ಗಣಿ ಅಕ್ರಮ ಕುರಿತಂತೆ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡೋ ಮೂಲಕ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ರು. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದು, ಬಳ್ಳಾರಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಬೇಕಿದೆ ಎನ್ನುವದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಸೆ.30) : ಇಷ್ಟು ದಿನ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡಿದ್ದಾಯ್ತು. ಇದೀಗ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಬಳ್ಳಾರಿಯಲ್ಲಿ ಹಗಲಿರುಳು ಪರ್ಮಿಟ್ ಇಲ್ಲದೇ ನೂರಾರು ಲಾರಿಗಳಲ್ಲಿ ಮರಳು ಸಾಗಾಟ ಮಾಡಲಾಗುತ್ತಿದೆ. ಪರ್ಮೆಟ್ ಇಲ್ಲದೇ ಇದ್ರೂ ಓಡಾಟ ಮಾಡೋ ಲಾರಿಗಳು ಒಂದು ವೇಳೆ ಪೊಲೀಸ್ ಕಣ್ಣಿಗೆ ಬಿದ್ರೇ, ಕೇವಲ ಓವರ್ ಲೋಡ್ ಕೇಸ್ ಹಾಕಿ ಬಿಡುತ್ತಿದ್ದಾರೆ. ಅಧಿಕಾರಿಗಳ ಜಾಣ ಕುರುಡುತನಕ್ಕೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ವಂಚನೆಯಾಗುತ್ತಿದೆ.
ತುಂಗಭದ್ರಾ ಮತ್ತು ಹಗರಿ ನದಿ ತೀರದಲ್ಲಿ ನಡೆಯುತ್ತಿದೆ ಅಕ್ರಮ ದಂಧೆ
ಕಂಡು ಕಾಣದಂತಿರೋ ಅಧಿಕಾರಿಗಳ ಮುಂದೆಯೇ ಓಡಾಡುತ್ತಿವೆ ಮರಳು ತುಂಬಿದ ನೂರಾರು ಲಾರಿಗಳು. ಎಲ್ಲವೂ ಅಡ್ಜಸ್ಟಮೆಂಟ್ ಮೇಲೆಯೇ ನಡೆಯುತ್ತದೆ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ. ಹೌದು, ಮಳೆ ನಿಂತರೂ ಅದರ ಹನಿ ನಿಲ್ಲೋದಿಲ್ಲ ಅನ್ನೋ ಮಾತಿಗೆ ಬಳ್ಳಾರಿ ಅಕ್ರಮ ದಂಧೆಗಳು ಸಾಕ್ಷಿಯಾಗಿದೆ.
ಸರ್ಕಾರ ಬದಲಾಗಿದೆ, ಪೊಲೀಸರೂ ಬದಲಾಗಿ: ಸಿದ್ದರಾಮಯ್ಯ, ಪರಂ ತಾಕೀತು
ಕಳೆದ ಹತ್ತು ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆಯಿಂದಾಗಿ ಇಡೀ ದೇಶವೇ ಒಂದು ಕ್ಷಣ ಬಳ್ಳಾರಿಯತ್ತ ನೋಡುವಂತಾಗಿತ್ತು. ಅಕ್ರಮ ಗಣಿಗಾರಿಕೆ ಕೊಂಚ ನಿಂತಿರುವಾಗಲೇ ಇದೀಗ ಅಕ್ರಮ ಮರಳು ಗಣಿಗಾರಿಕೆ ಜೋರಾಗಿದೆ. ಬಳ್ಳಾರಿ ಜಿಲ್ಲೆ ತುಂಗಭದ್ರ ಮತ್ತು ವೇದಾವತಿ ನದಿ ತೀರದಲ್ಲಿ ಎಗ್ಗಿಲ್ಲದೇ ಮರಳು ಗಣಿಗಾರಿಕೆ ನಡೆಯುತ್ತಿದೆ. ಪ್ರತಿ ದಿನ ಬಳ್ಳಾರಿ, ಸಿರಗುಪ್ಪ, ಕಂಪ್ಲಿ ಭಾಗದ ನದಿ ತೀರದ ಹಲವು ಕಡೆಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತದೆ. ಒಂದೇ ಒಂದು ಪರ್ಮಿಟ್ ಪಡೆದು ಅದರಿಂದಲೇ ದಿನಕ್ಕೆ ಹತ್ತಕ್ಕೂ ಹೆಚ್ಚು ಲಾರಿಗಳಲ್ಲಿ ಮರಳು ಸಾಗಾಟ ಮಾಡುತ್ತಾರೆ. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಕ್ರಮ ತೆಗದುಕೊಳ್ಳುತ್ತಿಲ್ಲ. ಇದೀಗ ನಗರ ಪ್ರದೇಶದಲ್ಲಿ ಹಗಲು ಹೊತ್ತಲ್ಲಿ ಲಾರಿ ಓಡಾಟ ಮಾಡಬಾರದೆನ್ನುವ ನಿಯಮವಿದೆ. ಆದ್ರೂ ಲಾರಿ ಓಡಾಟ ಮಾಡುತ್ತಿರೋ ಹಿನ್ನೆಲೆ 9 ಲಾರಿಗಳನ್ನು ಪೊಲೀಸರು ಮತ್ತು ಆರ್‌ಟಿಓ ಅಧಿಕಾರಿಗಳು ತಡೆದು ತಪಾಸಣೆ ಮಾಡಿದಾಗ ಪರ್ಮಿಟ್ ಇಲ್ಲದೇ ಮರಳು ಸಾಗಾಟ ಮಾಡೋದು ಬಯಲಿಗೆ ಬಂದಿದೆ.
ಪೊಲೀಸರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಕಳ್ಳಾಟ
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿಯೂ ಇದೇ ರೀತಿಯಲ್ಲಿ ಅಕ್ರಮ ನಡೆಯುತ್ತಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಈ ಬಗ್ಗೆ ಟೀಕೆ ಮಾಡೋದ್ರ ಜೊತೆ ಹೋರಾಟ ಮಾಡೋ ಎಚ್ಚರಿಕೆ ನೀಡಿತ್ತು. ಆದ್ರೇ ಇದೀಗ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಇಡೀ ಬಳ್ಳಾರಿ ಜಿಲ್ಲೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಇದ್ಧಾರೆ. ಆದ್ರೇ ಇದೀಗ ಯಾರೊಬ್ಬರು ಕೂಡ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಇದೀಗ ಚಕಾರ ಎತ್ತುತ್ತಿಲ್ಲ. ಇನ್ನೂ ಇದೆಲ್ಲವೂ ಗೊತ್ತಿದ್ರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮಚ್ಚಿ ಕುಳಿತಿದ್ದಾರೆ. ಅಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡೋದಿರಲಿ ಇದೀಗ 9 ಲಾರಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ತನಿಖೆಗೆ ಮಾತ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎನ್ನಲಾಗುತ್ತಿದೆ.
ಮರಳು ಸಮಸ್ಯೆ ಪರಿಹಾರಕ್ಕೆ ಪ್ರತಿ ಜಿಲ್ಲಾ ಮಟ್ಟದಲ್ಲಿ ಸಭೆ: ಸಚಿವ ಕೃಷ್ಣ ಬೈರೇಗೌಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳುತ್ತಾರಾ?
ಗಣಿ ಅಕ್ರಮ ಕುರಿತಂತೆ ಬೆಂಗಳೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡೋ ಮೂಲಕ 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ರು. ಇದೀಗ ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದು, ಬಳ್ಳಾರಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಬೇಕಿದೆ ಎನ್ನುವದು ಸಾರ್ವಜನಿಕರ ಒತ್ತಾಯವಾಗಿದೆ.