
ಬೆಂಗಳೂರು(ಆ.09): ರಾಜ್ಯದ ಆನೆಗಳ ಸಂಖ್ಯೆಯಲ್ಲಿ ಸುಮಾರು 350 ರಷ್ಟು ಹೆಚ್ಚಳವಾಗಿದ್ದು, ಆನೆಗಳ ಶ್ರೇಣಿ 5914 ರಿಂದ 6877 ಎಂದು ವಿಶ್ಲೇಷಿಸಲಾಗಿದೆ. ಇಂದು(ಬುಧವಾರ) ಬೆಂಗಳೂರಿನಲ್ಲಿ ಆನೆಗಳ ಗಣತಿ ಕುರಿತ ವರದಿ ಬಿಡುಗಡೆಯಾಗಿದ್ದು, ಗಣನೀಯ ಪ್ರಮಾಣದಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ ಅಂತ ವರದಿ ತಿಳಿಸಿದೆ.
ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಸಕ್ತ ಸಾಲಿನ ಆನೆ ಗಣತಿಯನ್ನು ಬಿಡುಗಡೆ ಮಾಡಿದರು. ನೂತನ ವರದಿಯ ಪ್ರಕಾರ ರಾಜ್ಯದಲ್ಲಿ 2017ರಲ್ಲಿ ಸುಮಾರು 6049 ಆನೆಗಳಿದ್ದವು. ಈ ಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.
ಹುಲಿಗಳ ಸಂರಕ್ಷಣೆಯಲ್ಲಿ ‘ಕರ್ನಾಟಕ’ ದಿ ಬೆಸ್ಟ್: ಮಧ್ಯಪ್ರದೇಶ ಫಸ್ಟ್.. ಕರ್ನಾಟಕಕ್ಕೆ 2ನೇ ಸ್ಥಾನ !
ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ಹಿಂದೆ ಆನೆ ಗಣತಿ 2017 ರಲ್ಲಿ ನಡೆದಿತ್ತು.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ-17 ರಿಂದ ಮೇ-19 ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಗಿದೆ. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲೂ ಸಹ ಇದೇ ರೀತಿಯ ಗಣತಿ ಕಾರ್ಯವನ್ನು ನಡೆಸಿರುವುದು ವಿಶೇಷ..
ಈ ಗಣತಿಯ ಸ್ವರೂಪ, ಕ್ಷೇತ್ರ ಸಿಬ್ಬಂದಿಗೆ ತರಬೇತಿ, ಗಣತಿ ಫಲಿತಾಂಶಗಳ ವಿಶ್ಲೇಷಣೆ ಹಾಗೂ ವರದಿ ತಯಾರಿಕೆಯಲ್ಲಿ ಪ್ರೊ.ಆರ್. ಸುಕುಮಾರ್ ರವರ ನೇತೃತ್ವದ ಭಾರತೀಯ ವಿಜ್ಞಾನ ಸಂಸ್ಥೆಯ (IISC) ತಾಂತ್ರಿಕ ನೆರವಿನೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯು ಆನೆಗಳ ಗಣತಿಯನ್ನು ನಡೆಸಿದೆ.
ಹುಲಿಗಳ ಸಂಖ್ಯೆ ಏರಿಕೆಯಾಗಿರುವುದಕ್ಕೆ ಕರ್ನಾಟಕ- ಮಧ್ಯಪ್ರದೇಶ ನಡುವೆ ವಾರ್!
ರಾಜ್ಯದ 32 ವಿಭಾಗಗಳಿಂದ 3400 ಕ್ಕೂ ಹೆಚ್ಚು ಸಿಬ್ಬಂದಿ ಈ ಆನೆಗಳ ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದು, ಆನೆ ಗಣತಿಯನ್ನು ಮೂರು ವಿಧಾನಗಳಲ್ಲಿ ಮಾಡಲಾಗಿದೆ. ನೇರ ಏಣಿಕೆ , ಟ್ರಾಂಜೆಕ್ಟ್ ಸಮೀಕ್ಷೆ ಅಥವಾ ಲದ್ದಿ ಏಣಿಕೆ ವಿಧಾನ ಮತ್ತು ವಾಟರ್ ಹೋಲ್ ಏಣಿಕೆ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ಈ ವಿಧಾನದಲ್ಲಿ ಆನೆಗಳ ಚಲನವಲನ, ವಯಸ್ಸಿನ ವರ್ಗಗಳು, ಗಂಡು ಹೆಣ್ಣು ಅನುಪಾತ ಇತ್ಯಾದಿಗಳನ್ನು ದಾಖಲಿಸಲಾಗಿದೆ.
ರಾಜ್ಯದ 32 ವಿಭಾಗಗಳಲ್ಲಿ ಆನೆಗಳ ಗಣತಿ ಕಾರ್ಯವನ್ನು ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ 23 ವಿಭಾಗಗಳಲ್ಲಿ ಆನೆಗಳು ಕಂಡುಬಂದಿವೆ. ಸಮೀಕ್ಷೆಯ ದಿನದಂದು ನೇರವಾಗಿ ಏಣಿಸಿದ ಒಟ್ಟು ಆನೆಗಳ ಸಂಖ್ಯೆ-2219 ಆಗಿತ್ತು. ಈ 23 ವಿಭಾಗಗಳಲ್ಲಿ ಇರುವ 18975 ಚದರ ಕಿ.ಮೀ ಪ್ರದೇಶದ ಪೈಕಿ 6104 ಚದರ ಕಿ.ಮೀ ಪ್ರದೇಶದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರದೇಶವನ್ನು ಸಮೀಕ್ಷೆಗೆ ಒಳಪಡಿಸಿರುವುದರಿಂದ ಈ ಸಮೀಕ್ಷೆ ಮತ್ತು ವರದಿಯು ಹೆಚ್ಚು ನಿಖರ ಮತ್ತು ವಿಶ್ವಾಸಾರ್ಹವಾಗಿದೆ ಎಂಬುದು ಅರಣ್ಯ ಇಲಾಖೆಯ ಸ್ಪಷ್ಟನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ