ಕರ್ನಾಟಕ ಜಾತಿ ಗಣತಿಗೆ ಹೈಕೋರ್ಟ್‌ ಟೆನ್ಷನ್‌

Kannadaprabha News   | Kannada Prabha
Published : Sep 23, 2025, 05:30 AM IST
Karnataka High Court (Photo/ANI)

ಸಾರಾಂಶ

ಸಮೀಕ್ಷೆಯನ್ನು ಸದ್ಯ ಮುಂದೂಡಲು ಸಾಧ್ಯವೇ? ಸಮೀಕ್ಷೆ ನಡೆಸಿ ಒಮ್ಮೆ ಅಂಕಿ-ಅಂಶ ಸಂಗ್ರಹಿಸಿದ ನಂತರ ಅದನ್ನು ಹಿಂಪಡೆಯಲು ಸಾಧ್ಯವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್‌, ಸಮೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿ ಕುರಿತು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಬೆಂಗಳೂರು : ರಾಜ್ಯಾದ್ಯಂತ ಆರಂಭವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆಯನ್ನು ಸದ್ಯ ಮುಂದೂಡಲು ಸಾಧ್ಯವೇ? ಸಮೀಕ್ಷೆ ನಡೆಸಿ ಒಮ್ಮೆ ಅಂಕಿ-ಅಂಶ ಸಂಗ್ರಹಿಸಿದ ನಂತರ ಅದನ್ನು ಹಿಂಪಡೆಯಲು ಸಾಧ್ಯವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್‌, ಸಮೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿ ಕುರಿತು ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಸಮೀಕ್ಷೆ ನಡೆಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನಿರ್ದೇಶಿಸಿ ಸೆ.12ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ರಾಜ್ಯ ಒಕ್ಕಲಿಗರ ಸಂಘ, ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಘುನಾಥ್‌ ಮತ್ತು ಹಿರಿಯ ವಕೀಲ ಕೆ.ಎನ್‌.ಸುಬ್ಬಾರೆಡ್ಡಿ ಮತ್ತಿತರರು ಹೈಕೋರ್ಟ್‌ಗೆ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬುಧವಾರ ಕೆಲ ಕಾಲ ಅರ್ಜಿದಾರರು ಮತ್ತು ರಾಜ್ಯ ಸರ್ಕಾರದ ಪರ ವಕೀಲರ ವಾದವನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಆಲಿಸಿತು. ಅಂತಿಮವಾಗಿ ಸಮೀಕ್ಷೆಗೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತು ಮಂಗಳವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ಅಶೋಕ ಹಾರನಹಳ್ಳಿ, ಜಯಕುಮಾರ್ ಎಸ್‌.ಪಾಟೀಲ್, ವಿವೇಕ್ ರೆಡ್ಡಿ, ಎಸ್‌.ಶ್ರೀರಂಗ ಮತ್ತು ಎಸ್‌.ಎಂ.ಚಂದ್ರಶೇಖರ್ ಅವರು, ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಗಣತಿ ನಡೆಸುತ್ತಿದೆ. ಜನಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿಗಣತಿ ಮಾಡುವ ಅಧಿಕಾರವಿದೆ ಎಂದು ಆಕ್ಷೇಪಿಸಿದರು.

ಹೊಸ ಜಾತಿ ಸೃಷ್ಟಿ ಆರೋಪ:

ಅಲ್ಲದೆ, ರಾಜ್ಯದ ಜನರ ಸ್ಥಿತಿಗತಿ ಪರಿಶೀಲನೆ ಹಿಂದುಳಿದ ವರ್ಗಗಳ ಆಯೋಗದ ಕರ್ತವ್ಯವಲ್ಲ. ಸರ್ಕಾರ ಸಮೀಕ್ಷೆ ಹೆಸರಿನಲ್ಲಿ ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿದೆ. ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ವಿಂಗಡಿಸಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಸರ್ಕಾರದ ಈ ನಡೆ ಸಂವಿಧಾನದ ಪರಿಚ್ಛೇದ 342 ಎ(3) ಮತ್ತು ಮತ್ತು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ–1995ರ ಸೆಕ್ಷನ್‌ 11ಕ್ಕೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಈ ಹಿಂದಿನ ವರದಿ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವರದಿ ಪರಿಗಣಿಸದೆ ಹೊಸ ಪ್ರಕ್ರಿಯೆಗೆ ಆದೇಶಿಸಲಾಗಿದೆ. ಜಾತಿಗಣತಿಯ ಅಂಕಿ-ಅಂಶಗಳನ್ನು ಜಿಯೋ ಟ್ಯಾಗಿಂಗ್‌ ಮೂಲಕ ಆಧಾರ್‌ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತಿದೆ. ಇದು ಆಧಾರ್‌ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಜಾತಿಗಣತಿ ನಡೆಸುತ್ತಿಲ್ಲ:

ರಾಜ್ಯ ಸರ್ಕಾರದ ಪರ ವಿಡಿಯೋ ಕಾನ್ಫರೆನ್ಸ್‌ ಮುಖಾಂತರ ಹಾಜರಾಗಿದ್ದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ರಾಜ್ಯ ಸರ್ಕಾರ ಜನಗಣತಿ ಮಾಡುತ್ತಿಲ್ಲ. ಬದಲಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸುತ್ತದೆ. ಸಮೀಕ್ಷೆ ಮೂಲಕ ಅಂಕಿ-ಅಂಶ ಸಂಗ್ರಹಿಸುತ್ತಿದೆ. ಈ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಂಕಿ-ಅಂಶ ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು.

420 ಕೋಟಿ ರು. ವೆಚ್ಚ ಮಾಡಿ ಈ ಸಮೀಕ್ಷೆ ನಡೆಸಲಾಗುತ್ತಿದೆ ದಸರಾ ರಜೆ ಹಿನ್ನೆಲೆಯಲ್ಲಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಈ ಸಮೀಕ್ಷೆಯಲ್ಲಿ ಬೃಹತ್‌ ಪ್ರಮಾಣಲ್ಲಿ ಪಾಲ್ಗೊಂಡು ಅಂಕಿ-ಅಂಶ ಸಂಗ್ರಹಿಸುತ್ತಾರೆ. 2014ರಲ್ಲಿ ಇದೇ ಸಮೀಕ್ಷೆ ನಡೆಸಲು ಹೊರಡಿಸಿದ ಆದೇಶವನ್ನು ಈ ಹಿಂದೆ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸಮೀಕ್ಷೆ ನಡೆಸಲು ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿರಲಿಲ್ಲ. 2014ರಲ್ಲಿ ಸಂಗ್ರಹಿಸಲಾಗಿದ್ದ ಅಂಕಿ-ಅಂಶಗಳನ್ನು ನವೀಕರಣ ಮಾಡಲಾಗುತ್ತಿದೆ. ಈಗಲೂ ಸಮೀಕ್ಷೆ ನಡೆಸಲು ನ್ಯಾಯಾಲಯ ಯಾವುದೇ ಮಧ್ಯಂತರ ತಡೆ ನೀಡಬಾರದು ಎಂದು ಕೋರಿದರು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌, ಸಮೀಕ್ಷೆ ಹೆಸರಿನಲ್ಲಿ ನಡೆಸಲಾಗುತ್ತಿರುವ ಅಂಕಿ-ಅಂಶ ಸಂಗ್ರಹ ಜನಗಣತಿಯ ಸ್ವರೂಪದಲ್ಲಿದೆ. ವಾಸ್ತವವಾಗಿ ಜನಗಣತಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟದ್ದು. ರಾಜ್ಯ ಸರ್ಕಾರಕ್ಕೆ ಈ ಅಧಿಕಾರವಿಲ್ಲ ಎಂದು ಆಕ್ಷೇಪಿಸಿದರು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೇಲ್ನೋಟಕ್ಕೆ ಅರ್ಜಿದಾರರ ವಾದದಲ್ಲಿ ಹುರುಳಿರುವಂತೆ ಕಾಣುತ್ತಿದೆ. ಸಮೀಕ್ಷೆಯನ್ನು ಸದ್ಯ ಮುಂದೂಡಲು ಸಾಧ್ಯವೇ? ಈಗ ಸಮೀಕ್ಷೆಗೆ ಅವಕಾಶ ನೀಡಿದರೆ ಅಂಕಿ-ಅಂಶ ಸಂಗ್ರಹವಾಗುತ್ತದೆ. ಒಮ್ಮೆ ಅಂಕಿ-ಅಂಶ ಸಂಗ್ರಹವಾದರೆ, ಅದನ್ನು ಮರಳಿಸಲು ಸಾಧ್ಯವಿದೆಯೇ? ಎಂದು ಕೇಳಿತು.

ಸರ್ಕಾರದ ಪರ ವಕೀಲರು, ಖಂಡಿತ ಮರಳಿಸಬಹುದು. ಅಂದರೆ, ಆ ಅಂಕಿ-ಅಂಶದ ಮೇಲೆ ಸರ್ಕಾರ ಯಾವುದೇ ತೀರ್ಮಾನ ಅಥವಾ ಮುಂದಿನ ಕ್ರಮ ಜರುಗಿಸುವುದಿಲ್ಲ ಎಂದು ನುಡಿದರು.

ಅಂತಿಮವಾಗಿ ಪೀಠವು ಸಮೀಕ್ಷೆಗೆ ತಡೆ ನೀಡುವಂತೆ ಕೋರಲಾಗಿರುವ ಮಧ್ಯಂತರ ಮನವಿ ಕುರಿತು ಮಂಗಳವಾರ ಮಧ್ಯಾಹ್ನ ವಿಚಾರಣೆ ನಡೆಸಿ ಆದೇಶ ಹೊರಡಿಸಲಾಗುವುದು. ಎಲ್ಲ ಪಕ್ಷಗಾರರು ತಮ್ಮ ವಾದಾಂಶ-ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬಹುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ