
ಬೆಂಗಳೂರು (ಜು. 4): ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಮಹಿಳೆ ಎಂಬುದನ್ನೂ ನೋಡದೇ ಅಸಭ್ಯ ಭಾಷೆ ಬಳಕೆ ಆರೋಪದ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್ ರದ್ದುಪಡಿಸಬೇಕೆಂದು ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ವೇಳೆ ಹೈಕೋರ್ಟ್ ಅವರು ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದ್ದು, ಜುಲೈ 8ರವರೆಗೆ ಬಂಧನ ಮಾಡಬಾರದೆಂದು ತಾತ್ಕಾಲಿಕ ರಿಲೀಫ್ ನೀಡಿದೆ.
ಅರ್ಜಿದಾರರ ವಾದ:
ರವಿಕುಮಾರ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, 'ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಪ್ರತಿಭಟನೆಯ ಸಂದರ್ಭದಲ್ಲಿ ವಿಧಾನಸೌಧದ ಹೊರಗೆ ಮಾತನಾಡಿದ್ದರೂ, ದೂರಿನಲ್ಲಿ ಉಲ್ಲೇಖಿಸಿರುವಂತೆ ಟಿವಿಯಲ್ಲಿ ಹೇಳಿಕೆ ನೀಡಿದರೆಂಬುದಕ್ಕೆ ಪುರಾವೆ ಇಲ್ಲ, ಎಂದರು. ಜೊತೆಗೆ, 'ಈ ಪ್ರಕರಣದಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲ. ಅವರು ಮುಖ್ಯ ಕಾರ್ಯದರ್ಶಿಯ ಕಾರ್ಯಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇ ಹೊರತು, ಅಪಮಾನ ಮಾಡಲಿಲ್ಲ' ಎಂಬುದನ್ನು ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠದ ಮುಂದೆ ಒತ್ತಿಹೇಳಿದರು.
ಸರ್ಕಾರದ ವಾದ:
ಸರ್ಕಾರದ ಪರ ವಾದ ಮಂಡಿಸಿದ ಎಸ್‌ಪಿಪಿ ಬಿ.ಎ. ಬೆಳ್ಳಿಯಪ್ಪ, 'ಇದು ಸಾರ್ವಜನಿಕ ಜೀವನದಲ್ಲಿರುವ ಒಬ್ಬ ವ್ಯಕ್ತಿಯ ಅಸಭ್ಯ ಭಾಷೆ ಬಳಕೆಯ ಮಾದರಿಯಾಗಿದೆ. ಅವರ ಹೇಳಿಕೆಯಿಂದ ಮುಖ್ಯ ಕಾರ್ಯದರ್ಶಿಗೆ ಅವಮಾನವಾಗಿದೆ. ಟಿವಿ ವರದಿ ನೋಡಿ ದೂರು ಸಲ್ಲಿಸಲಾಗಿದೆ. ಹೇಳಿಕೆ ಹಾಗೂ ವರದಿಯ ನಡುವಿನ ವ್ಯತ್ಯಾಸ ಮುಖ್ಯವಾಗಿದೆ' ಎಂದು ಪ್ರತಿಪಾದಿಸಿದರು. ಜೊತೆಗೆ, 'ಐಎಎಸ್ ಅಧಿಕಾರಿಗಳು ಈ ಹೇಳಿಕೆಯ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ' ಎಂಬುದನ್ನೂ ಪೀಠದ ಗಮನಕ್ಕೆ ತರಲಾಯಿತು.
ಅರ್ಜಿ ವಿಚಾರಣೆ ವೇಳೆ, ಪೀಠಕ್ಕೆ ವಿಡಿಯೋ ರೆಕಾರ್ಡ್ ಪ್ರದರ್ಶಿಸಲಾಯಿತು. ವಿಡಿಯೋ ವೀಕ್ಷಿಸಿದ ನ್ಯಾಯಮೂರ್ತಿ, 'ಅದರಲ್ಲೇನು ಗಂಭೀರ ಎಂದು ತಕ್ಷಣ ಕಂಡುಬರುವುದಿಲ್ಲ. ಆರೋಪಿಸಿದ ಪದಗಳು ಎಲ್ಲಿ ಬಳಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿ' ಎಂದು ಪ್ರಶ್ನಿಸಿದರು. ಇದರೊಂದಿಗೆ, ತಾತ್ಕಾಲಿಕ ಬಂಧನವನ್ನು ತಡೆಹಿಡಿದು ರವಿಕುಮಾರ್‌ಗೆ ತಾತ್ಕಾಲಿಕ ರಿಲೀಫ್ ನೀಡಲಾಗಿದೆ. ಜೊತೆಗೆ, ರವಿಕುಮಾರ್ ಅವರು ತನಿಖೆಗೆ ಸಹಕರಿಸಬೇಕೆಂದು ಹೈಕೋರ್ಟ್ ಪೀಠ ಆದೇಶಿಸಿದೆ.
ಮುಂದಿನ ದಿನಾಂಕ:
ಜುಲೈ 8ರೊಳಗೆ ವಿಚಾರಣೆಯ ಮುಂದಿನ ಹಂತ ನಡೆಯಲಿದೆ. ಈ ತನಕ ಎನ್. ರವಿಕುಮಾರ್ ಅವರನ್ನು ಬಂಧಿಸಬಾರದು ಎಂದು ಪೀಠ ನಿಗದಿತ ತೀರ್ಪು ನೀಡಿದೆ. ಇದೊಂದು ರಾಜಕೀಯ ಪ್ರೇರಿತ ಎಫ್ಐಆರ್ ಎಂದು ಆರೋಪಿಸಿರುವ ಎಂಎಲ್‌ಸಿ ಎನ್. ರವಿಕುಮಾರ್‌ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದ್ದು, ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ