ಕಳೆದ 17 ವರ್ಷಗಳ ಹಿಂದೆಯೇ ಸಹಶಿಕ್ಷಕರನ್ನಾಗಿ ಪರಿಗಣಿಸುವ ಆದೇಶವನ್ನು ಸರಕಾರ ಮಾಡಿದೆ. ಆದರೆ, ಇದುವರೆಗೂ ಅದನ್ನು ಅನುಷ್ಠಾನಗೊಳಿಸದೇ ದೈಹಿಕ ಶಿಕ್ಷಣ ಶಿಕ್ಷಕರ ಮೇಲೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ದೈಹಿಕ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಬಹಳಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ. ಈ ಮಲತಾಯಿ ಧೋರಣೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಇಲಾಖೆ ಸರಕಾರದ ಆದೇಶವನ್ನು ಈ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಅರುಣ್ ಶಹಾಪೂರ್
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು(ಆ.29): ಸಹಶಿಕ್ಷಕರಾಗಿ ಪರಿಗಣಿಸಿದ್ದರೂ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸೌಲಭ್ಯಗಳನ್ನು ನೀಡುವುದು ಹಾಗೂ ಇನ್ನಿತರೆ ಹಲವಾರು ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸದೇ ಇದ್ದಲ್ಲಿ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದೆ. ಇಂದು(ಗುರುವಾರ) ನಗರದ ಫ್ರೀಡಂ ಪಾರ್ಕನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ದೈಹಿಕ ಶಿಕ್ಷಣ ಶಿಕ್ಷಕರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಜೊತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. boycott, teachers day, demand, karnataka
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಅರುಣ್ ಶಹಾಪೂರ್ ಅವರು ಮಾತನಾಡಿ, ಕಳೆದ 17 ವರ್ಷಗಳ ಹಿಂದೆಯೇ ಸಹಶಿಕ್ಷಕರನ್ನಾಗಿ ಪರಿಗಣಿಸುವ ಆದೇಶವನ್ನು ಸರಕಾರ ಮಾಡಿದೆ. ಆದರೆ, ಇದುವರೆಗೂ ಅದನ್ನು ಅನುಷ್ಠಾನಗೊಳಿಸದೇ ದೈಹಿಕ ಶಿಕ್ಷಣ ಶಿಕ್ಷಕರ ಮೇಲೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ದೈಹಿಕ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಬಹಳಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿಯೇ ನಡೆದಿಲ್ಲ. ಈ ಮಲತಾಯಿ ಧೋರಣೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಇಲಾಖೆ ಸರಕಾರದ ಆದೇಶವನ್ನು ಈ ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಶಾಲಾ ತರಗತಿ ಕೊಠಡಿಯಲ್ಲಿ ಸೃಷ್ಟಿಯಾದ ಬಾಹ್ಯಾಕಾಶ: ವಿದ್ಯಾರ್ಥಿಗಳ ಬಾಹ್ಯಾಕಾಶಕ್ಕೆ ಕರೆದೊಯ್ದ ಸರ್ಕಾರಿ ಶಾಲೆ ಶಿಕ್ಷಕರು
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಎಸ್ ಚೌಡಪ್ಪ ಮಾತನಾಡಿ, ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಇಲಾಖೆ ಪರಿಗಣಿಸಿದ್ದರೂ, ಇದುವರೆಗೂ ಮುಖ್ಯಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ಸಿಗುವ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡುವ ಇಲಾಖಾ ಆದೇಶ ಆನುಷ್ಠಾನವಾಗಿಲ್ಲ. ಸಮಾನ ವೇತನ, ಸಮಾನ ವಿದ್ಯಾರ್ಹತೆ ಹಾಗೂ ಒಂದೇ ನೇಮಕಾತಿ ವಿಧಾನವಿದ್ದರೂ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಲ್ಲಿ ತಾರತಮ್ಯ ಧೋರಣೆ ಮಾಡಲಾಗುತ್ತಿದೆ. ಇದರಿಂದ ಶಿಕ್ಷಕರಲ್ಲಿ ಅಸಮಾನತೆ ಉಂಟಾಗುತ್ತಿದೆ. ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಸಂಘದ ಮಹಾ ಪೋಷಕರಾದ ವಿಧಾನಪರಿಷತ್ ಸಭಾಪತಿ ಶ್ರೀ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಹಾಗೂ ವಿಧಾನಪರಿಷತ್ತಿನ ಶಿಕ್ಷಕರ ಹಾಗೂ ಪದವಿಧರ ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಸಾಕಷ್ಟು ಶಿಕ್ಷಣ ಸಚಿವರುಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಈ ಬಗ್ಗೆ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರೂ ಕೂಡಾ ಸಮಸ್ಯೆ ಬಗೆಹರಿಸುವಂತೆ ಸರಕಾರಕ್ಕೆ ಟಿಪ್ಪಣಿ ನೀಡಿದ್ದಾರೆ. ಕೆಲವು ಬೇಡಿಕೆಗಳ ಈಡೇರಿಕೆಗೆ ಸರಕಾರದ ಮಟ್ಟದಲ್ಲಿ ಆದೇಶವಾಗಿದ್ದರೂ ಇಲಾಖೆಯಲ್ಲಿ ಅನುಷ್ಠಾನಗೊಳಿಸದೇ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ವೃತ್ತಿಯಲ್ಲಿ ಬಡ್ತಿಯಿಲ್ಲದೇ ಇರುವ ಪ್ರಾಥಮಿಕ ಶಾಲಾ ಶಿಕ್ಷಕರು [ಗ್ರೇಡ್ -2] ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೈಹಿಕ ಶಿಕ್ಷಣ ಸಂಯೋಜಕರು, ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆ ಸೃಜಿಸಿ ಮುಂಬಡ್ತಿ ನೀಡಬೇಕು. ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ದೈಹಿಕ ಶಿಕ್ಷಕರ ಹುದ್ದೆ ನಿಗದಿಪಡಿಸುವುದು ಸರಿಯಲ್ಲ. ದೈಹಿಕ ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ವೇತನ ಸಹಿತ ಅನುಮತಿ ನೀಡಬೇಕು. ಪ್ರತ್ಯೇಕ ದೈಹಿಕ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಸರಕಾರದ ಆದೇಶದಂತೆ ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆಗಳ ಸೃಜನೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಕಾಲಮಿತಿಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿಯುವ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಾಠಕ್ಕೂ ಸೈ, ಹೋರಾಟಕ್ಕೂ ಜೈ! ಶಿಕ್ಷಣ ಇಲಾಖೆ ವಿರುದ್ಧ ಇಂದು ಶಿಕ್ಷಕರ ಬೃಹತ್ ಪ್ರತಿಭಟನೆ
ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಅವರು ಪ್ರತಿಭಟನಾ ನಿರತ ದೈಹಿಕ ಶಿಕ್ಷಣ ಶಿಕ್ಷಕರಿಂದ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಚಂದ್ರಶೇಖರ್, ಖಜಾಂಚಿ ಡಿ.ವಿ ಬಾಲರಾಜ್, ಕಾರ್ಯಾಧ್ಯಕ್ಷ ಪಿ.ಡಿ ಕಾಗೋಡ್ ಉಪಾಧ್ಯಕ್ಷರಾದ ಅನಿಲ್ ಯು.ಆರ್, ಕೆ.ಎಸ್ ಶಾಸ್ತ್ರಿ, ಎಂ ಗೋಪಾಲ್, ಎಂ ಸದಾನಂದ, ರಾಜಾರಾಂ ಶೆಟ್ಟಿ, ಬೆಂಗಳೂರು ವಿಭಾಗೀಯ ಕಾರ್ಯಾಧ್ಯಕ್ಷ ಆರ್. ವಿಜಯ್ ಕುಮಾರ್, ತ್ಯಾಗಂ ಹರೇಕಳ, ಶಹಿನಾ ಎಫ್, ಮಲ್ಲಿಕಾರ್ಜುನ ಟಂಕಸಾಲೆ, ಕಾರ್ಯದರ್ಶಿ ಶ್ರೀಮತಿ ನಗೀನಾ ಖಾನಂ, ವಿಜಯಲಕ್ಷ್ಮಿ ಭಟ್, ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲಾ ಅಧ್ಯಕ್ಷರಾದ ಅಸ್ಲಾಂ ಪಾಷ, ಸುರೇಶ್ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳಾದ ಶ್ರೀರಾಮಯ್ಯ, ಕೌಶಲ್ಯಾರಾಣೀ, ಸೌಭಾಗ್ಯ, ಆರೋಗ್ಯಸ್ವಾಮಿ ಪ್ರಕಾಶ್ ಸೇರಿದಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಹಾಗೂ ಐದು ಸಾವಿರಕ್ಕೂ ಹೆಚ್ಚು ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು.