ಕನ್ನಡ ನಾಡಿನ ಪ್ರತಿಷ್ಠೆಯ ವಿಐಎಸ್ಎಲ್ ಕಾರ್ಖಾನೆ ಪುನಾರಂಭ: ಸಂಸದ ರಾಘವೇಂದ್ರ ವಿಡಿಯೋ ಶೇರ್‌

By Sathish Kumar KHFirst Published Aug 28, 2023, 5:17 PM IST
Highlights

ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೈಗಾರಿಕಾ ಕ್ರಾಂತಿಗೆ ಕಾರಣವಾದ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾಗಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್‌) ಇಂದಿನಿಂದ ಉತ್ಪಾದನಾ ಕಾರ್ಯವನ್ನು ಪುನಾರಂಭಿಸಿದೆ.

ಶಿವಮೊಗ್ಗ (ಆ.28): ದೇಶದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕೈಗಾರಿಕಾ ಕ್ರಾಂತಿಗೆ ಕಾರಣವಾದ ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾಗಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್‌) ಇಂದಿನಿಂದ ಉತ್ಪಾದನಾ ಕಾರ್ಯವನ್ನು ಪುನಾರಂಭಿಸಿದೆ. ಕಾರ್ಖಾನೆಯ ಬಾರ್‌ಮಿಲ್‌ ಕಾರ್ಯಾರಂಭ ಮಾಡಿದ್ದು, ಸಂಸದ ಬಿ.ವೈ. ರಾಘವೇಂದ್ರ ಕಾರ್ಖಾನೆ ಕಾರ್ಯಾಚರಣೆಯ ವಿಡಿಯೋ ಹಂಚಿಕೊಂಡಿದ್ದಾರೆ.

ಕನ್ನಡ ನಾಡಿನ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಜಗತ್ತು ಕಂಡ ಶ್ರೇಷ್ಠ ತಂತ್ರಜ್ಞಾನಿ ಸರ್.ಎಂ. ವಿಶ್ವೇಶ್ವರಯ್ಯ ಅವರು ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿಸಿದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾಗಿದೆ. ಆದರೆ, ಸ್ವಾತಂತ್ರ್ಯ ನಂತರ ಈ ಕಾರ್ಖಾನೆಯನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ ವ್ಯಾಪ್ತಿಗೆ ಒಳಪಡಿಸಿಕೊಂಡಿತ್ತು. ಇತ್ತೀಚೆಗೆ ಕಾರ್ಖಾನೆ ನಷ್ಟದಲ್ಲಿದೆ ಎಂದು ಮುಚ್ಚಲು ಮುಂದಾಗಿತ್ತು. ಆದರೆ, ಶಿವಮೊಗ್ಗ ಜನತೆ ಹಾಗೂ ರಾಜಕೀಯ ನಾಯಕರ ಸತತ ಹೋರಾಟದ ಪ್ರತೀಕವಾಗಿ ಈಗ ಮತ್ತೊಮ್ಮೆ ವಿಐಎಸ್‌ಎಲ್‌ ಕಾರ್ಖಾನೆ ಉತ್ಪಾದನೆಯನ್ನು ಪುನಾರಂಭಿಸಿದೆ. ಇಂದು ಕಾರ್ಖಾನೆಯ ಬಾರ್‌ಮಿಲ್‌ ಕಾರ್ಯಾರಂಭ ಮಾಡಿದ್ದು, ಸಂಸದ ಬಿ.ವೈ. ರಾಘವೇಂದ್ರ ಕಾರ್ಖಾನೆ ಕಾರ್ಯಾಚರಣೆಯ ವಿಡಿಯೋ ಹಂಚಿಕೊಂಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಚಿಂತನೆ: ಸಚಿವ ಮಧು ಬಂಗಾರಪ್ಪ

ಆ.10ರಂದು ಬಾರ್‌ಮಿಲ್‌ ಉದ್ಘಾಟನೆ ಕಾರ್ಯಾರಂಭ ಆಗಬೇಕಿತ್ತು: ವಿಐಎಸ್ಎಲ್ ಬಾರ್ ಮಿಲ್ ಹಾಗೂ ಪ್ರೈಮರಿ ಮಿಲ್ ಆ.10ರಿಂದಲೇ ಕಾರ್ಯಾರಂಭ ಮಾಡಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದ ಮುಂದೂಡಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಇಂದಿನಿಂದ ಮರು ಆರಂಭಿಸಲಾಗಿದೆ. ವಿಶೇಷ ಪೂಜೆಯೊಂದಿಗೆ ಉತ್ಪಾದನೆ ಆರಂಭ ಮಾಡಲಾಗಿದ್ದು, ಅಧಿಕಾರಿಗಳು, ಕಾರ್ಮಿಕರು ಹಾಜರಿದ್ದು ಉತ್ಪಾದನೆ ವೀಕ್ಷಣೆ ಮಾಡಿದರು. ಇನ್ನು ಇತ್ತೀಚಿಗಷ್ಟೇ ಸೈಲ್ ನಿಂದ ರೈಲಿನಲ್ಲಿ ಬ್ಲೂಮ್‌ಗಳು ಬಂದಿದ್ದು, ಅವುಗಳನ್ನು ಅಳವಡಿಸಿ ಕಾರ್ಯಾರಂಭ ಮಾಡಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಸಂಸದ ರಾಘವೇಂದ್ರ: ಇನ್ನು ವಿಐಎಸ್‌ಎಲ್‌ ಕಾರ್ಖಾನೆ ಪುನಾರಂಭದ ಕುರಿತು ಮಾಹಿತಿ ಹಂಚಿಕೊಂಡಿರುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು, "ವಿಐಎಸ್ಎಲ್ ಮತ್ತೆ ಕೆಲಸ ಶುರು ಮಾಡಿರುವುದು ಎಲ್ಲ ಕಾರ್ಮಿಕರ ನಿರಂತರ ಪ್ರಾರ್ಥನೆ ಹಾಗೂ ಪ್ರಯತ್ನಕ್ಕೆ ಸಂದ ಫಲ. ಆ ಪ್ರಯತ್ನದಲ್ಲಿ ಭಾಗಿಯಾಗಿರುವ ಕಿಂಚಿತ್ ಸಂತೋಷ ಹಾಗೂ ಸಾರ್ಥಕ ಭಾವ ನನ್ನದು. ಸದ್ಯದಲ್ಲೇ ಈ ಹೆಮ್ಮೆಯ ಕಾರ್ಖಾನೆ ಪೂರ್ಣರೂಪದಲ್ಲಿ ಮತ್ತೆ ಹಿಂದಿನ ವೈಭವಕ್ಕೆ ಮರಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ, ಕಾರ್ಖಾನೆಯ ವಿಡಿಯೋ ಶೇರ್‌ ಮಾಡಿದ್ದಾರೆ.

ಭದ್ರಾವತಿಯಲ್ಲಿ ಮತ್ತೆ ಸುವರ್ಣಯುಗ ಆರಂಭ: ವಿಐಎಸ್‌ಎಲ್‌ ಬಾರ್‌ಮಿಲ್‌ ಆ.10ರಿಂದ ಶುರು

ಮೈಸೂರು ಐರನ್‌ ವರ್ಕ್ಸ್‌ ಎಂದು 1923ರಲ್ಲಿ ಕಾರ್ಯಾರಂಭ: ಕರ್ನಾಟಕದ ಭದ್ರಾವತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಪ್ಲಾಂಟ್ (VISL) ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ ಘಟಕವಾಗಿದೆ. ಇದು ಮಿಶ್ರಲೋಹದ ಉಕ್ಕುಗಳು ಮತ್ತು ಕಬ್ಬಿಣದ ಉತ್ಪಾದನೆಯಲ್ಲಿ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಈ ಮೂಲಕ ಭದ್ರಾವತಿ ನಗರವನ್ನು ಭಾರತದಲ್ಲಿಯೇ ಪ್ರಸಿದ್ಧಿಗೊಳಿಸಿದೆ. ಈ ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಅವರು 18 ಜನವರಿ 1923 ರಂದು ಮೈಸೂರು ಐರನ್ ವರ್ಕ್ಸ್ ಎಂದು ಪ್ರಾರಂಭಿಸಿದರು. ಇದು ಈಗ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ ವ್ಯಾಪ್ತಿಗೆ ಒಳಪಡುವ ಉಕ್ಕಿನ ಸ್ಥಾವರವಾಗಿದೆ.

ವಿಐಎಸ್ಎಲ್ ಮತ್ತೆ ಕೆಲಸ ಶುರು ಮಾಡಿರುವುದು ಎಲ್ಲ ಕಾರ್ಮಿಕರ ನಿರಂತರ ಪ್ರಾರ್ಥನೆ ಹಾಗೂ ಪ್ರಯತ್ನಕ್ಕೆ ಸಂದ ಫಲ. ಆ ಪ್ರಯತ್ನದಲ್ಲಿ ಭಾಗಿಯಾಗಿರುವ ಕಿಂಚಿತ್ ಸಂತೋಷ ಹಾಗೂ ಸಾರ್ಥಕ ಭಾವ ನನ್ನದು.

ಸದ್ಯದಲ್ಲೇ ಈ ಹೆಮ್ಮೆಯ ಕಾರ್ಖಾನೆ ಪೂರ್ಣರೂಪದಲ್ಲಿ ಮತ್ತೆ ಹಿಂದಿನ ವೈಭವಕ್ಕೆ ಮರಳುವ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಿರಂತರ. pic.twitter.com/EzqR7Fu3dc

— B Y Raghavendra (@BYRBJP)
click me!