Omicron Crisis: ಕರ್ನಾಟಕದಲ್ಲಿ ಒಮಿಕ್ರೋನ್‌ನ ಉಪತಳಿ ಹೆಚ್ಚಳ: ಮತ್ತೆ ಹೆಚ್ಚಿದ ಆತಂಕ

By Girish GoudarFirst Published Mar 16, 2022, 7:28 AM IST
Highlights

*  ವಿದೇಶಗಳಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದ ವೈರಸ್‌ ಇದೀಗ ರಾಜ್ಯದಲ್ಲೂ ಹೆಚ್ಚಳ
*  1820 ಮಾದರಿ ಪರೀಕ್ಷೆಯಲ್ಲಿ 1816 ಜನರಲ್ಲಿ ಒಮಿಕ್ರೋನ್‌ ಬಿಎ 2 ತಳಿ ಪತ್ತೆ: 
*  ರಾಜ್ಯದಲ್ಲಿ ನಿನ್ನೆ 129 ಜನರಿಗೆ ಸೋಂಕು, ಇಬ್ಬರ ಸಾವು
 

ಬೆಂಗಳೂರು(ಮಾ.16):  ರಾಜ್ಯದಲ್ಲಿ ಮಂಗಳವಾರ 129 ಮಂದಿಯಲ್ಲಿ ಕೋವಿಡ್‌-19(Covid-19) ದೃಢಪಟ್ಟಿದೆ. ಇಬ್ಬರು ಮೃತರಾಗಿದ್ದಾರೆ. 206 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮಧ್ಯೆ ಜಾಗತಿಕವಾಗಿ ಸೋಂಕು ಹೆಚ್ಚಲು ಕಾರಣವಾಗಿರುವ ಒಮಿಕ್ರೋನ್‌ನ(Omicron) ಉಪಪ್ರಬೇಧ ಬಿಎ2(BA2) ಭಾರಿ ಸಂಖ್ಯೆಯಲ್ಲಿ ಪತ್ತೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ(World Health Organization) ಈಗಾಗಲೇ ಬಿಎ2 ಪ್ರಬೇಧವನ್ನು ಆತಂಕಕಾರಿ ಎಂದು ಗುರುತಿಸಿದ್ದು ಚೀನಾ, ಡೆನ್ಮಾಕ್‌, ದಕ್ಷಿಣ ಕೊರಿಯಾ, ಬ್ರಿಟನ್‌ ಮುಂತಾದ ದೇಶಗಳಲ್ಲಿ ಮತ್ತೆ ಕೋವಿಡ್‌ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಒಮಿಕ್ರೋನ್‌ ನ ಬಿಎ1 ಉಪ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ (Karnataka) ಜನವರಿ ತಿಂಗಳಲ್ಲೆ ಬಿಎ 2 ಪತ್ತೆ ಆಗಿದ್ದರೂ ಈಗ ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ ಒಟ್ಟು 1820 ಜಿನೊಮಿಕ್‌ ಸಿಕ್ವೆನ್ಸಿಂಗ್‌ ನಡೆದಿದ್ದು ಈ ಪೈಕಿ 1816 ಮಂದಿಯಲ್ಲಿ ಬಿಎ 2 ಪತ್ತೆಯಾಗಿದೆ. ಕೇವಲ 4 ಮಂದಿಯಲ್ಲಿ ಮಾತ್ರ ಬಿಎ1 ದೃಢ ಪಟ್ಟಿದೆ.

Covid Alert ಚೀನಾ ಬೆನ್ನಲ್ಲೇ ಅಮೆರಿಕದಲ್ಲಿ ಕೊರೋನಾ ಹೆಚ್ಚಳ, ಭಾರತಕ್ಕೆ ಎಚ್ಚರಿಕೆ ಕರೆಗಂಟೆ!

ರಾಜ್ಯದಲ್ಲಿ ಕಳೆದ ಎರಡೂವರೆ ತಿಂಗಳಿನಲ್ಲಿ ಬಿಎ2 ಹೆಚ್ಚಿದ್ದು ಈ ಅವಧಿಯಲ್ಲಿಯೇ ಮೂರನೇ ಅಲೆ(Corona 3rd Wave) ಉತ್ತುಂಗಕ್ಕೆ ಏರಿ ಇದೀಗ ಶಮನವಾಗಿದೆ. ಜನವರಿ ತಿಂಗಳಲ್ಲಿ ನಿತ್ಯ 40-50 ಸಾವಿರ ಪ್ರಕರಣ ವರದಿ ಆಗುತ್ತಿತ್ತು. ಇದೀಗ ದಿನನಿತ್ಯದ ಪ್ರಕರಣ ನೂರರ ಅಸುಪಾಸಿಗೆ ಇಳಿದಿದೆ. ಆದ್ದರಿಂದ ಬಿಎ 2 ನ ಆತಂಕ ರಾಜ್ಯವನ್ನು ತಟ್ಟುವ ಸಾಧ್ಯತೆ ಕಡಿಮೆ ಇದೆ. ಆದರೂ ಕೊರೋನಾ(Coronavirus) ರೂಪಾಂತರಿಗಳ ಆತಂಕ ಇದ್ದೆ ಇರುತ್ತದೆ ಎಂದು ಸಾಂಕ್ರಾಮಿಕ ತಜ್ಞರು ಅಭಿಪ್ರಾಯ ಪಡುತ್ತಾರೆ.

ಬೆಂಗಳೂರು(Bengaluru) ನಗರದಲ್ಲಿ 101 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದ ಯಾವುದೇ ಜಿಲ್ಲೆಯಲ್ಲೂ ಎರಡಂಕಿಯಲ್ಲಿ ಪ್ರಕರಣ ಪತ್ತೆಯಾಗಿಲ್ಲ. ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಪ್ಪಳ, ಮೈಸೂರು, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ.
ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ 39.44 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.01 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 40,024 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಮಂಗಳವಾರ 55,815 ಮಂದಿ ಕೋವಿಡ್‌ ಲಸಿಕೆ(Covid Vaccine) ಪಡೆದಿದ್ದಾರೆ. 2,944 ಮಂದಿ ಮೊದಲ ಡೋಸ್‌, 49,226 ಮಂದಿ ಎರಡನೇ ಡೋಸ್‌ ಮತ್ತು 3,645 ಮಂದಿ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 10.21 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ₹50 ಸಾವಿರ: ಸುಪ್ರೀಂ ಸ್ಪಷ್ಟನೆ

ನವದೆಹಲಿ : ಕೋವಿಡ್‌ನಿಂದ ಮೃತರಾದ ಪ್ರತಿ ಸಾವಿಗೂ ತಲಾ 50,000 ರು. ಪರಿಹಾರಧನ ನೀಡುವಂತೆ ಈ ಹಿಂದೆ ತಾನು ನೀಡಿದ್ದ ಆದೇಶ ಸ್ಪಷ್ಟವಾಗಿದೆ. ಸರ್ಕಾರ ಇದನ್ನು ಜಾರಿಗೊಳಿಸಬೇಕು. ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.ಒಂದೇ ಕುಟುಬದಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರೆ, ಆ ಮಗುವಿನ ತಂದೆ-ತಾಯಿಗೆ ಪ್ರತಿ ಮಗುವಿಗೂ 50,000 ಪರಿಹಾರ ರು. ನೀಡಬೇಕೇ ಎಂಬ ಅಸ್ಸಾಂ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಈ ಮೇಲಿನಂತೆ ಸ್ಪಷ್ಟನೆ ನೀಡಿದೆ. ‘ನಾವು ಈ ಬಗ್ಗೆ ಹಿಂದೆಯೇ ಆದೇಶ ನೀಡಿದ್ದು ಪ್ರತಿ ಸಾವಿಗೆ 50,000 ನೀಡಬೇಕೆಂದು ಹೇಳಿದ್ದೇವೆ’ ಎಂದು ಪೀಠ ಪುನರುಚ್ಚರಿಸಿದೆ.

ಕೋವಿಡ್‌ ಪರಿಹಾರ ಕೋರಿಕೆಗೆ ಕಾಲಮಿತಿ: ಇಂದು ಸುಪ್ರೀಂಗೆ ಕೇಂದ್ರದಿಂದ ಮಾನದಂಡ ಸಲ್ಲಿಕೆ:  ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬ ಸದಸ್ಯರು ರಾಜ್ಯ ಸರ್ಕಾರದಿಂದ ತಲಾ 50000 ರು. ಪಡೆಯಲು ನಿಗದಿತ ಕಾಲಮಿತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕುರಿತು ಕೇಂದ್ರ ಸರ್ಕಾರ ನಿಯಮ ರೂಪಿಸಿ ಅದನ್ನು ಮಂಗಳವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ.

Covid 19 Crisis: ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ: ಭಾರತದಲ್ಲಿ ಕೇವಲ 2503 ಕೇಸು!

ಕೋವಿಡ್‌ಗೆ ಬಲಿಯಾದವರಿಗೆ ಪರಿಹಾರ ನೀಡಬೇಕು ಎಂಬ ಅರ್ಜಿಯ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾ. ಎಂ.ಆರ್‌.ಶಾ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ‘ಕೋವಿಡ್‌ ಪರಿಹಾರದ ವಿಷಯದಲ್ಲೂ ವಂಚನೆ ನಡೆಸುತ್ತಿರುವುದು ಆತಂಕದ ವಿಷಯ. ಈ ವಿಷಯವನ್ನೂ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ನಾವೆಂದೂ ಊಹಿಸಿರಲಿಲ್ಲ. ಇದೊಂದು ಧರ್ಮನಿಷ್ಠ ವಿಷಯ. ಈ ವಿಷಯದಲ್ಲೂ ನಮ್ಮ ನೈತಿಕತೆ ಇಷ್ಟುಅಧಃಪತನ ಕಾಣುತ್ತದೆ’ ಎಂದು ನಾವು ಎಣಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿತು. ಅಲ್ಲದೆ, ಈ ಬಗ್ಗೆ ಅಕೌಂಟಂಟ್‌ ಜನರಲ್‌ರಿಂದ ತನಿಖೆ ನಡೆಸುವಂತೆ ಸೂಚಿಸಬೇಕಾಗಬಹುದು ಎಂದಿತು.

ಈ ಹಂತದಲ್ಲಿ ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮಾತನಾಡಿ ‘ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಸಮಯ ನಿಗದಿ ಮಾಡುವ ಬಗ್ಗೆ ನ್ಯಾಯಾಲಯ ಪರಿಶೀಲಿಸಬಹುದು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ನಾವು ಹಿಂದಿನ ವಿಚಾರಣೆಯನ್ನು ಮುಂದೂಡಿದ್ದೇ ಇದೇ ಕಾರಣಕ್ಕಾಗಿ. ಈ ಬಗ್ಗೆ ನೀವು ಸೂಕ್ತ ಅರ್ಜಿಯನ್ನು ಸಿದ್ಧಪಡಿಸಿ ನಮಗೆ ಸಲ್ಲಿಸಿ’ ಎಂದು ಸೂಚಿಸಿತು. ಆಗ ಮೆಹ್ತಾ, ತಾವು ಮಂಗಳವಾರವೇ ಅರ್ಜಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು. ಇದನ್ನು ಒಪ್ಪಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿದೆ.
 

click me!