ಬೆಂಗಳೂರು (ಡಿ.16): ಅದೆಷ್ಟೇ ನಿಯಮಗಳನ್ನು ಮಾಡಿದರೂ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್‌ಗಳು ಕಡಿಮೆ ಆಗೋದೇ ಇಲ್ಲ. ಅದರಲ್ಲೂ ದೇಶದಲ್ಲಿಯೇ ಅತಿಹೆಚ್ಚು ದ್ವಿಚಕ್ರ ವಾಹನಗಳನ್ನು ಹೊಂದಿರುವ ನಗರವಾಗಿರುವ ಬೆಂಗಳೂರಿನಲ್ಲಿ ಬೈಕ್ ಸವಾರರು ಮಾಡುವ ಟ್ರಾಫಿಕ್ ಉಲ್ಲಂಘನೆಗಳು ಲೆಕ್ಕಕ್ಕಿಲ್ಲ. ಕೆಲಸಕ್ಕೆ ಹೋಗೋ ಅರ್ಜೆಂಟ್‌ನಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘನೆ ಮಾಡೋ ಅಭ್ಯಾಸ ನಿಮ್ಮದಾಗಿದ್ದರೆ, ಇನ್ನು ಮುಂದೆ ಅಂಥ ಕೆಲಸವೇ ನಿಮಗೆ ಇಲ್ಲದೇ ಹೋಗಬಹುದು. ಟ್ರಾಫಿಕ್ ನಿಯಮ ಉಲ್ಲಂಘನೆಗಗೂ ನೀವು ಕೆಲಸ ಕಳೆದುಕೊಳ್ಳೋದಕ್ಕೂ ಏನು ಲಿಂಕ್ ಅಂತಾ ಯೋಚನೆ ಮಾಡ್ತಿದ್ದೀರಾ? ಹಾಗಿದ್ದಲ್ಲಿ ನೀವು ಯೋಚನೆ ಮಾಡ್ತಿರೋದು ನಿಜ. ಇನ್ನು ಮುಂದೆ ಬೆಂಗಳೂರಿನಲ್ಲಿ ನೀವು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದಲ್ಲಿ, ನೀವು ಕೆಲಸ ಮಾಡುತ್ತಿರುವ ಕಂಪನಿಗೂ ಅದರ ವಿವರವನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸರು ಕಳಿಸಿಕೊಡಲಿದ್ದಾರೆ.
ರಸ್ತೆಗಳಲ್ಲಿ ವೇಗದ ಮಿತಿ ಮೀರಿ ಯರ್ರಾಬಿರ್ರಿಯಾಗಿ ಬೈಕ್ ಅಥವಾ ಕಾರು ಓಡಿಸಿದಲ್ಲಿ, ಕೆಲಸಕ್ಕೆ ಹೋಗೋ ಅರ್ಜೆಂಟ್‌ಅಲ್ಲಿ ಸಿಗ್ನಲ್ ಬ್ರೇಕ್ ಮಾಡಿದಲ್ಲಿ, ಬೇಕಾಬಿಟ್ಟಿಯಾಗಿ ಕಾರ್ ಓಡಿಸುವ ಅಭ್ಯಾಸವಿದ್ದಲ್ಲಿ ಇನ್ನು ಮುಂದೆ ಯೋಚಿಸಲೇಬೇಕು. ಈ ರೂಲ್‌ಗಳನ್ನು ಬ್ರೇಕ್ ಮಾಡಿದಲ್ಲಿ ಟ್ರಾಫಿಕ್ ಪೊಲೀಸರು ದಂಡ ಹಾಕೋದು ಮಾತ್ರವಲ್ಲ, ನೀವು ಕೆಲಸ ಮಾಡುವ ಕಂಪನಿಗೆ ಇದರ ನೋಟಿಸ್‌ಅನ್ನೂ ಕಳಿಸುವ ಅವಕಾಶ ಇರಲಿದೆ. ಪದೇ ಪದೇ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೆ, ಇದರ ನೋಟಿಸ್‌ಅನ್ನು ನಿಮಗೆ ಮಾತ್ರವಲ್ಲ ನಿಮ್ಮ ಕಂಪನಿಗೂ ಟ್ರಾಫಿಕ್ ಪೊಲೀಸರು ನೀಡಲಿದ್ದಾರೆ.
ರಸ್ತೆ ಸುರಕ್ಷತೆ & ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಪೂರ್ವ ವಿಭಾಗ ಈ ವಾರ ಬೆಂಗಳೂರು ನಗರ ಹೊರವರ್ತುಲ ರಸ್ತೆಯೂ ಸೇರಿ ವೈಟ್‌ಫೀಲ್ಡ್ ಒಳಗೊಂಡ ಭಾಗದಲ್ಲಿ ಕ್ರಮವನ್ನು ಜಾರಿಗೆ ತಂದಿದೆ. ಬೆಂಗಳೂರಿನ ಪ್ರಧಾನ ಐಟಿ ಕಾರಿಡಾರ್‌ನಲ್ಲಿ ಪ್ರಾಯೋಗಿಕವಾಗಿ ಈ ನಿಯಮ ಜಾರಿಗೆ ತರಲಾಗಿದ್ದು, ಈ ಮಾರ್ಗಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಇಳಿಕೆಯಾದರೆ ಬೆಂಗಳೂರಿನ ಇತರ ಭಾಗಕ್ಕೂ ಈ ರೂಲ್ಸ್ ವಿಸ್ತರಣೆ ಆಗುವ ನಿರೀಕ್ಷೆ ಹೆಚ್ಚಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ರೂಲ್‌ಗಳು ಬ್ರೇಕ್ ಆಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಈ ನಿರ್ಧಾರ ಮಾಡಿದ್ದಾರೆ. ಪ್ರಸ್ತುತ ವೈಟ್‌ಫೀಲ್ಡ್ ಭಾಗದಲ್ಲಿ ಇದನ್ನು ಜಾರಿ ಮಾಡಲಾಗಿದ್ದು, ಇದು ಯಶಸ್ವಿಯಾದಲ್ಲಿ ಬೆಂಗಳೂರಿನ ಇತರ ಭಾಗಗಳಿಗೆ ಶೀಘ್ರವೇ ಶಿಫ್ಟ್ ಆಗಬಹುದು. ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಚೇರಿ ಅಥವಾ ಮನೆಗೆ ತಲುಪುವ ಹಾದಿಯಲ್ಲಿ ಅತಿವೇಗವಾಗಿ ಗಾಡಿ ಓಡಿಸುತ್ತಿದ್ದಾರೆ. ಅದಲ್ಲದೆ, ವೀಕೆಂಡ್‌ಗಳ ಮೋಜು ಮಸ್ತಿಯ ವೇಳೆಯಲ್ಲೂ ಅತಿವೇಗದಲ್ಲಿ ಬೈಕ್-ಕಾರ್ ರೈಡ್ ಮಾಡುವುದಲ್ಲದೆ, ಸಿಗ್ನಲ್ ಜಂಪ್ ಮಾಡುತ್ತಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿ ಇರಿಸಿಕೊಳ್ಳುವ ಪೊಲೀಸರು ಇನ್ನು ಮುಂದೆ ನೋಟಿಸ್‌ಅನ್ನು ಆಯಾ ವ್ಯಕ್ತಿಯೊಂದಿಗೆ ಆತ ಕೆಲಸ ಮಾಡುವ ಕಂಪನಿಗೂ ಕಳಿಸಿಕೊಡಲಿದೆ.
ಬೆಂಗಳೂರಿನ ರಸ್ತೆಯಲ್ಲಿ ಫೆರಾರಿ ಸವಾರಿ, ಟ್ರಾಫಿಕ್‌ನಲ್ಲಿ ಸಿಲುಕಿರುವುದು ನೋಡಲು ನೋವಾಗುತ್ತೆ ಎಂದ ಫ್ಯಾನ್ಸ್!
"ನಾವು ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಪ್ರಾಯೋಗಿಕವಾಗಿ ಈ ಡ್ರೈವ್ ಅನ್ನು ಪ್ರಾರಂಭಿಸಿದ್ದೇವೆ. ಹಾಗಾಗಿ, ಯಾವುದೇ ಐಟಿ ಕಂಪನಿಯ ಉದ್ಯೋಗಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ, ನಿರ್ದಿಷ್ಟ ಉಲ್ಲಂಘನೆಯ ಬಗ್ಗೆ ಮಾಹಿತಿಯನ್ನು ಅವರ ಕಂಪನಿಗಳಿಗೆ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ. ಸವಾರಿ ಮಾಡುವಾಗ ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅವರಿಗೆ ಹೆಚ್ಚು ಅರಿವು ಮೂಡಿಸಲು ಮತ್ತು ಜಾಗೃತಗೊಳಿಸಲು ಈ ನಿರ್ಧಾರ ಮಾಡಲಾಗಿದೆ' ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ ವಿಭಾಗ - ಸಂಚಾರ) ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
Bengaluru Traffic ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ
ಡ್ರೈವ್‌ನ ಭಾಗವಾಗಿ, ಟ್ರಾಫಿಕ್ ಉಲ್ಲಂಘನೆ ಮಾಡಿದವರನ್ನು ಹಿಡಿದಾಗ, ಅವನು ಅಥವಾ ಅವಳು ಕೆಲಸ ಮಾಡುವ ಕಂಪನಿಯನ್ನು ಪರಿಶೀಲಿಸಲು ಮತ್ತು ಗುರುತಿಸಲು ವ್ಯಕ್ತಿಯ ಗುರುತಿನ ಚೀಟಿಯನ್ನು ಟ್ರಾಫಿಕ್ ಪೊಲೀಸರು ಪರಿಶೀಲಿಸುತ್ತಾರೆ ಮತ್ತು ಅದರ ಪ್ರಕಾರ, ಪೊಲೀಸರು ಈ ಟೆಕ್ ಕಂಪನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಅವರಿಗೆ ಇದರ ವಿವರ ಕಳುಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ