
ಬೆಂಗಳೂರ (ನ.16) : ಮೈಸೂರು ರಸ್ತೆಯಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪ ಪಾದಚಾರಿಗಳು ಸುಗಮವಾಗಿ ರಸ್ತೆ ದಾಟುವ ಉದ್ದೇಶದಿಂದ ಅಳವಡಿಸುತ್ತಿರುವ ಸ್ಕೈವಾಕ್‌ನ ಕಾಮಗಾರಿಯನ್ನು (ಬಿಎಂಟಿಸಿ ಸಬ್‌ವೇ ಪ್ರವೇಶ ದ್ವಾರ) ಪೂರ್ಣಗೊಳಿಸಲು ಹೈಕೋರ್ಟ್ ಅಸ್ತು ಎಂದಿದೆ. ಸ್ಕೈವಾಕ್ ನಿರ್ಮಾಣಕ್ಕೆ ನೀಡಿದ್ದ ಗುತ್ತಿಗೆ ರದ್ದುಪಡಿಸಿದ್ದ ಬಿಬಿಎಂಪಿಯ ಕ್ರಮವನ್ನು ವಜಾಗೊಳಿಸಿದ್ದ ಹೈಕೋರ್ಚ್ ಏಕ ಸದಸ್ಯ ಪೀಠ, ನಾಲ್ಕು ತಿಂಗಳಲ್ಲಿ ಸ್ಕೈವಾಕ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರ ಕಂಪನಿ ಮೆ.ಶಕ್ತಿ ಡೆವಲಪರ್ಸ್ ಲಿಮಿಟೆಡ್‌ಗೆ 2022ರ ಜೂ.17ರಂದು ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಬಿಬಿಎಂಪಿ ಮೇಲ್ಮನವಿ ಸಲ್ಲಿಸಿತ್ತು.
ಈ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ಕಾಮಗಾರಿ ಪೂರ್ಣಗೊಳಿಸಲು ಮೆ.ಶಕ್ತಿ ಡೆವಲಪರ್ಸ್ ಲಿಮಿಟೆಡ್‌ಗೆ ಅನುಮತಿ ನೀಡಿದೆ.
Bengaluru: 100 ಸ್ಕೈವಾಕ್ ನಿರ್ಮಾಣಕ್ಕೆ ಬಿಬಿಎಂಪಿ ಯೋಜನೆ
ನಿಗದಿತ ಅವಧಿಯಲ್ಲಿ ಸ್ಕೈವಾಕ್ ಕಾಮಗಾರಿ ಪೂರ್ಣಗೊಳಿಸಿಲ್ಲವೆಂದು ಗುತ್ತಿಗೆಯನ್ನು ಬಿಬಿಎಂಪಿ ರದ್ದುಪಡಿಸಿದೆ. ವಾಸ್ತವವಾಗಿ ಸರ್ಕಾರಿ ಪ್ರಾಧಿಕಾರಿಗಳಿಂದಲೇ ಕಾಮಗಾರಿ ವಿಳಂಬವಾಗಿದೆ. ಈ ಕಾರಣ ಪರಿಗಣಿಸಿಯೇ ಏಕ ಸದಸ್ಯ ನ್ಯಾಯಪೀಠ ಸ್ಕೈವಾಕ್ ಅಳವಡಿಕೆಗೆ ಅನುಮತಿ ನೀಡಿದೆ. ಹೈಕೋರ್ಚ್ ಆದೇಶದ ನಂತರ ಗುತ್ತಿಗೆದಾರ ಕಂಪನಿ ಕಾಮಗಾರಿ ಆರಂಭಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಈಗಾಗಲೇ ಶೇ.80ರಷ್ಟುಕಾಮಗಾರಿ ಪೂರ್ಣಗೊಳಿಸಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಲಿಫ್‌್ಟಅಳವಡಿಕೆ ಬಾಕಿಯಿದ್ದು, ಅದರ ಪರಿಶೀಲನೆ ನಡೆಸಲು ಬಿಬಿಎಂಪಿಗೆ ಕಂಪನಿ ಪತ್ರ ಬರೆದಿದೆ. ಈ ಹಂತದಲ್ಲಿ ಸ್ಕೈವಾಕ್ ಅಳವಡಿಕೆಯನ್ನು ನಿಲ್ಲಿಸಬಾರದು. ಸ್ಕೈವಾಕ್ ಪೂರ್ಣಗೊಳಿಸಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿಯ ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ.
ಉಲ್ಟಾಹೊಡೆದ ಪಾಲಿಕೆಗೆ ಹೈಕೋರ್ಟ್ ಚಾಟಿ
ವಾಹನಗಳ ದಟ್ಟಣೆಯಿಂದ ಪಾದಚಾರಿಗಳು ಸುಲಭವಾಗಿ ಸಂಚರಿಸಲು ಬಿಬಿಎಂಪಿ, ಸ್ಯಾಟಲೈಟ್ ಬಸ್ ನಿಲ್ದಾಣದಿಂದ ರಮಣಿ ಟಿಂಬರ್ ಮಾರ್ಕ್ವರೆಗೆ ಮತ್ತು ಗಾಳಿ ಆಂಜನೇಯ ದೇವಸ್ಥಾನದ ಬಳಿ ಪ್ರತ್ಯೇಕ ಎರಡು ಸ್ಕೈವಾಕ್ ನಿರ್ಮಿಸಲು 2017ರಲ್ಲಿ ಗುತ್ತಿಗೆ ನೀಡಿತ್ತು. ಸ್ಯಾಟಲೈಟ್ ಬಸ್ ನಿಲ್ದಾಣ-ರಮಣಿ ಟಿಂಬರ್ ಮಾರ್ಕ್ ಸ್ಕೈವಾಕ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕೆಎಸ್‌ಆರ್‌ಟಿಸಿ ಮತ್ತು ಸಂಚಾರ ಪೊಲೀಸರು, ಬಿಎಂಟಿಸಿ ಸಬ್ ವೇ ಪ್ರವೇಶ ದ್ವಾರದ ಬಳಿ ಸ್ಕೈವಾಕ್ ಅಳವಡಿಕೆಗೆ 2018ರ ಸೆಪ್ಟೆಂಬರ್‌ನಲ್ಲಿ ಅನುಮತಿ ನೀಡಿದ್ದವು. ಅದಕ್ಕೆ ಬಿಬಿಬಿಎಂಪಿ ನಿರಾಕ್ಷೇಪಣಾ ಪತ್ರವನ್ನೂ ನೀಡಿತ್ತು.
Bengaluru: ಅಂಡರ್‌ಪಾಸ್, ಸ್ಕೈವಾಕ್‌ಗಳ ನಿರ್ವಹಣೆ ಮರೆತ BBMP
2019ರ ಸೆಪ್ಟೆಂಬರ್‌ನಲ್ಲಿ ಗುತ್ತಿಗೆ ರದ್ದುಪಡಿಸಿದ್ದ ಬಿಬಿಎಂಪಿ, ಗಾಳಿ ಆಂಜನೇಯ ಬಳಿ ಸ್ಕೈವಾಕ್ ಇರುವುದರಿಂದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಅಳವಡಿಕೆ ಬೇಡ ಎಂಬುದಾಗಿ ನ್ಯಾಯಾಲಯಕ್ಕೆ ತಿಳಿಸುವ ಮೂಲಕ ಮೊದಲು ಕೈಗೊಂಡ ನಿರ್ಧಾರಕ್ಕೆ ಬಿಬಿಎಂಪಿಯೇ ಉಲ್ಟಾಹೊಡೆದಿದೆ. ಈ ಧೋರಣೆಯನ್ನು ಒಪ್ಪಲಾಗದು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಕಠಿಣವಾಗಿ ನುಡಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ