Vokkaliga quota: ಒಕ್ಕಲಿಗರ ಮೀಸಲಾತಿ ಹೆಚ್ಚಿಸದಿದ್ದರೆ ಬೃಹತ್ ಹೋರಾಟ; ಜ.23 ಡೆಡ್‌ಲೈನ್!

By Kannadaprabha NewsFirst Published Nov 28, 2022, 6:58 AM IST
Highlights
  • 12% ಮೀಸಲಿಗೆ ಜ.23ರ ಗಡುವು
  • ಮೀಸಲಿಗೆ ಈಗ ಒಕ್ಕಲಿಗರ ಕಹಳೆ
  •  ಮೀಸಲು ಹೆಚ್ಚಿಸದಿದ್ದರೆ ಹೋರಾಟದ ಎಚ್ಚರಿಕೆ
  •  ಬೆಂಗಳೂರಲ್ಲಿ ಪಕ್ಷಾತೀತವಾಗಿ ನಾಯಕರ ಸಭೆ

ಬೆಂಗಳೂರು (ನ.28) :ಹೊಸ ವರ್ಷದ ಜ.23 ರೊಳಗೆ ಜನಸಂಖ್ಯೆ ಆಧಾರದಲ್ಲಿ ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 12ಕ್ಕೆ ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಒಕ್ಕಲಿಗ ಸಮುದಾಯ ರಾಜ್ಯ ಸರ್ಕಾರಕ್ಕೆ ಒಕ್ಕೊರಲಿನ ಗಡುವು ನೀಡಿದೆ. ಈ ಮೂಲಕ ಹಲವು ಸಮು​ದಾ​ಯಗಳ ಬಳಿಕ ಒಕ್ಕ​ಲಿಗ ಸಮಾ​ಜವೂ ಮೀಸಲು ಹೋರಾ​ಟಕ್ಕೆ ಧುಮು​ಕಿ​ದೆ.

ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಭಾನುವಾರ ವಿವಿ ಪುರಂನ ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಹೋರಾಟದ ರೂಪುರೇಷೆ ಚರ್ಚಿಸುವ ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಶ್ರೀಗಳು, ಮುಖಂಡರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.

ಒಕ್ಕಲಿಗರು ಹೆಚ್ಚು ಮೀಸಲು ಕೇಳುವುದು ತಪ್ಪಲ್ಲ: ಸಿಎಂ ಬೊಮ್ಮಾಯಿ

ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಮೀಸಲಾತಿ ಪ್ರಮಾಣ ಶೇ.50 ಮೀರಬಹುದು ಎಂದು ಸುಪ್ರೀಂ ಕೋರ್ಚ್‌ ಆದೇಶ ನೀಡಿದ ನಂತರವಷ್ಟೇ ನಾವು ಕಾರ್ಯೋನ್ಮುಖವಾಗಿದ್ದೇವೆ. ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಮುಂದಿನ 25 ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 4.5 ಕೋಟಿ ತಲುಪಲಿದ್ದು ನಗರ ಬೆಳೆದಾಗ ಜಮೀನು ಕಳೆದುಕೊಂಡ ಒಕ್ಕಲುತನದವರು ಎಲ್ಲಿಗೆ ಹೋಗಬೇಕು?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ರಾಜ್ಯದ ಜನಸಂಖ್ಯೆಯಲ್ಲಿ ಶೇ.16ರಿಂದ 19ರಷ್ಟಿರುವ ಒಕ್ಕಲಿಗ ಸಮುದಾಯಕ್ಕೆ ಶೇ.12 ರಿಂದ 15ರಷ್ಟುಮೀಸಲಾತಿ ನೀಡಬೇಕು. ಸಮುದಾಯದಿಂದ ಬಿಟ್ಟು ಹೋಗಿರುವ ಉಪ ಜಾತಿಗಳನ್ನು ಸೇರ್ಪಡೆ ಮಾಡಬೇಕು. ನಗರವಾಸಿ ಒಕ್ಕಲಿಗರು ಓಬಿಸಿ ಮೀಸಲಾತಿ ಪಟ್ಟಿಯಲ್ಲೂ ಇಲ್ಲ. ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುತ್ತಿರುವ ಶೇ.10 ರಷ್ಟುಮೀಸಲಾತಿಯೂ ಸಿಗುತ್ತಿಲ್ಲ. ಇದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ದೇವೇಗೌಡ, ಎಸ್ಸೆಂಕೆಗೆ ಸನ್ಮಾನ:

ಸಮುದಾಯದ ಎರಡು ಕಣ್ಣುಗಳಂತಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಗೌರವಿಸಲು ಜ.23ರಂದು ‘ಒಕ್ಕಲಿಗರ ಮಹಾ ಸಂಗಮ’ ಎಂಬ ಬೃಹತ್‌ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅಷ್ಟರೊಳಗೆ ಸರ್ಕಾರ ಮೀಸಲಾತಿ ಹೆಚ್ಚಿಸಿದರೆ ಅಂದು ವಿಜಯೋತ್ಸವ ಆಚರಿಸಲಾಗುವುದು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ‘ಶೇ.2 ರಷ್ಟಿರುವ ಬ್ರಾಹ್ಮಣರಿಗೆ ಕೇಂದ್ರ ಸರ್ಕಾರ ಇಡಬ್ಲ್ಯುಎಸ್‌ ಅಡಿ ಶೇ.10 ರಷ್ಟುಮೀಸಲಾತಿ ನೀಡಲು ಕಾಯ್ದೆ ತಂದಿದೆ. ಆದರೆ ಹೆಚ್ಚು ಜನಸಂಖ್ಯೆ ಇರುವ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚು ಮಾಡುವುದು ಧರ್ಮವಾಗಿದೆ. ಹೋರಾಟದಿಂದ ಮಾತ್ರ ಈ ಸಮಸ್ಯೆ ಬಗೆಹರಿಯಲಿದ್ದು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸೋಣ’ ಎಂದು ಕರೆ ನೀಡಿದರು.

ಪಕ್ಷಾತೀತ ಸಭೆ, ಬೀದಿಗಿಳಿಯಲೂ ಸಿದ್ಧ:

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ‘ಇದೊಂದು ಪಕ್ಷಾತೀತ ಸಭೆ. ರಾಜ್ಯ ಸರ್ಕಾರ ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಬೇಕು. ಶ್ರೀಗಳು ತೋರಿಸಿದ ದಾರಿಯಲ್ಲಿ ನಾವು ನಡೆಯುತ್ತಿದ್ದು ಅವರು ಸೂಚಿಸಿದರೆ ಬೀದಿಗಿಳಿದು ಹೋರಾಟ ನಡೆಸಲೂ ಸಿದ್ಧ’ ಎಂದು ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಎಚ್‌.ಡಿ.ಕುಮಾರಸ್ವಾಮಿ ಅವರು ಅನಿವಾರ್ಯ ಕಾರಣಗಳಿಂದ ಆಗಮಿಸಿಲ್ಲ. ಆದರೆ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಅಬಕಾರಿ ಸಚಿವ ಗೋಪಾಲಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಾಸಕರಾದ ಬಿಜೆಪಿಯ ಎಂ.ಕೃಷ್ಣಪ್ಪ, ಕಾಂಗ್ರೆಸ್‌ನ ಎಂ.ಕೃಷ್ಣಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಗೂ ವಿವಿಧ ರಂಗಗಳ ಮುಖಂಡರು ಪಾಲ್ಗೊಂಡಿದ್ದರು.

ಒಕ್ಕ​ಲಿಗ ಮೀಸಲು ಬಗ್ಗೆ ಸಿಎಂ ಜೊತೆ ಚರ್ಚೆ: ಅಶೋ​ಕ್‌

ಬೆಂಗ​ಳೂ​ರು: ಸರ್ಕಾರದ ಪರವಾಗಿ ಒಕ್ಕ​ಲಿ​ಗರ ಮೀಸಲು ಬೇಡಿ​ಕೆ​ಯ ಮನವಿ ಸ್ವೀಕರಿಸಿ ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ​‘ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗರಿಗೆ ಮೀಸಲಾತಿ ಪ್ರಮಾಣ ಹೆಚ್ಚಳವಾಗಬೇಕಿದೆ. ರಾಜಕೀಯ ಬದಿಗಿಟ್ಟು ಪಕ್ಷಾತೀತವಾಗಿ ಎಲ್ಲರೂ ಒಂದಾಗಬೇಕಿದೆ. ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

‘ಜಾತಿ ಸಮೀಕ್ಷೆ ಹೆಸರಿನಲ್ಲಿ ಸಮಾಜದ ಜನಸಂಖ್ಯೆ ಕಡಿಮೆ ಇದೆ ಎಂದು ಬಿಂಬಿಸಿ ತುಳಿಯುವ ಕೆಲಸವನ್ನು ಕೆಲವರು ಮಾಡಿದರು. ಜನಸಂಖ್ಯೆ ಹೆಚ್ಚಾಗಿದೆ ಎಂದರೆ ರಾಜಕೀಯ ಅವಕಾಶ ನೀಡಬೇಕಾಗುತ್ತದೆ ಎಂದು ಗೊಂದಲ ನಿರ್ಮಾಣ ಮಾಡಿದರು. ಇದೀಗ ಶ್ರೀಗಳ ಮಾರ್ಗದರ್ಶನದಲ್ಲಿ ಎಲ್ಲರೂ ಒಟ್ಟಾಗಿ ಸಾಗೋಣ. ನಿಮ್ಮ ಜೊತೆ ನಾನೂ ಹೆಜ್ಜೆ ಹಾಕುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಡ್ಯಾ,ಮೇಜ್ ಕಂಟ್ರೋಲ್‌ಗೆ ಯತ್ನ, ಒಕ್ಕಲಿಗರ ಸಮರಕ್ಕೆ ಶರಣಾದ್ರಾ ಜಮೀರ್?

 

ಒಕ್ಕಲಿಗರು ಎಲ್ಲಿ ಹೋಗ್ಬೇಕು?

ಮೀಸಲು ಪ್ರಮಾಣ 50% ಮೀರಬಹುದು ಎಂಬ ಸುಪ್ರೀಂಕೋರ್ಚ್‌ ಆದೇಶ ಬಳಿಕ ನಾವು ಕಾರ್ಯೋನ್ಮುಖರಾಗಿದ್ದೇವೆ. 25 ವರ್ಷದಲ್ಲಿ ಬೆಂಗಳೂರು ಜನಸಂಖ್ಯೆ 4.5 ಕೋಟಿಗೆ ತಲುಪಲಿದೆ. ಜಮೀನು ಕಳೆದುಕೊಂಡ ಒಕ್ಕಲುತನದವರು ಎಲ್ಲಿಗೆ ಹೋಗಬೇಕು.

- ಆದಿಚುಂಚನಗಿರಿ ಶ್ರೀ

ಹೋರಾಟ ತೀವ್ರ

ಎಚ್‌.ಡಿ.ದೇವೇಗೌಡ, ಎಸ್‌.ಎಂ.ಕೃಷ್ಣ ಅವರಿಗೆ ಗೌರವ ಸಮರ್ಪಿಸಲು ಜ.23ರಂದು ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಷ್ಟರೊಳಗೆ ಮೀಸಲಾತಿ ನೀಡಿದರೆ ವಿಜಯೋತ್ಸವ ಆಚರಿಸುತ್ತೇವೆ. ಇಲ್ಲದಿದ್ದರೆ ಹೋರಾಟ ತೀವ್ರವಾಗಲಿದೆ.

- ನಂಜಾವಧೂತ ಸ್ವಾಮೀಜಿ

ಸಿಎಂ ಜತೆ ಚರ್ಚೆ

ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳವಾಗಬೇಕಿದೆ. ರಾಜಕೀಯ ಬದಿಗಿಟ್ಟು ಪಕ್ಷಾತೀತವಾಗಿ ಎಲ್ಲರೂ ಒಂದಾಗಬೇಕಿದೆ. ಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಜೊತೆ ಚರ್ಚಿಸಲಾಗುವುದು.

- ಆರ್‌.ಅಶೋಕ್‌ ಸಚಿವ

ಹೋರಾಟ ತೀವ್ರ

ಎಚ್‌.ಡಿ.ದೇವೇಗೌಡ, ಎಸ್‌.ಎಂ.ಕೃಷ್ಣ ಅವರಿಗೆ ಗೌರವ ಸಮರ್ಪಿಸಲು ಜ.23ರಂದು ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅಷ್ಟರೊಳಗೆ ಮೀಸಲಾತಿ ನೀಡಿದರೆ ವಿಜಯೋತ್ಸವ ಆಚರಿಸುತ್ತೇವೆ. ಇಲ್ಲದಿದ್ದರೆ ಹೋರಾಟ ತೀವ್ರವಾಗಲಿದೆ.

- ನಂಜಾವಧೂತ ಸ್ವಾಮೀಜಿ

ಒಕ್ಕಲಿಗರು ಬಿಜೆಪಿ ಪರ: ಎಚ್‌ಡಿಕೆ, ಡಿಕೆಶಿಗೆ ಅಶೋಕ್‌ ಟಾಂಗ್‌

ಮೀಸಲಾತಿ ಹೆಚ್ಚಳ ಭಿಕ್ಷೆಯಲ್ಲ, ನಮ್ಮ ಹಕ್ಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಸಂಸತ್‌ ಅಧಿವೇಶನ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮೀಸಲಾತಿಗಾಗಿ ನಾವು ಬೀದಿಗಿಳಿಯಲೂ ಸಿದ್ಧ.

-ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಒಗ್ಗಟ್ಟಿನಲ್ಲಿ ಶಕ್ತಿಯಿದೆ, ಶಕ್ತಿಯಿಂದ ಯಶಸ್ಸು ಸಿಗುತ್ತದೆ. ಕಾನೂನು ತೊಡಕುಗಳೂ ಇರುವುದರಿಂದ ಸರ್ಕಾರಕ್ಕೆ ಜ.23ರ ಗಡುವು ನೀಡದೆ ಸಮಯದ ಬಗ್ಗೆ ಶ್ರೀಮಂತಿಕೆಯನ್ನು ನೀಡಬೇಕು.

-ಡಾ. ಕೆ.ಸುಧಾಕರ್‌, ಆರೋಗ್ಯ ಸಚಿವ

click me!