2022ನೇ ವರ್ಷದ ಆರೋಗ್ಯ ಮೂಲಸೌಕರ್ಯದಲ್ಲಿ ಕರ್ನಾಟಕ ಗಮನಾರ್ಹ ಸಾಧನೆ: ಸಚಿವ ಸುಧಾಕರ್‌

By Govindaraj SFirst Published Jan 5, 2023, 12:43 PM IST
Highlights

ರಾಜ್ಯವು ಕಳೆದ ವರ್ಷ (2022) ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಳದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಮೂಲಕ ರಾಜ್ಯದ ಜನರಿಗೆ ಆರೋಗ್ಯ ಹಕ್ಕು ಒದಗಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. 

ಬೆಂಗಳೂರು (ಜ.05): ರಾಜ್ಯವು ಕಳೆದ ವರ್ಷ (2022) ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಳದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಮೂಲಕ ರಾಜ್ಯದ ಜನರಿಗೆ ಆರೋಗ್ಯ ಹಕ್ಕು ಒದಗಿಸಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ವರ್ಷದ ಸಾಧನೆಗಳ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವ ಅವರು, ರಾಜ್ಯದ ಆರೋಗ್ಯ ಅಳೆಯಲು ಮಾನದಂಡವಾಗಿರುವ ತಾಯಿ-ಶಿಶು ಮರಣದ ಪ್ರಮಾಣ ಶೇ.83 ರಿಂದ 69ಕ್ಕೆ ಇಳಿದಿದೆ. ಜನನ ಸಮಯದಲ್ಲಿ ಲಿಂಗಾನುಪಾತ 910 ರಿಂದ 978ಕ್ಕೆ ಏರಿಕೆಯಾಗಿದೆ. 

ಶಿಶು ಮರಣ ದರ 21ರಿಂದ 19ಕ್ಕೆ, ನವಜಾತ ಶಿಶು ಮರಣ ದರ 16 ರಿಂದ 14ಕ್ಕೆ ಕಡಿಮೆಯಾಗಿದೆ. ಹೆರಿಗೆ ವಲಯದಲ್ಲೂ ಸುಧಾರಣೆಯಾಗಿದ್ದು, ಶೇ.97ರಷ್ಟುಹೆರಿಗೆಗಳು ಆಸ್ಪತ್ರೆಗಳಲ್ಲಿ ದಾಖಲಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ. ಕಿವುಡ ಮುಕ್ತ ಕರ್ನಾಟಕ ಅಡಿ ನವಜಾತ ಶಿಶುಗಳಲ್ಲಿ ಶ್ರವಣ ದೋಷ ಪತ್ತೆ ಮಾಡಿ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸಲಾಗುತ್ತಿದೆ. ಲಕ್ಷ್ಮ್ಯ ಕಾರ್ಯಕ್ರಮದಡಿ ಶೇ.68 ಆಸ್ಪತ್ರೆಗಳಿಗೆ ಮಾನ್ಯತೆ ನೀಡಿ ಗುಣಮಟ್ಟಪ್ರಮಾಣೀಕರಿಸಲಾಗಿದೆ. ಇ-ಸಂಜೀವಿನಿ, ಟೆಲಿ-ಮೆಡಿಸಿನ್‌ ಸಮಾಲೋಚನೆಯಡಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಹೊರರೋಗಿ ಮಾದರಿಯ ಟೆಲಿ-ಸಮಾಲೋಚನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ನವೆಂಬರ್‌ವರೆಗೆ 61.99 ಲಕ್ಷ ಟೆಲಿ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಬಜೆಟ್‌ ಅಧಿವೇಶನದಲ್ಲಿ ಎನ್‌ಪಿಎಸ್‌ ಚರ್ಚೆ: ಸಚಿವ ಸುಧಾಕರ್‌

ರಾಜ್ಯ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆಯ ಇ-ಮನಸ್‌ನ ಮಾನಸಿಕ ಆರೋಗ್ಯ ಸಮಾಲೋಚನೆ ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಜತೆಗೆ ವೈದ್ಯರಿಂದ ತ್ವರಿತ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಟೆಲಿ ಮೆಡಿಸನ್‌ ವ್ಯವಸ್ಥೆಯನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಾರಿಗೊಳಿಸಲಾಗಿದೆ. ಇದರಡಿ 3200 ಸಾಮಾನ್ಯ ವೈದ್ಯರು, 600 ತಜ್ಞ ವೈದ್ಯರು ಮತ್ತು 100 ಸೂಪರ್‌ ಸ್ಪೆಷಾಲಿಟಿ ವೈದ್ಯರು ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪಾಳಿಗಳಲ್ಲಿ ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಹಂತದಲ್ಲಿ 114 ನಮ್ಮ ಕ್ಲಿನಿಕ್‌ ಆರಂಭಿಸಿದ್ದು, 128 ಮಹಿಳಾ ಕ್ಲಿನಿಕ್‌ಗಳು ಮತ್ತು ನಗರ ಪ್ರದೇಶಗಳಲ್ಲಿ 128 ಪಾಲಿಕ್ಲಿನಿಕ್‌ಗಳು ಕಾರ್ಯಾರಂಭ ಮಾಡುವ ಹಂತದಲ್ಲಿವೆ. ಪ್ರಾದೇಶಿಕವಾರು 4 ತಾಯಿ ಎದೆಹಾಲು ಬ್ಯಾಂಕ್‌, ವಾಣಿವಿಲಾಸ್‌ ಆಸ್ಪತ್ರೆಯಲ್ಲಿ ಎದೆಹಾಲು ಬ್ಯಾಂಕ್‌ ಸ್ಥಾಪಿಸಲಾಗಿದೆ. ಆರೋಗ್ಯ ನಂದನ ಕಾರ್ಯಕ್ರಮದಡಿ ಕೋವಿಡ್‌ ಸಾಂಕ್ರಾಮಿಕದ ನಡುವೆಯೂ 65 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿದೆ. ಗ್ರಾಮೀಣ ಮಕ್ಕಳ ಆರೋಗ್ಯ ರಕ್ಷಣೆಗೆ ಆರೋಗ್ಯನಂದನದ ಮೂಲಕ ಮಕ್ಕಳ ವೈದ್ಯರು ಪ್ರತಿದಿನ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು, 1.7 ಕೋಟಿ ಮಕ್ಕಳ ಪೈಕಿ ಪೈಕಿ 69,21,179 ಮಕ್ಕಳನ್ನು ಪರೀಕ್ಷೆಗೊಳಪಡಿಸಲಾಗಿದೆ.

ಉಳಿದಂತೆ ಎಲ್ಲಾ ಜಿಲ್ಲೆಗಳು ಮತ್ತು 167 ಕೇಂದ್ರಗಳಲ್ಲಿ ಡಯಾಲಿಸಿಸ್‌ ಸೇವೆಗಳು ದೊರೆಯುತ್ತಿವೆ. ಕರ್ನಾಟಕ ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕೆ ಯೋಜನೆಯಡಿ ಶೇ.75 ರಷ್ಟುಜನರು (5.9 ಕೋಟಿ) ನೋಂದಣಿಯಾಗಿದ್ದಾರೆ. ರಾಜ್ಯವು ನೋಂದಣಿಯಲ್ಲಿ ಮೊದಲ ಮತ್ತು ಪರೀಕ್ಷೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಚಿಕ್ಕಮಗಳೂರು ಜಿಲ್ಲೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ 1.22 ಕೋಟಿ ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್‌ ಹೆಸರಿನಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಿಲ್ಲ ನಿರ್ಬಂಧ: ಸಚಿವ ಸುಧಾಕರ್‌

ಹೆಚ್ಚು ಒತ್ತಡವಿರುವ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 30 ಹಾಸಿಗೆಗಳ ಸಮುದಾಯ ಆಧಾರಿತ ಆರೋಗ್ಯ ಕೇಂದ್ರಗಳನ್ನು 1 ಸಾವಿರ ಕೋಟಿ ರು.ವೆಚ್ಚದಲ್ಲಿ ಎರಡು ವರ್ಷದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ 47 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸುತ್ತಿದೆ ಎಂದು ತಿಳಿಸಿದ್ದಾರೆ.

click me!