ಈಗ ಒಳಮೀಸಲಾತಿ ಅಸ್ತ್ರಕ್ಕೆ ಬಿಜೆಪಿ ಸರ್ಕಾರದಿಂದ ಸಿದ್ಧತೆ

By Kannadaprabha News  |  First Published Oct 9, 2022, 6:27 AM IST

ರಾಜ್ಯ ಬಿಜೆಪಿ ಸರ್ಕಾರವು ಮುಂದಿನ ಚುನಾವಣೆಗೆ ‘ಒಳ ಮೀಸಲಾತಿ ಅಸ್ತ್ರ’ ಪ್ರಯೋಗಿಸಲು ಸಜ್ಜಾಗಿದ್ದು, ಪರಿಶಿಷ್ಟ ಜಾತಿಯಲ್ಲಿನ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ವರದಿ ನೀಡಲು ಕಾನೂನು ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಮಹತ್ವದ ನಿರ್ಧಾರ ಕೈಗೊಂಡಿದೆ.


ಬೆಂಗಳೂರು (ಅ.09): ರಾಜ್ಯ ಬಿಜೆಪಿ ಸರ್ಕಾರವು ಮುಂದಿನ ಚುನಾವಣೆಗೆ ‘ಒಳ ಮೀಸಲಾತಿ ಅಸ್ತ್ರ’ ಪ್ರಯೋಗಿಸಲು ಸಜ್ಜಾಗಿದ್ದು, ಪರಿಶಿಷ್ಟ ಜಾತಿಯಲ್ಲಿನ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ವರದಿ ನೀಡಲು ಕಾನೂನು ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಶನಿವಾರದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸಮಿತಿಯು ನ್ಯಾ.ಸದಾಶಿವ ಆಯೋಗದ ಶಿಫಾರಸುಗಳ ಅನ್ವಯ ಒಳ ಮೀಸಲಾತಿ ಜಾರಿ ಕುರಿತು ವರದಿ ನೀಡುವ ಕುರಿತು ಸಮಿತಿ ರಚನೆ ಮಾಡಿದೆ. ಈ ವರದಿ ಆಧರಿಸಿ ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಮಾಡಲಿದ್ದು, ತನ್ಮೂಲಕ ಎಡಗೈ ಸಮುದಾಯದ ಎರಡೂವರೆ ದಶಕದ ಬೇಡಿಕೆಗೆ ಸ್ಪಂದಿಸುವ ಭರವಸೆ ಹುಟ್ಟಿಸಿದೆ.

Tap to resize

Latest Videos

2012ರಲ್ಲೇ ಸದಾಶಿವ ಆಯೋಗವು ಒಳ ಮೀಸಲಾತಿ ಕಲ್ಪಿಸುವ ಕುರಿತು ವರದಿ ಸಲ್ಲಿಸಿದ್ದರೂ ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿದ್ದ ಐದು ವರ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಎಡಗೈ ಸಮುದಾಯದವರನ್ನು ಕೇವಲ ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ನ್ಯಾಯ ಒದಗಿಸಿಲ್ಲ. ನಾವು ಒಳ ಮೀಸಲಾತಿ ಒದಗಿಸಲು ಮುಂದಾಗಿದ್ದೇವೆ ಎಂಬ ಸಂದೇಶ ರವಾನಿಸಲು ಮುಂದಾಗಿದೆ.

ಮೀಸಲು, ಒಳಮೀಸಲು ಬಗ್ಗೆ ಶೀಘ್ರ ನಿರ್ಧರಿಸಿ: ಎಚ್‌ಡಿಕೆ

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಒಳ ಮೀಸಲಾತಿ ಕೊಡಬೇಕು ಎಂದು ಸದಾಶಿವ ಆಯೋಗ ಶಿಫಾರಸು ಮಾಡಿದೆ. ಅದನ್ನು ನಾಗಮೋಹನ್‌ದಾಸ್‌ ಆಯೋಗವೂ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಎಸ್ಸಿ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಬಗ್ಗೆ ಕಾನೂನು ಸಚಿವರ ನೇತೃತ್ವದ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಸಮಿತಿಯು ವರದಿ ನೀಡಿದ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಅದರ ಪ್ರಕಾರ ಸರ್ಕಾರ ಮುಂದೆ ಸೂಕ್ತ ನಿರ್ಧಾರ ಮಾಡಲಿದೆ ಎಂದು ಹೇಳಿದರು.

ಸದಾಶಿವ ಆಯೋಗ ವರದಿ ಸಲ್ಲಿಸಿ 10 ವರ್ಷ: ಎಡಗೈ (ಮಾದಿಗ) ಸಂಬಂಧಿತ ಜಾತಿಗಳ ಒತ್ತಡಕ್ಕೆ ಮಣಿದು ಎಸ್‌.ಎಂ.ಕೃಷ್ಣ ಸರ್ಕಾರ ಒಳ ಮೀಸಲಾತಿಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ 2005ರಲ್ಲಿ ಧರ್ಮಸಿಂಗ್‌ ನೇತೃತ್ವದ ಸಮ್ಮಿಶ್ರ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗ ರಚಿಸಿತ್ತು. ವರದಿ ನೀಡಲು ಬರೋಬ್ಬರಿ ಏಳು ವರ್ಷ ಸಮಯಾವಕಾಶ ತೆಗೆದುಕೊಂಡ ಆಯೋಗವು 2012ರ ಜೂ.15ರಂದು ಆಗಿನ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ ಅವರಿಗೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆಯಾಗಿ ಹತ್ತು ವರ್ಷ ಕಳೆದರೂ ಯಾವುದೇ ಕ್ರಮ ಆಗಿಲ್ಲ.

ಆಯೋಗದ ವರದಿಯಲ್ಲೇನಿದೆ: ಆಯೋಗದ ವರದಿಯನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಖುದ್ದು ಜೆ.ಸಿ.ಮಾಧುಸ್ವಾಮಿ ಅವರೂ ಇದನ್ನೇ ಹೇಳಿದ್ದು, ವರದಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನನ್ನ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಇನ್ನಷ್ಟೇ ವರದಿ ನೋಡಬೇಕಿದೆ ಎಂದಿದ್ದಾರೆ.

ಆದರೆ, 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಎ.ಜೆ.ಸದಾಶಿವ ಅವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಎಸ್ಸಿಯ 101 ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗಿದೆ ಎಂದಿದ್ದರು. ಈ ಮೀಸಲಾತಿಯಲ್ಲಿ ಎಡಗೈ ಸಂಬಂಧಿತ ಜಾತಿಗಳಿಗೆ ಶೇ.6, ಬಲಗೈ ಸಂಬಂಧಿತ ಸ್ಪೃಶ್ಯ ಜಾತಿಗಳಿಗೆ ಶೇ.5, ಇತರೆ ಸ್ಪೃಶ್ಯ ಜಾತಿಗಳಿಗೆ ಶೇ.3 ಹಾಗೂ ಇತರೆ ಪರಿಶಿಷ್ಟಜಾತಿಗಳಿಗೆ ಶೇ.1ರಷ್ಟುಮೀಸಲಾತಿ ಹಂಚಬಹುದು ಎಂದು ವರದಿಯಲ್ಲಿ ತಿಳಿಸಿರುವುದಾಗಿ ಮಾಹಿತಿ ನೀಡಿದ್ದರು.

ಏನಿದು ಒಳ ಮೀಸಲಾತಿ?: ಪರಿಶಿಷ್ಟಜಾತಿಗಳಿಗೆ ಹಾಲಿ ಇರುವ ಶೇ.15ರಷ್ಟು ಮೀಸಲಾತಿಯಲ್ಲಿ ಬಹುತೇಕ ಮೀಸಲಾತಿಯ ಉಪಯೋಗವನ್ನು ಬಲಗೈ ಸಮುದಾಯಗಳೇ ಪಡೆದುಕೊಳ್ಳುತ್ತಿವೆ. ಬಲಗೈ ಗುಂಪಿನ ಜತೆ ಸ್ಪರ್ಧಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಸ್ಸಿ ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಬೇಕು ಎಂದು ಎರಡೂವರೆ ದಶಕಗಳಿಂದ ಎಡಗೈ ಸಮುದಾಯಗಳು ಹೋರಾಟ ನಡೆಸುತ್ತಿವೆ. ಒಳ ಮೀಸಲಾತಿ ಕಲ್ಪಿಸಿದರೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ ಎಡಗೈ ಸಮುದಾಯಗಳಿಗೆ ಅವಕಾಶಗಳು ಸಿಗಲಿವೆ. ಇದರಿಂದ ಮೀಸಲಾತಿ ಪರಿಕಲ್ಪನೆಗೆ ಅರ್ಥ ಬರಲಿದೆ ಎಂಬುದು ಅವರ ವಾದ.

ಏನಿದು ಬೇಡಿಕೆ?
- ಪರಿಶಿಷ್ಟಜಾತಿ ಸಮುದಾಯಕ್ಕೆ ಹಾಲಿ 15% ಮೀಸಲಾತಿ ಇದೆ
- ಇದರಲ್ಲಿ ಸಿಂಹಪಾಲು ಬಲಗೈ ಸಮುದಾಯಗಳ ಪಾಲಾಗಿವೆ
- ಎಡಗೈ ಬಣಕ್ಕೂ ಮೀಸಲು ಸಿಗಲು ಒಳಮೀಸಲಾತಿ ಬೇಡಿಕೆ
- ಸುಮಾರು ಎರಡೂವರೆ ದಶಕಗಳಿಂದ ಇತ್ಯರ್ಥವಾಗದೆ ಬಾಕಿ

ವರದಿಯಲ್ಲೇನಿದೆ?
- ಎಸ್‌ಸಿಯ 101 ಜಾತಿಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ ಮೀಸಲಾತಿ ನೀಡಬಹುದು
- ಎಡಗೈಗೆ ಶೇ.6, ಬಲಗೈ ಸ್ಪೃಶ್ಯರಿಗೆ ಶೇ.5, ಇತರೆ ಸ್ಪೃಶ್ಯರಿಗೆ ಶೇ.3, ಎಸ್ಸಿ ಇತರೆಗೆ ಶೇ.1
- ತಾವು ಸಲ್ಲಿಸಿದ ವರದಿಯಲ್ಲಿ ಶಿಫಾರಸು ಮಾಡಿದ್ದಾಗಿ 2012ರಲ್ಲಿ ನ್ಯಾ.ಸದಾಶಿವ ಹೇಳಿಕೆ

ಮೀಸಲು ಹೆಚ್ಚಳದಿಂದ ಯಾರಿಗೂ ಅನ್ಯಾಯ ಆಗಲ್ಲ: ಸಿಎಂ ಬೊಮ್ಮಾಯಿ

ಸರ್ವಪಕ್ಷ ನಿರ್ಧಾರದಂತೆ ಎಸ್ಸಿ, ಎಸ್ಟಿಮೀಸಲು ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ಪಡೆದಿದೆ. ಶೀಘ್ರ ಆದೇಶ ಹೊರಡಿಸಲಾಗುವುದು. ಅಲ್ಲದೆ, ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ನಮ್ಮದು ನುಡಿದಂತೆ ನಡೆದ ಸರ್ಕಾರ. ವಾಲ್ಮೀಕಿ ಸೇರಿ ಎಸ್ಸಿ, ಎಸ್ಟಿಸಮುದಾಯದವರಿಗೆ ಇದು ಐತಿಹಾಸಿಕ ಕ್ಷಣ. ಮೀಸಲಾತಿ ಹೆಚ್ಚಳ ಸಂಬಂಧ ನನ್ನನ್ನು ಗೇಲಿ ಮಾಡಿದವರಿಗೆ ಇಂದು ಉತ್ತರ ದೊರೆತಿದೆ.
- ಬಿ.ಶ್ರೀರಾಮುಲು, ಸಾರಿಗೆ ಸಚಿವ

click me!