
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು
ಕೊಡಗು (ಜು.4) : ಕೊಡಗು ಜಿಲ್ಲೆಗೆ ಬಾಂಗ್ಲಾ ದೇಶಿಗರ ಕಂಟಕವಿದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಹೀಗೆ ಕಾಡುವುದಕ್ಕೆ ಕಾರಣವಾಗಿರುವುದು ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಕೊಡಗಿನಲ್ಲಿ ಇರುವ ವ್ಯಕ್ತಿಯೊಬ್ಬ ನಾನು ಬಾಂಗ್ಲಾ ದೇಶದವನು ಎಂದು ಒಪ್ಪಿಕೊಂಡ ಬಳಿಕ ಸಂಚು ಬಯಲಾಗಿದೆ.
ಹೌದು ಬಹಳ ಹಿಂದಿನಿಂದ ಕೊಡಗು ಜಿಲ್ಲೆಯಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿ ಅಸ್ಸಾಂ ಕಾರ್ಮಿಕರು ಕಾಫಿ ತೋಟಗಳಿಗೆ ಕಾರ್ಮಿಕರಾಗಿ ಬಂದು ಕೆಲಸ ಮಾಡುತ್ತಿದ್ದಾರೆ. ಹೀಗೆ ಬಂದವರು ಇತ್ತೀಚೆಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು. ಹೀಗಾಗಿಯೇ ಇವರನ್ನು ಸ್ಥಳೀಯರೊಬ್ಬರು ನೀನು ಎಲ್ಲಿನವನು, ಬಾಂಗ್ಲಾ ದೇಶದಿಂದ ಬಂದವನೇ ಎಂದು ಕೇಳಿದ್ದಾರೆ. ಈ ವೇಳೆ ಆತ ನಾನು ಬಾಂಗ್ಲಾ ದೇಶದವನು ಎಂದು ಒಪ್ಪಿಕೊಂಡಿದ್ದಾನೆ. ಇದು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಭಾರೀ ಸಂಖ್ಯೆಯಲ್ಲಿ ನೆಲೆಸಿರುವ ಅಸ್ಸಾಂ ಕಾರ್ಮಿಕರನ್ನು ತೀವ್ರ ಅನುಮಾನದಿಂದ ನೋಡುವಂತೆ ಮಾಡಿದೆ. ಜೊತೆಗೆ ಕಾಫಿ ತೋಟಗಳಲ್ಲಿ ಬಾಂಗ್ಲಾ ದೇಶಿಗರು ಇರುವ ಸಾಧ್ಯತೆ ಇದೆ ಎನ್ನುವ ಅನುಮಾನ ಮೂಡಿಸಿದೆ.
ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಸಮೀಪದಲ್ಲಿ ಮದ್ಯದ ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬನನ್ನು ನೀನು ಎಲ್ಲಿಂದ ಬಂದವನು? ಬಾಂಗ್ಲಾದಿಂದ ಬಂದವನೇ ಎಂದು ಪ್ರಶ್ನಿಸಿದಾಗ ಆತ ಹೌದು ನಾನು ಬಾಂಗ್ಲಾದಿಂದ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಅಸ್ಮತ್ ಅಲಿ ಎಂಬಾತ ಒಪ್ಪಿಕೊಂಡಿದ್ದಾನೆ. ಮೊದಲು ಪಶ್ಚಿಮ ಬಂಗಾಳಕ್ಕೆ ಬಂದು, ಅಲ್ಲಿಂದ ಕರ್ನಾಟಕಕ್ಕೆ ಬಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಸ್ಥಳೀಯರಾದ ರಂಜಿತ್ ಎಂಬ ಏಜೆಂಟ್ ಒಬ್ಬರು ನಮ್ಮನ್ನು ಕರೆತಂದಿದ್ದಾರೆ ಎಂದು ಕೂಡ ಬಾಯಿಬಿಟ್ಟಿದ್ದಾನೆ. ಅಲ್ಲದೇ ಪೊನ್ನಂಪೇಟೆಯ ಹರಿಹರ ಗ್ರಾಮದಲ್ಲಿ ವಾಸವಾಗಿದ್ದೇನೆ ಎಂದು ಹೇಳಿದ್ದಾನೆ.
ಸ್ಥಳೀಯರು ಬಾಂಗ್ಲಾದೇಶಿ ವ್ಯಕ್ತಿಯ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವೀಡಿಯೋ ವೈರಲ್ ಆಗಿರುವುದನ್ನು ಗಮನಿಸುತ್ತಿದ್ದಂತೆ ಕೊಡಗು ಪೊಲೀಸರು ತೀವ್ರ ತಪಾಸಣೆಗೆ ಮುಂದಾಗಿದ್ದಾರೆ. ಕರೆತಂದಿರುವ ರಂಜಿತ್ ಯಾರೆಂದು ಪರಿಶೀಲಿಸುತ್ತಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾಫಿ ತೋಟಗಳಲ್ಲಿ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಕುರಿತು ಮಾತನಾಡಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ದೇಶದ ರಕ್ಷಣೆ ಕೆಲಸ ಮೊದಲ ಆದ್ಯತೆ. ಅಸ್ಸಾಂ ಕಾರ್ಮಿಕರು ಬಂದು ಕೆಲಸ ಮಾಡುವುದಕ್ಕೆ ನಮಗೆ ಅಭ್ಯಂತರವಿಲ್ಲ. ಆದರೆ ಅವರ ಹೆಸರಿನಲ್ಲಿ ಬಾಂಗ್ಲಾ ಅಥವಾ ರೋಹಿಂಗ್ಯಗಳು ಬಂದಿದ್ದರೆ ಅದು ಸರಿಯಲ್ಲ. ಬಾಂಗ್ಲಿಗರು ಕೆಲವರು ಇದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನಮಗೂ ಕೆಲವು ಅನುಮಾನಗಳಿದ್ದು ತನಿಖೆ ಮಾಡುತ್ತಿದ್ದೇವೆ. ಯಾವುದೇ ಅನುಮಾನ ಬಂದರು ನಮ್ಮ ಗಮನಕ್ಕೆ ತನ್ನಿ. ಇದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದ್ದು, ಯಾರೂ ಕೂಡ ಹಿಂದೇಟು ಹಾಕಬೇಡಿ ಎಂದಿದ್ದಾರೆ.
ಈಗಾಗಲೇ ಎರಡು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇನ್ನು ಒಂದು ಮನೆಯ ಪರಿಶೀಲನೆ ಇದೆ. ಕಾಫಿ ಎಸ್ಟೇಟ್, ಕಾಫಿ ವರ್ಕ್ಸ್ ಸೇರಿದಂತೆ ಹೊರ ರಾಜ್ಯದಿಂದ ಬಂದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಎಲ್ಲೇ ಆಗಲಿ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿರುವ ಕಡೆಗಳಲ್ಲಿ ಸ್ಥಳೀಯ ಜನರಿಗೆ ಜವಾಬ್ದಾರಿ ಇದೆ. ಸ್ಥಳೀಯರು ಜವಾಬ್ದಾರಿ ತೆಗೆದುಕೊಂಡು ಅಂತಹವರು ಯಾರಾದರು ಇದ್ದರೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ, ಸ್ಥಳೀಯರು ಇದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಎಸ್.ಪಿ. ರಾಮರಾಜನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ಈ ವೀಡಿಯೋದಿಂದಾಗಿ ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಅಕ್ರಮವಾಗಿ ನೆಲಸಿದ್ದಾರಾ ಎನ್ನುವ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ