
ಪುತ್ತೂರು (ಡಿ.10): ಆರ್‌ಎಸ್‌ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ದಾಖಲಾಗಿದ್ದ ದ್ವೇಷ ಭಾಷಣ (Hate Speech) ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಭಾಕರ್ ಭಟ್ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ.
ಕಲ್ಲಡ್ಕ ಪ್ರಭಾಕರ ಭಟ್ ಅವರು ಅ. 20 ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದರು. ಅವರ ಭಾಷಣವು ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಈಶ್ವರಿ ಪದ್ಮುಂಜ ಎಂಬುವವರು ನೀಡಿದ ದೂರಿನನ್ವಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಭಾಕರ ಭಟ್, ಕಾರ್ಯಕ್ರಮದ ಆಯೋಜಕರ ವಿರುದ್ಧ ಬಿಎನ್‌ಎಸ್ 79, 196, 299, 302 ಹಾಗೂ 3(5) ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಕಲ್ಲಡ್ಕ ಪ್ರಭಾಕರ ಭಟ್ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನಿರೀಕ್ಷಣಾ ಜಾಮೀನು ಅರ್ಜಿಯ ಆರಂಭಿಕ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಅರ್ಜಿಯ ಇತ್ಯರ್ಥದವರೆಗೆ ಪ್ರಭಾಕರ ಭಟ್ ಅವರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿತ್ತು. ಇದರ ಹಿನ್ನೆಲೆಯಲ್ಲಿ, ಪ್ರಭಾಕರ ಭಟ್ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ನೀಡಿದ ನೋಟಿಸ್ ಮೇರೆಗೆ ವಿಚಾರಣೆಗೆ ಹಾಜರಾಗಿದ್ದರು.
ಈ ಮಧ್ಯೆ, ಪ್ರಭಾಕರ ಭಟ್ ಅವರನ್ನು ಬಂಧಿಸಲು ಕಾರಣಗಳನ್ನು ನೀಡಿ ಪೊಲೀಸರು ನ್ಯಾಯಾಲಯಕ್ಕೆ ಜಾಮೀನಿಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ, ದೂರುದಾರರ ಪರ ವಕೀಲರು ಸಹ ವಾದ ಮಂಡಿಸಿದ್ದರು.
ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ಪುತ್ತೂರು ನ್ಯಾಯಾಲಯವು ಅಂತಿಮವಾಗಿ ಡಾ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. Hate Speech Case RSS Leader Kalladka Prabhakar Bhat Granted Anticipatory Bail by puttur court
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ