ಗಣತಿದಾರರು ಬಂದಾಗ ನೀವೇನು ಮಾಡಬೇಕು?

Kannadaprabha News, Ravi Janekal |   | Kannada Prabha
Published : Sep 23, 2025, 06:00 AM IST
Karnataka caste survey updates

ಸಾರಾಂಶ

ನಾಗರಿಕರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಸಮಾನತೆ ಕಡಿಮೆ ಮಾಡಿ ಸಮಾನತೆ ಸ್ಥಾಪಿಸುವುದು ಈ ಸಮೀಕ್ಷೆಯ ಉದ್ದೇಶ. ಸರ್ಕಾರದ ಸೌಲಭ್ಯಗಳು ನಾಡಿನ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎನ್ನುವುದೇ ಮೂಲ ಗುರಿ. ಅ.7ರ ತನಕ ನಡೆಯುವ ಸಮೀಕ್ಷೆಯಲ್ಲಿ 60 ಪ್ರಶ್ನೆ ಕೇಳಲಾಗುತ್ತದೆ.  ಜವಾಬ್ದಾರಿಯುತವಾಗಿ ಉತ್ತರಿಸಿ

  • ಕೆ.ಎ. ದಯಾನಂದ, ಭಾ.ಆ.ಸೇ

ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

----------

ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎಲ್ಲ ವರ್ಗದ ಜನರಿಗೆ ಎಲ್ಲ ಕಾಲದಲ್ಲಿಯೂ ಒದಗಿಸುವುದು ಸರ್ಕಾರದ ಬಹುಮುಖ್ಯ ಜವಾಬ್ದಾರಿ. ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಸ್ಥಾನಮಾನ ಹಾಗೂ ಅವಕಾಶಗಳನ್ನು ನೀಡುವುದು ನಮ್ಮ ಸಂವಿಧಾನದ ಮೂಲಭೂತ ಆಶಯವಾಗಿದೆ. ಸಮಾನತೆಯ ಈ ಪರಿಕಲ್ಪನೆಯು ಕೇವಲ ಕಾನೂನು ನಿಬಂಧನೆಯಾಗಿರದೆ, ಪ್ರತಿಯೊಬ್ಬರೂ ಪೂರ್ಣವಾಗಿ ಬಳಸಿಕೊಳ್ಳಲು ಅವಕಾಶ ನೀಡಿ, ಒಂದು ನ್ಯಾಯಯುತ ಸಮಾಜವನ್ನು ನಿರ್ಮಿಸುವುದು ಸರ್ಕಾರದ ಧ್ಯೇಯವಾಗಿದೆ. ಅಸಮಾನತೆ ಕಡಿಮೆ ಮಾಡುವ ಉದ್ದೇಶದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ವೈಜ್ಞಾನಿಕ ಅಧ್ಯಯನ ಮಾಡಬೇಕಾಗುತ್ತದೆ. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ಸರ್ಕಾರದ ಪರಮೋದ್ದೇಶವಾಗಿದೆ. ಈ ಉದ್ದೇಶವನ್ನು ಈಡೇರಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳನ್ನು ನಡೆಸಿ ನಿಖರವಾದ ಮಾಹಿತಿ ಸಂಗ್ರಹಿಸುವುದು ಬಹಳ ಮುಖ್ಯ.

ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ಜನಗಣತಿ

ಸ್ವಾತಂತ್ರ್ಯ ಪೂರ್ವದಲ್ಲಿ 1931ರವರೆಗೆ ಜನಗಣತಿಯೊಂದಿಗೆ ಜಾತಿಗಣತಿ ಮಾಡಲಾಗಿತ್ತು. ನಂತರ ಕೇವಲ ಜನಗಣತಿ ಮಾತ್ರ ನಡೆಯುತ್ತಿದೆ. ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗಾಗಿ ಡಿ. ದೇವರಾಜ ಅರಸುರವರು ನೇಮಿಸಿದ ಹಾವನೂರು ಆಯೋಗ (1972-1975)ದ ವರದಿ ಕರ್ನಾಟಕ ಹಿಂದುಳಿದ ವರ್ಗಗಳ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದೆ. ನಂತರ ನೇಮಕಗೊಂಡ ವೆಂಕಟಸ್ವಾಮಿ ಆಯೋಗ (1983-1986), ನ್ಯಾ. ಓ. ಚಿನ್ನಪ್ಪರೆಡ್ಡಿ ಆಯೋಗ (1988-1990), ನ್ಯಾ. ಕುದೂರ್ ನಾರಾಯಣ ರೈ ಆಯೋಗ (1994-1995), ಪ್ರೊ. ರವಿವರ್ಮ ಕುಮಾರ್ ಆಯೋಗ (1997-2000), ಮುನಿರಾಜು ಆಯೋಗ (2001-2003), ಸಿದ್ಧಗಂಗಯ್ಯ ಆಯೋಗ (2003-2006), ಡಾ. ಸಿ.ಎಸ್. ದ್ವಾರಕನಾಥ್ ಆಯೋಗ (2007-2010), ಶಂಕರಪ್ಪ ಆಯೋಗ (2011-2013), ಎಚ್. ಕಾಂತರಾಜ ಆಯೋಗ (2014-2017), ಕೆ. ಜಯಪ್ರಕಾಶ್ ಹೆಗ್ಡೆ ಆಯೋಗ ರಚನೆಯಾಗಿ ಕಾರ್ಯನಿರ್ವಹಿಸಿವೆ. ಪ್ರಸ್ತುತ ಮಧುಸೂದನ್ ನಾಯಕ್ ಅವರು ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ದಿಶೆಯಲ್ಲಿ ದಿನಾಂಕ 16.11.1992ರಂದು ನೀಡಿದ ಮಂಡಲ್ ವರದಿಗೆ ಸಂಬಂಧಿಸಿದ ನ್ಯಾ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಶಾಶ್ವತವಾಗಿ ಹಿಂದುಳಿದ ವರ್ಗಗಳ ಆಯೋಗ ರಚನೆಯಾಗಬೇಕು. ಜಾತಿವಾರು ಸಮೀಕ್ಷೆ ಆಯೋಗದ ಒಂದು ಮುಖ್ಯ ಕಾರ್ಯಭಾಗವಾಗಬೇಕು ಎಂಬುದಾಗಿ ಆದೇಶಿಸಿತ್ತು. ಆದಕ್ಕನುಗುಣವಾಗಿ ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ’ 1995ರಲ್ಲಿ ಜಾರಿಗೆ ಬಂದಿದೆ. ಆ ಕಾಯ್ದೆ ಅಡಿಯಲ್ಲಿ ರಾಜ್ಯ ಆಯೋಗವು ಕೆಲಸ ಮಾಡುತ್ತಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ, 1995, ಪ್ರಕರಣ-9ರಂತೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.

ಕಾಯ್ದೆಯಲ್ಲಿರುವ ಅವಕಾಶಗಳು

* ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿನಿಯಮ, 1995 ಪ್ರಕರಣ-9ರಂತೆ ಆಯೋಗದ ಪ್ರಕಾರ್ಯಗಳಲ್ಲಿ ಪ್ರಮುಖವಾಗಿ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಮತ್ತು ಸಮಸ್ಯೆಗಳ ಬಗ್ಗೆ ಸರ್ವೆ ಮಾಡುವುದಾಗಿದೆ. ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸುವುದು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ವರ್ಗಗಳನ್ನು ಗುರುತಿಸುವುದು ಮತ್ತು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.

ಇದನ್ನೂ ಓದಿ: ಸಾಮಾಜಿಕ, ಶೈಕ್ಷಣಿಕ ಸಹಾಯಕ್ಕೆ ಸಮೀಕ್ಷೆ, ಆನ್‌ಲೈನ್ ಅವಕಾಶವೂ ಲಭ್ಯ: ಡಿಕೆಶಿ

* ಆಯೋಗದ ಅಧಿನಿಯಮ ಪ್ರಕರಣ 11(i)ರಲ್ಲಿ ರಾಜ್ಯ ಸರ್ಕಾರವು ಯಾವುದೇ ಸಮಯದಲ್ಲಿ ಮತ್ತು ಈ ಅಧಿನಿಯಮವು ಜಾರಿಗೆ ಬಂದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯು ಮುಕ್ತಾಯವಾದಾಗ ಹೊಸ ಹಿಂದುಳಿದ ವರ್ಗಗಳನ್ನು ಅಂಥ ಪಟ್ಟಿಯಲ್ಲಿ ಸೇರಿಸುವುದನ್ನು ಗಮನದಲ್ಲಿರಿಸಿಕೊಂಡು ಪಟ್ಟಿಗಳನ್ನು ಪುನರೀಕ್ಷಿಸತಕ್ಕದ್ದು. ಆಯೋಗದ ಅಧಿನಿಯಮ ಪ್ರಕರಣ 11(ii)ರಂತೆ, ಪುನರೀಕ್ಷಣೆ ಕೈಗೊಳ್ಳುವಾಗ ಆಯೋಗದ ಸಲಹೆಯನ್ನು ಪಡೆಯತಕ್ಕದ್ದು.

ಮೇಲ್ಕಂಡ ಅವಕಾಶಗಳಡಿಯಲ್ಲಿ, 2015ರಲ್ಲಿ ಆಗಿನ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜ್ ರವರ ಆಯೋಗವು ಸಮೀಕ್ಷೆ ನಡೆಸಿತ್ತು. ನಂತರ, ಆ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ಜಯಪ್ರಕಾಶ್ ಹೆಗ್ಡೆಯವರ ಆಯೋಗವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಈಗ ಸಮೀಕ್ಷೆ ನಡೆದು ಹತ್ತು ವರ್ಷಗಳಾಗಿರುವುದರಿಂದ, ಈಗಿನ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸರ್ಕಾರ ಸೂಚಿಸಿದ ಮೇರೆಗೆ, ಪ್ರಸ್ತುತ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025ನ್ನು ಮನೆ–ಮನೆ ಸಮೀಕ್ಷೆಯ ರೂಪದಲ್ಲಿ ಇದೇ ತಿಂಗಳು, ಅಂದರೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಸಲಿದೆ. ಈ ವೇಳೆ ಪ್ರತಿಯೊಂದು ಕುಟುಂಬಗಳ ನಿಖರವಾದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ವಿವರಗಳನ್ನು ಆಯೋಗಕ್ಕೆ ಸಂಗ್ರಹಿಸುವುದು ಅತ್ಯಗತ್ಯವಾಗಿದೆ. ಪ್ರಾಮಾಣಿಕವಾಗಿ ಉತ್ತರಿಸಿ, ನಿಖರ ಮಾಹಿತಿ ನೀಡಿದಾಗ ಮಾತ್ರ ಸಮೀಕ್ಷೆಯು ಯಶಸ್ವಿಯಾಗುತ್ತದೆ.

ಪ್ರತಿಯೊಬ್ಬರೂ ಪಾಲ್ಗೊಳ್ಳಿ

ಎಲ್ಲಾ ಕುಟುಂಬಗಳು ಸಮೀಕ್ಷೆಯಲ್ಲಿ ಸಂಪೂರ್ಣವಾಗಿ ಒಳಗೊಳ್ಳಬೇಕು ಹಾಗೂ ವೈಜ್ಞಾನಿಕವಾಗಿ ಸಮೀಕ್ಷೆಯಾಗಬೇಕು ಎಂಬ ಕಾರಣಕ್ಕಾಗಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವಿನೂತನ ಸಮೀಕ್ಷಾ ವಿಧಾನವನ್ನು ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ರಾಜ್ಯದ ಬಹುತೇಕ ಮನೆಗಳು ವಿದ್ಯುತ್ ಸಂಪರ್ಕ ಹೊಂದಿದ್ದು, ಅವುಗಳಿಗೆ ಪ್ರತ್ಯೇಕ ಆರ್.ಆರ್. ಸಂಖ್ಯೆಯ ಎಲೆಕ್ಟ್ರಿಕ್ ಮೀಟರ್‌ಗಳಿವೆ. ಈ ಮಾಹಿತಿಯನ್ನು ಆಧರಿಸಿ ಆ್ಯಪ್‌ ಮೂಲಕ ಪ್ರತಿ ಮನೆಗಳನ್ನು ಜಿಯೋಟ್ಯಾಗ್ ಮಾಡಿ ಮನೆಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ.

ವಿದ್ಯುತ್ ಸಂಪರ್ಕವಿಲ್ಲದ ಮನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ, ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಜಿಯೋಟ್ಯಾಗ್ ಮಾಡಿ ಮನೆಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಒಟ್ಟು ಸುಮಾರು ಎರಡು ಕೋಟಿಗೂ ಅಧಿಕ ಮನೆಗಳನ್ನು ಜಿಯೋಟ್ಯಾಗ್ ಮಾಡಲಾಗಿದ್ದು, 1.61 ಲಕ್ಷ ಸಮೀಕ್ಷಾ ಘಟಕ (ಬ್ಲಾಕ್)ಗಳನ್ನು ರಚಿಸಿ ಅಷ್ಟೇ ಪ್ರಮಾಣದ ಸಮೀಕ್ಷಾದಾರರನ್ನು ಹಾಗೂ 10 ಸಾವಿರಕ್ಕಿಂತ ಹೆಚ್ಚು ಮೇಲ್ವಿಚಾರಕರನ್ನು, ರಾಜ್ಯ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳನ್ನು ಈ ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಲಾಗಿದೆ. ರಾಜ್ಯದ ಅಂದಾಜು 7 ಕೋಟಿಗೂ ಹೆಚ್ಚು ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗುತ್ತದೆ.

ಸಮೀಕ್ಷಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಪ್ರಶ್ನಾವಳಿಯ ಆಧಾರದ ಮೇಲೆ ಮಾಹಿತಿಯನ್ನು ಸಂಗ್ರಹಿಸುವರು. ಆ ಸಂದರ್ಭದಲ್ಲಿ ಕುಟುಂಬದವರು ಪಡಿತರ ಚೀಟಿ, ಆಧಾರ್ ಕಾರ್ಡ್/ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ , ವಿಕಲಚೇತನರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣಪತ್ರ ತೋರಿಸಬೇಕಾಗುತ್ತದೆ.

ಸುಮಾರು 60 ಪ್ರಮುಖ ಪ್ರಶ್ನೆಗಳು ಇರುತ್ತವೆ. ಅವುಗಳಲ್ಲಿ ಪ್ರತಿ ಸದಸ್ಯರ ಹೆಸರು, ವಯಸ್ಸು, ಲಿಂಗ, ಶೈಕ್ಷಣಿಕ ಅರ್ಹತೆ ಮತ್ತು ವಿದ್ಯಾಭ್ಯಾಸದ ಹಂತ, ಕೌಶಲ್ಯ ತರಬೇತಿ ಅಗತ್ಯತೆ, ಉದ್ಯೋಗ ಸಂಬಂಧಿತ ಮಾಹಿತಿ, ಕುಟುಂಬದ ಆದಾಯ, ಸ್ಥಿರಾಸ್ತಿ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ, ಕುಲಕಸುಬು, ವಿಕಲಚೇತನರ ಮಾಹಿತಿ ಹಾಗೂ ಇತರೆ ಅಂಶಗಳಿಗೆ ಸರಿಯಾದ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ.

ಹೇಗಿರುತ್ತದೆ ಸಮೀಕ್ಷೆ?

6 ವರ್ಷ ಮೇಲ್ಪಟ್ಟವರಲ್ಲಿ ಪಡಿತರ ಚೀಟಿ ಇಲ್ಲದಿರುವ ಅಥವಾ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿರುವ ಸದಸ್ಯರ ಮಾಹಿತಿಯಲ್ಲಿ ನಕಲು (duplication) ಆಗದಂತೆ ತಡೆಯಲು ಸಮೀಕ್ಷೆ ಸಮಯದಲ್ಲಿ ಆಧಾರ್ ಕಾರ್ಡ್ ಮೂಲಕ ಇ-ಕೆವೈಸಿ ಮಾಡಲಾಗುತ್ತದೆ. ಆ ಸದಸ್ಯರ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಸಮೀಕ್ಷೆಯ ಸಮಯದಲ್ಲಿ ಆ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ, ಮನೆಯಲ್ಲಿ ಇರುವವರು ಅವರೊಂದಿಗೆ ಸಂಪರ್ಕಿಸಿ ಒಟಿಪಿ ಪಡೆದು ಸಮೀಕ್ಷಾ ಕಾರ್ಯ ಸುಗಮಗೊಳಿಸಬೇಕಾಗುತ್ತದೆ.

ಬಹುಜನರಿಗೆ ಇದೊಂದು ಜಾತಿ ಗಣತಿ ಅಥವಾ ಜಾತಿ ಸಮೀಕ್ಷೆ ಮಾತ್ರವೆಂದು ತಪ್ಪು ಕಲ್ಪನೆ ಇದೆ. ಆದರೆ ಇದು ಕೇವಲ ಜಾತಿ ವಿವರ ಸಂಗ್ರಹಿಸುವುದಲ್ಲ. ಇದು ಹಿಂದುಳಿದ ವರ್ಗಗಳನ್ನು ಗುರುತಿಸಲು, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು, ಹಾಗೂ ಆಧಾರಿತ ನೀತಿ ರೂಪಿಸಲು ಮಾಡಲಾಗುತ್ತಿರುವ ಸಮಗ್ರ ಸಮೀಕ್ಷೆ.

ಇದನ್ನೂ ಓದಿ: 20 ಲಕ್ಷ ಗುರಿ ಬದಲು ಮೊದಲ ದಿನ ಕೇವಲ 10000 ಜನರ ಸಮೀಕ್ಷೆ

ಸಮಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ಅನ್ನು ಯಶಸ್ವಿಗೊಳಿಸೋಣ. ಇದು ನಮ್ಮ ಸಮೀಕ್ಷೆ – ನಾವು ಜವಾಬ್ದಾರಿಯಿಂದ ಪಾಲ್ಗೊಳ್ಳೋಣ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆಮಾಡಿ ಅಥವಾ https://kscbc.karnataka.gov.in ಭೇಟಿ ನೀಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್‌ ಸ್ಫೋಟ, ಹಲವು ಆಯಾಮದಲ್ಲಿ ಪೊಲೀಸರ ತನಿಖೆ!
ಬಸ್‌ ದುರಂತವಾದ್ರೂ ಎಚ್ಚೆತ್ತುಕೊಳ್ಳದ KSRTC, ಫೋನ್‌ ಕಿವಿಯಲ್ಲಿಟ್ಟುಕೊಂಡೇ ಡ್ರೈವಿಂಗ್‌!