ರಾಜ್ಯದಲ್ಲಿ ರಾಹುಲ್ ಖರ್ಗೆ ಟ್ರಸ್ಟ್‌ಗೆ ಜಮೀನು ನೀಡಿದ ವಿವಾದದ ಬೆನ್ನಲ್ಲೇ, ಸರ್ಕಾರದಿಂದ ರಾಷ್ಟ್ರೋತ್ಥಾನ ಪರಿಷತ್ ಮತ್ತು ಚಾಣಕ್ಯ ವಿಶ್ವವಿದ್ಯಾಲಯಕ್ಕೆ ನೀಡಲಾದ ಜಮೀನುಗಳನ್ನು ವಾಪಸ್ ಪಡೆಯುವ ಎಚ್ಚರಿಕೆಯನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೀಡಿದ್ದಾರೆ.
ಬೆಂಗಳೂರು (ಆ.29): ಸರ್ಕಾರದಿಂದ ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡಲಾದ 5 ಎಕರೆ ಜಮೀನು ಹಾಗೂ ಚಾಣಕ್ಯ ವಿಶ್ವವಿದ್ಯಾಲಕ್ಕೆ ಕೊಟ್ಟ 116 ಎಕರೆ ಭೂಮಿಯನ್ನು ವಾಪಸ್ ಪಡೆಯಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ಆರೆಸ್ಸೆಸ್ ಅಂಗವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಕೋವಿಡ್ ನೆಪ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ 2023ರ ಡಿ.26ರಂದು ಪುನಃ 2 ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಎನ್ನುವುದನ್ನು ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ಖರ್ಗೆ ಪುತ್ರನಿಗೆ ಕೊಟ್ಟ ಸಿಎ ನಿವೇಶನದ ಬಗ್ಗೆ ಟೀಕಿಸುವ ಛಲವಾದಿ ನಾರಾಯಣಸ್ವಾಮಿ ಒಬ್ಬ 'ಶೆಡ್' ಗಿರಾಕಿ!
ಚಾಣಕ್ಯ ವಿಶ್ವವಿದ್ಯಾಲಯದ್ದೂ ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ, ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು. ಚಾಣಕ್ಯ ವಿವಿ ಗೂ ಕೇವಲ 50 ಕೋಟಿ ರೂ.ಗೆ ಈ ಜಮೀನು ನೀಡಿದ್ದು, ಇದರಿಂದ ಕೆಐಎಡಿಬಿಗೆ 137 ಕೋಟಿ ರೂಪಾಯಿ ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿಲ್ಲ ಎಂದು ಪ್ರಶ್ನಿಸಿದರು.
ಛಲವಾದಿ ನಾರಾಯಣಸ್ವಾಮಿ ಹೇಳುವ ಹಾಗೆ, ಕಲಬುರಗಿಯಲ್ಲಿ ಏರೋಸ್ಪೇಸ್ ಪಾರ್ಕ್‌ನಲ್ಲಿನ ನಿವೇಶನಕ್ಕೆ 72 ಅರ್ಜಿ ಬಂದಿರಲಿಲ್ಲ. ಬಂದಿದ್ದು ಕೇವಲ 6 ಅರ್ಜಿ. ಅದರಲ್ಲಿ ಮೂರು ವಸತಿ ಉದ್ದೇಶಗಳಿದ್ದವು. ಆದರೆ, ಅಲ್ಲಿ ಈಗಾಗಲೇ ವಸತಿ ಉದ್ದೇಶಕ್ಕೆ ನಿವೇಶನ ಕೊಟ್ಟಿದ್ದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳ ನಿರ್ಮಾಣಕ್ಕೆ ಅರ್ಜಿ ಬಂದಿದ್ದರೂ ಸಮರ್ಪಕ ದಾಖಲೆ ಸಲ್ಲಿಸಿರಲಿಲ್ಲ. ಇನ್ನು ಉಳಿದಿದ್ದು ರಾಹುಲ್ ಖರ್ಗೆ ಅವರ ಅರ್ಜಿ ಮಾತ್ರ. ಇವರು ಎಲ್ಲ ರೀತಿಯಲ್ಲೂ ಸಮರ್ಥರಿದ್ದು, ಸಾಮಾನ್ಯ ವರ್ಗದ ಕೋಟಾದಲ್ಲೂ ಅವರು ಅರ್ಹರಾಗಿದ್ದರು. ಆದರೂ, ಮೀಸಲಾತಿ ಅಡಿಯಲ್ಲಿ ಅವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿರುಗೇಟು ನೀಡಿದರು.
ಕೋಟಿ ಕೋಟಿ ಒಡೆಯನಾದರೂ ಮೀಸಲಾತಿಯಡಿ ಸಿಎ ನಿವೇಶನ ಪಡೆದ ಖರ್ಗೆ ಪುತ್ರ!
ಮತ್ತೊಂದೆಡೆ, ಮುರುಗೇಶ ನಿರಾಣಿ ಈ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕಗೆ ಮೀಸಲಾಗಿದ್ದ ಜಾಗವಾಗಿತ್ತು. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ. ಇಂಟರ್ನೆಟ್ ಜಾಲಾಡಿದರೆ ಇವರೆಲ್ಲರ ಜಾತಕ ಬಯಲಾಗುತ್ತದೆ ಎಂದು ಅಂಕಿಅಂಶಗಳ ಸಹಿತ ಸಚಿವ ಎಂ.ಬಿ. ಪಾಟೀಲ ವಿವರಿಸಿದರು.