* ಉಕ್ರೇನ್‌ನಲ್ಲಿ ಬೇರೆ ದೇಶದ ವಿದ್ಯಾರ್ಥಿಗಳು ಭಾರತದ ಭಾವುಟ ಹಿಡಿದು ರಕ್ಷಣೆ ಪಡೆಯುತ್ತಿದ್ರು
* ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮದ ವೇಣು ಹೇಳಿಕೆ
* ಉಕ್ರೇನ್ ನಿಂದ ವಾಪಸ್ ಬಂದಿರುವ ವೇಣು
ತುಮಕೂರು, (ಮಾ.06): ಭಾರತದ ತ್ರಿವರ್ಣ ಧ್ವಜ ಭಾರತೀಯರಿಗಷ್ಟೇ ಅಲ್ಲ ಪಾಕಿಸ್ತಾನ ಹಾಗೂ ತುರ್ಕೀಸ್ ಸೇರಿದಂತೆ ಇತರೆ ವಿದ್ಯಾರ್ಥಿಗಳ ಜೀವಕ್ಕೂ ರಕ್ಷಣೆ ನೀಡಿದೆ.
ಹೌದು...ರಷ್ಯಾ ಹಾಗೂ ಉಕ್ರೇನ್‌ನ ಯುದ್ಧದಲ್ಲಿ ಭಾರತದ ತ್ರಿವರ್ಣ ಧ್ವಜ ಹವಲರನ್ನ ಕಾಪಾಡಿದೆ. ಬೇರೆ ದೇಶದ ವಿದ್ಯಾರ್ಥಿಗಳು ಭಾರತದ ಧ್ವಜ ಹಿಡಿದು ರಕ್ಷಣೆ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಉಕ್ರೇನ್‌ನಿಂದ ಕರ್ನಾಟಕಕ್ಕೆ ವಾಪಸ್ ಆದ ತುಮಕೂರಿನ ವಿದ್ಯಾರ್ಥಿಯ ಮಾತು.
ಭಾರತೀಯರ ಜೊತೆ ಟರ್ಕಿ, ಪಾಕಿಸ್ತಾನಿ ವಿದ್ಯಾರ್ಥಿಗಳನ್ನೂ ರಕ್ಷಿಸಿದ ಭಾರತದ ರಾಷ್ಟ್ರಧ್ವಜ
ಉಕ್ರೇನ್ ನಿಂದ ವಾಪಸ್ ಬಂದ ವಿದ್ಯಾರ್ಥಿ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮದ ವೇಣು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಉಕ್ರೇನ್ ನಲ್ಲಿ ಬೇರೆ ದೇಶದ ವಿದ್ಯಾರ್ಥಿಗಳು ಭಾರತದ ಭಾವುಟ ಹಿಡಿದು ರಕ್ಷಣೆ ಪಡೆಯುತ್ತಿದ್ರು ಎಂದು ಹೇಳಿದರು.
ನಾನು ಕೀವ್ ನಗರದಲ್ಲಿ ಇದ್ದೆ. ಮೂರು ದಿನದ ಹಿಂದೆ ನಾನು ಭಾರತಕ್ಕೆ ವಾಪಸ್ ಬಂದೆ. ನಾಲ್ಕು ದಿನ ಯುದ್ದ ಪರಿಸ್ಥಿತಿ ನೋಡಿದೆ. ಹಂಗೇರಿ ಬಾರ್ಡರ್ ಮೂಲಕ ಭಾರತಕ್ಕೆ ಬಂದೆ ಎಂದರು.
24ನೇ ತಾರೀಕು ಮೊದಲ ಬಾಂಬ್ ಸ್ಫೋಟವಾಯ್ತು. ಯುದ್ಧಕ್ಕೂ ಮೊದಲು ಇಂಡಿಯನ್ ರಾಯಭಾರಿ ಕಚೇರಿಯಿಂದ ನಮಗೆ ಸಂದೇಶ ಬಂತು. ಯುದ್ಧ ಶುರುವಾಗುತ್ತೆ, ಇರುವವರು ಇರಬಹುದು, ಹೋಗುವವರು ಹೋಗಬಹುದು ಎಂಬ ಆದೇಶ ಬಂತು. ಆದರೆ ಕಾಲೇಜಿನಲ್ಲಿ ಕ್ಲಾಸ್ ನಡೆಯುತ್ತಿತ್ತು. ಆಬ್ಸೆಂಟ್ ಆದರೆ ದಂಡ ಕಟ್ಟಬೇಕಿತ್ತು, ಹಾಗಾಗಿ ನಾವು ಕ್ಲಾಸ್ ನಿಂದ ಹೊರಡಲಿಲ್ಲ ಎಂದು ತಿಳಿಸಿದರು.
ಕೊನೆ ಕ್ಷಣದಲ್ಲಿ ಹೊರಡಲು ಪ್ಲೈಟ್ ಬುಕ್ ಮಾಡಿದ್ವಿ. ಆದರೆ ವಿಮಾನ ನಿಲ್ದಾಣದಲ್ಲೇ ಬಾಂಬ್ ಬ್ಲಾಸ್ಟ್ ಆಯ್ತು. ಬಳಿಕ ಪ್ಲೈಟ್ ಬಂದ್ ಆಯ್ತು. ಬಳಿಕ ನಾವು ಬಂಕರ್‌ನಲ್ಲಿ ಉಳಿದುಕೊಂಡಿದ್ವಿ ಎಂದು ವೇಣು ಉಕ್ರೇನ್‌ನಲ್ಲಿ ಅನುಭವಿಸಿದ ಕಷ್ಟವನ್ನು ಬಿಚ್ಚಿಟ್ಟರು.
ಇಂಡಿಯನ್ ಗೌರ್ನಮೆಂಟ್ ಗೆ ಗಟ್ಸ್ ಇಲ್ಲ ಅಂತ ಮಾತನಾಡುವ ಯೋಗ್ಯತೆ ನಮಗಿಲ್ಲ. ಇಂಡಿಯನ್ ಎಂಬ ಗೌರವವಿದೆ ನಮಗೆ. ಸ್ವಲ್ಪ ಮಿಸ್ ಗೈಡ್ ಮಾಡಿದ್ರು. ಫೆ.25 ರಂದು ಬೇರೆ ದೇಶದವರು ಆಯಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ರು.
ಉಕ್ರೇನಿಂದ ಹೊರಡುವಂತೆ ಸ್ಪಷ್ಟವಾಗಿ ಸೂಚನೆ ನೀಡಿದರು. ಆದರೆ ಭಾರತ ಎಂಬೆಸಿಯಿಂದ ಸ್ಪಷ್ಟವಾದ ಸೂಚನೆ ಸಿಗಲಿಲ್ಲ.ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ರು. ಆದರೆ ಬಾರ್ಡರ್‌ಗೆ ಬಂದಾಗ ನಮಗೆ ತೊಂದರೆ ಆಗಲಿಲ್ಲ ಎಂದು ವೇಣು ಹೇಳಿದರು.
ನಾವೀರುವ ಜಾಗದಿಂದ ಬಾಡರ್ ಹೋಗುವವರೆಗೂ ಇಂಡಿಯನ್ ಎಂಬೇಸಿಯ ಹೆಲ್ಪ್ ಸಿಗಲಿಲ್ಲ. ಹೆಲ್ಪ್ ಮಾಡಬೇಕಿತ್ತು ಎಂಬ ಭಾವನೆ ನಮಗಿದೆ. ಬಾರ್ಡರ್ ದಾಟಿದ ಬಳಿಕ ಒಳ್ಳೆ ಹೆಲ್ಪ್ ಮಾಡಿದ್ರು., ಗೌರವ ನೀಡಿದ್ರು.
ನಮ್ಮ ಸ್ನೇಹಿತರು ಇನ್ನು ಅಲ್ಲೇ ಇದ್ದಾರೆ. ಅವರೇಲ್ಲರು ಬಾರ್ಡರ್‌ನಲ್ಲಿದ್ದಾರೆ. ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದ ಸ್ಪಂದನೆ ಉತ್ತಮವಾಗಿತ್ತು ನೈಜಿರಿಯನ್ಸ್, ಟರ್ಕಿಸ್, ಪಾಕಿಸ್ತಾನಿಯವರು ಇದ್ದಾರೆ. ಈ ದೇಶದ ವಿದ್ಯಾರ್ಥಿಗಳು ಉಕ್ರೇನ್ ನಿಂದ ಹೊರ ಬರಲು ಭಾರತ ಬಾವುಟ ಬಳಸಿತ್ತಿದ್ರು. ಇಂಡಿಯನ್ ಭಾವುಟ ಬಳಸಿದ್ರೆ ಸೇಫ್ ಇತ್ತು. ಭಾರತದ ಭಾವುಟದಿಂದ ಬೇರೆ ದೇಶದ ವಿದ್ಯಾರ್ಥಿಗಳು ಜೀವ ಉಳಿಸಿಕೊಂಡಿದ್ದಕ್ಕೆ ನಮ್ಮ ದೇಶದ ಬಾವುಟದ ಬಗ್ಗೆ ಗೌರವವಿದೆ ಎಂದರು.
ನಮ್ಮ ದೇಶದ ಹೆಮ್ಮೆಯ ರಾಷ್ಟ್ರಧ್ವಜವೀಗ ನಮ್ಮ ದೇಶದ ಪ್ರಜೆಗಳನ್ನು ಮಾತ್ರವಲ್ಲದೇ ಟರ್ಕಿ ದೇಶದ ಹಾಗೂ ಪಕ್ಕದ ಶತ್ರುರಾಷ್ಟ್ರ ಪಾಕಿಸ್ಥಾನದ ವಿದ್ಯಾರ್ಥಿಗಳನ್ನು ಕೂಡ ಯುದ್ಧಪೀಡಿತ ಉಕ್ರೇನ್‌ನಿಂದ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದೆ. ರಷ್ಯಾ ಆಕ್ರಮಣದಿಂದ ಯುದ್ಧ ಪೀಡಿತವಾಗಿರುವ ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಆಪರೇಷನ್ ಗಂಗಾ ಹೆಸರಿನ ಮೂಲಕ ರಕ್ಷಣೆ ಮಾಡುತ್ತಿದೆ. ಉಕ್ರೇನ್‌ನಲ್ಲಿ ಕೇವಲ ಭಾರತದ ವಿದ್ಯಾರ್ಥಿಗಳು ಮಾತ್ರವಲ್ಲದೇ ಪ್ರಂಪಂಚದ ವಿವಿಧ ದೇಶಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಎಲ್ಲಾ ದೇಶಗಳು ಭಾರತದಂತೆ ತಮ್ಮ ವಿದ್ಯಾರ್ಥಿಗಳ ರಕ್ಷಣೆಗೆ ಮುತುವರ್ಜಿ ವಹಿಸಿಲ್ಲ. ಇದರಿಂದಾಗಿ ಹಲವು ದೇಶಗಳ ವಿದ್ಯಾರ್ಥಿಗಳ ಸ್ಥಿತಿ ಅಲ್ಲಿ ಶೋಚನೀಯವಾಗಿದೆ.