ಕೊರೋನಾ ಎಫೆಕ್ಟ್: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ರದ್ದು!

By Kannadaprabha NewsFirst Published Jul 5, 2020, 7:36 AM IST
Highlights

ಕೊರೋನಾ ಎಫೆಕ್ಟ್: ಫಲಪುಷ್ಪ ಪ್ರದರ್ಶನ ರದ್ದು!| ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಡೆಯಬೇಕಿದ್ದ ಪ್ರದರ್ಶನಕ್ಕೆ ಬ್ರೇಕ್‌

ಬೆಂಗಳೂರು(ಜು.05): ಕೊರೋನಾ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನಕ್ಕೂ ಬ್ರೇಕ್‌ ಬಿದ್ದಿದೆ.

ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಅವಧಿಯಲ್ಲಿ ಫಲಪುಷ್ಪ ಪ್ರದರ್ಶನ ನಡೆಸದಿರಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಬೆಂಗಳೂರಿನಿಂದ ಜನರ ಗುಳೆ: ಮನೆ ಖಾಲಿ ಮಾಡಿ ತಮ್ಮ ಊರಿಗೆ ಪ್ರಯಾಣ!

ಆಗಸ್ಟ್‌ ಮೊದಲ ವಾರದಲ್ಲಿ ನಡೆಯಬೇಕಿರುವ ಫಲಪುಷ್ಪ ಪ್ರದರ್ಶನಕ್ಕೆ ಜೂನ್‌ ಮೊದಲ ವಾರದಲ್ಲೇ ತೋಟಗಾರಿಕೆ ಇಲಾಖೆ ಅ​ಧಿಕಾರಿಗಳು ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಪದಾಧಿಕಾರಿಗಳ ಸಹಯೋಗದಲ್ಲಿ ಸಭೆ ನಡೆಯಬೇಕಿತ್ತು. ಆದರೆ, ಈವರೆಗೂ ಯಾವುದೇ ಸಭೆ ನಡೆಸಿಲ್ಲ. ಅಲ್ಲದೆ, ಸೋಂಕು ಹರದಂತೆ ತಡೆಯಲು ಪ್ರದರ್ಶನ ರದ್ದು ಮಾಡುವುದೇ ಸೂಕ್ತ ಎಂದು ಸಲಹೆಗಳು ಬಂದಿವೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರದರ್ಶನದ ಅಂಗವಾಗಿ ನಡೆಸುವ ಮಿನಿ ತೋಟಗಳ ಸ್ಪರ್ಧೆ, ಟೆರೇಸ್‌ ಗಾರ್ಡನ್‌ಗಳ ಸ್ಪರ್ಧೆ, ಸಂಸ್ಥೆಗಳ ಗಾರ್ಡನ್‌ಗಳ ಸ್ಪರ್ಧೆ, ಇಕೆಬಾನ, ಪೂರಕ ಕಲೆಗಳು ಹೀಗೆ ನಾನಾ ಸ್ಪರ್ಧೆಗಳಿಗೆ ಸ್ಪ​ರ್ಧಿಗಳ ಹುಡುಕಾಟ ಸಧ್ಯದಲ್ಲೇ ಆರಂಭವಾಗಬೇಕಿತ್ತು. ಆದರೆ ಇದ್ಯಾವುದೂ ನಡೆಯುತ್ತಿಲ್ಲ.

ಸೋಂಕು-ಸಾವಲ್ಲಿ ಕೊರೋನಾ ದಾಖಲೆ: ಒಂದೇ ದಿನ 42 ಮಂದಿ ಸಾವು, 1839 ಕೇಸ್‌!

ಲಾಲ್‌ಬಾಗ್‌ನಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ವರ್ಷಕ್ಕೆ ಎರಡು ಬಾರಿ (ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ) ನಡೆಯುತ್ತಿದ್ದ ಐತಿಹಾಸಿಕ ಫಲಪುಷ್ಪ ಪ್ರದರ್ಶನ ತನ್ನ ಇತಿಹಾಸದಲ್ಲೇ ಕೆಲವೇ ಕೆಲವು ಸಂದರ್ಭದಲ್ಲಿ ಮಾತ್ರ ರದ್ದಾಗಿದೆ.

3ನೇ ಬಾರಿ ರದ್ದು

ಲಾಲ್‌ಬಾಗ್‌ನಲ್ಲಿ 1912ರಿಂದ ಪ್ರಾರಂಭವಾಗಿರುವ ಫಲಪುಷ್ಪ ಪ್ರದರ್ಶನವನ್ನು ಮೊದಲ ಬಾರಿ ಎರಡನೇ ವಿಶ್ವ ಮಹಾಯುದ್ಧ ನಡೆದ ಸಂದರ್ಭದಲ್ಲಿ (1942) ಹಾಗೂ ಡಾ.ರಾಜ್‌ಕುಮಾರ್‌ ಅಪಹರಣವಾಗಿದ್ದ ಸಂದರ್ಭದಲ್ಲಿ ಎರಡನೇ ಬಾರಿಗೆ ಪ್ರದರ್ಶನ (2000) ಆಯೋಜಿಸಿರಲಿಲ್ಲ. ಇದೀಗ ಮೂರನೇ ಬಾರಿ ಕೊರೋನಾ ವೈರಸ್‌ ಹಾವಳಿಯಿಂದ ಪ್ರದರ್ಶನ ರದ್ದು ಮಾಡಲಾಗಿದೆ ಎಂದು ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರಾದ 3 ದಿನಗಳ ಬಳಿಕ ಸ್ವಾಬ್‌ ಸಂಗ್ರಹ: ಆಸ್ಪತ್ರೆ ಸಿಬ್ಬಂದಿ ಭಾರೀ ಎಡವಟ್ಟು!

ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಪ್ರದರ್ಶನ ಆಯೋಜಿಸುವುದು ಕಷ್ಟ. ಆಯೋಜನೆ ಮಾಡಿದ್ದಲ್ಲಿ ಹೆಚ್ಚು ಜನ ಬರುವ ಸಾಧ್ಯತೆ ಇರುತ್ತದೆ. ಕೋವಿಡ್‌ ಸಂದರ್ಭದಲ್ಲಿ ಇದು ಸರಿಯಲ್ಲ. ಆದ್ದರಿಂದ ಈ ಬಾರಿ ಪ್ರದರ್ಶನ ನಡೆಸದಿರಲು ನಿರ್ಧರಿಸಲಾಗಿದೆ.

- ಕೆ.ಸಿ. ನಾರಾಯಣಗೌಡ, ತೋಟಗಾರಿಕೆ ಇಲಾಖೆ ಸಚಿವ

click me!