೆಗಳು ಗರಿಷ್ಠ ಪ್ರಮಾಣದಲ್ಲಿ ಖಾಲಿ ಇವೆ. ಈ ರೀತಿ 2025-26ನೇ ಸಾಲಿನಲ್ಲಿ ಒಟ್ಟು 43 ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಭರ್ತಿ ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದಿತವಾದ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ' ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ಪೋಸ್ಟರ್ ಬೇರೆ ಹಂಚಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ