ಶತಮಾನದ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಅಸ್ಥಿಯನ್ನು ಅವರ ಅಭಿವಂದನಾ ಪತ್ರದಲ್ಲಿ ದಾಖಲಿಸಿದಂತೆಯೇ ನದಿ ಹಾಗೂ ಸಮುದ್ರದಲ್ಲಿ ಜ. 8 ರಂದು ವಿಸರ್ಜನೆ ಮಾಡಲಾಗುವುದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳು ತಿಳಿಸಿದ್ದಾರೆ.
ವಿಜಯಪುರ (ಜ.05): ಶತಮಾನದ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯ ಅಸ್ಥಿಯನ್ನು ಅವರ ಅಭಿವಂದನಾ ಪತ್ರದಲ್ಲಿ ದಾಖಲಿಸಿದಂತೆಯೇ ನದಿ ಹಾಗೂ ಸಮುದ್ರದಲ್ಲಿ ಜ. 8 ರಂದು ವಿಸರ್ಜನೆ ಮಾಡಲಾಗುವುದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಸವಲಿಂಗ ಶ್ರೀಗಳು, ಸಿದ್ದೇಶ್ವರ ಸ್ವಾಮಿಗಳು ಲಿಂಗೈಕ್ಯರಾಗಿ ಈಗ ಮೂರು ದಿನಗಳು ಕಳೆದಿವೆ. ಆದರೆ, ಅವರು ಅಸ್ತಂಗತರಾಗುವ ಎಂಟು ವರ್ಷಗಳ ಮುಂಚೆಯೇ ಅಭಿವಂದನಾ ಪತ್ರವನ್ನು ಬರೆದು ಅದರಲ್ಲಿ ತಮ್ಮ ಪಾರ್ಥಿವ ಶರೀರವನ್ನು ಸಮಾಧಿ ಮಾಡಿ, ಅದರ ಮೇಲೆ ಗದ್ದುಗೆ ನಿರ್ಮಾಣ ಮಾಡದೇ ಅಗ್ನಿ ಸ್ಪರ್ಶ ಮಾಡಬೇಕು ಎಂದು ತಿಳಿಸಿದ್ದರು. ಜೊತೆಗೆ, ತಮ್ಮ ಅಸ್ಥಿಯನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜನೆ ಮಾಡುವಂತೆಯೂ ಅಭಿವಂದನಾ ಪತ್ರದಲ್ಲಿ ದಾಖಲಿಸಿದ್ದರು. ಅದರಂತೆಯೇ ದೇಹತ್ಯಾಗ ಮಾಡಿ 7ನೇ ದಿನಕ್ಕೆ ಭಾನುವಾರ ಜ.8ರಂದು ಅಸ್ಥಿ ವಿಸರ್ಜನೆ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ ಎಂದರು.
ಆಯಸ್ಸು ದೇಹಕ್ಕೇ ಹೊರತು ಆತ್ಮಕ್ಕಲ್ಲ ಎಂಬ ಸತ್ಯ ಅರಿತಿದ್ದ ಶ್ರೀಗಳು..!
ಅಸ್ಥಿ ವಿಸರ್ಜನೆಗೆ ಪ್ರತ್ಯೇಕ ತಂಡದ ನಿಯೋಜನೆ: ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆಗೆ ಜ್ಞಾನಯೋಗಾಶ್ರಮದ ಸಿಬ್ಬಂದಿ ಸೇರಿದಂತೆ ಹಲವು ಮಠಾಧೀಶರನ್ನು ಒಳಗೊಂಡಂತೆತಂಡವೊಂದನ್ನು ಸಿದ್ಧಗೊಳಿಸಲಾಗಿದೆ. ಈ ತಂಡದ ಸದಸ್ಯರು ಭಾನುವಾರ ಬೆಳಗ್ಗೆ ಕೂಡಲಸಂಗಮದಲ್ಲಿ ಹಾಗೂ ಗೋಕರ್ಣದಲ್ಲಿರುವ ಸಮುದ್ರದಲ್ಲಿ ಏಕಕಾಲಕ್ಕೆ ಅಸ್ಥಿ ವಿಸರ್ಜನೆಯನ್ನು ಮಾಡಲಾಗುತ್ತದೆ. ಈ ವೇಳೆ ಹಿಂದೂ ಸಫ್ರದಾಯ ಪಾಲನೆ ಮಾಡಲಾಗುತ್ತದೆ ಎಂದು ಬಸವಲಿಂಗ ಶ್ರೀಗಳು ಮಾಹಿತಿ ನೀಡಿದರು.
ಭಕ್ತರಿಗಿಲ್ಲ ಸ್ವಾಮೀಜಿಗಳ ಚಿತಾಭಸ್ಮ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು. ನಿನ್ನೆ ರಾತ್ರಿ ನಡೆದ ಅಂತ್ಯಕ್ರಿಯೆ ವೇಳೆ ಕನ್ಹೇರಿ ಮಠದ ಸ್ವಾಮೀಜಿಗಳು ಭಸ್ಮ ನೀಡುವುದಾಗಿ ಹೇಳಿದ್ದರು. ಆದರೆ, ಸಿದ್ಧೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು ಯಾರು ನದಿ ಹಾಗೂ ಸಾಗರದಲ್ಲಿ ವಿಸರ್ಜನೆ ಮಾಡಲು ಇಚ್ಛೆ ಪಡುತ್ತಾರೋ ಅವರು ಹೆಸರು ನೋಂದಾಯಿಸಲು ಹೇಳಿದ್ದರು. ಆದರೆ ನಾಡಿನ ಇತರೆ ಸ್ವಾಮೀಜಿಗಳೊಂದಿಗೆ ಚರ್ಚೆ ಮಾಡಿದ ನಂತರ ಯಾವುದೇ ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ನೀಡಲಾಗಲ್ಲ ಎಂದು ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.
ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ಭಕ್ತರಿಗೆ ನೀಡಲಾಗುವುದಿಲ್ಲ: ಬಸವಲಿಂಗ ಶ್ರೀ ಮಾಹಿತಿ
ವಿಭೂತಿಯನ್ನೇ ಭಸ್ಮವೆಂದು ಭಾವಿಸಿ: ಸಿದ್ದೇಶ್ವರ ಸ್ವಾಮೀಜಿಗಳ ಅಣತಿಯಂತೆ ನಾವು ಯಾವುದೇ ಚಿತಾಭಸ್ಮವನ್ನು ನೀಡಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿಯನ್ನು ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು. ಚಿತಾ ಭಸ್ಮವನ್ನು ಯಾವ ನದಿ ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆಂದು ನಿರ್ಧಾರ ಮಾಡಲಾಗಿದೆ. ಆಶ್ರಮದಲ್ಲಿರುವ ನಾವೆಲ್ಲ ಸ್ವಾಮೀಜಿಗಳು ಸೇರಿ ಕನ್ಹೇರಿ ಮಠದ ಶ್ರೀಗಳು ಹಾಗೂ ಸುತ್ತೂರು ಮಠದ ಶ್ರೀಗಳು ಸೇರಿದಂತೆ ಇತರ ಸ್ವಾಮೀಜಿಗಳ ಸಲಹೆಗಳನ್ನು ಪಡೆದುಕೊಂಡು ಅಸ್ಥಿ ವಿಸರ್ಜನೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜ್ಞಾನ ಯೋಗಾಶ್ರಮದಲ್ಲಿ ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.