Karnataka Cabinet Reshuffle: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ಬಿರುಸು

Kannadaprabha News   | Asianet News
Published : Jan 25, 2022, 09:34 AM IST
Karnataka Cabinet Reshuffle: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ಬಿರುಸು

ಸಾರಾಂಶ

ಬಿಜೆಪಿ ವರಿಷ್ಠರು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಬಗ್ಗೆ ತಲೆಕೆಡಿಸಿಕೊಂಡಿದ್ದರೆ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಚರ್ಚೆ ತೀವ್ರವಾಗತೊಡಗಿದೆ.

ಬೆಂಗಳೂರು (ಜ.25): ಬಿಜೆಪಿ ವರಿಷ್ಠರು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ (UP Election) ಬಗ್ಗೆ ತಲೆಕೆಡಿಸಿಕೊಂಡಿದ್ದರೆ ರಾಜ್ಯದ ಆಡಳಿತಾರೂಢ ಬಿಜೆಪಿಯಲ್ಲಿ (BJP) ಸಂಪುಟ ವಿಸ್ತರಣೆ (Cabinet Expansion) ಅಥವಾ ಪುನಾರಚನೆಯ ಚರ್ಚೆ ತೀವ್ರವಾಗತೊಡಗಿದೆ. ಇನ್ನೊಂದು ವರ್ಷಕ್ಕೆ ಸಾರ್ವತ್ರಿಕ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಈಗಲೇ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಅಭಿಪ್ರಾಯವನ್ನು ಹಲವು ಆಕಾಂಕ್ಷಿ ಶಾಸಕರು ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಈ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಸೂಚನೆಯನ್ನು ನಿರೀಕ್ಷಿಸುತ್ತಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಸಹಜವಾಗಿ ಆಕಾಂಕ್ಷಿಗಳು ಇರುತ್ತಾರೆ. ಅದು ತಪ್ಪೇನಿಲ್ಲ. ಯಾವಾಗ, ಯಾವ ರೀತಿ ಮಾಡಬೇಕೆನ್ನುವುದು ಪಕ್ಷದ ವರಿಷ್ಠರ ಗಮನದಲ್ಲಿದೆ ಎಂದರು. ನಾನು ಕೂಡ ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ವರಿಷ್ಠರು ಕರೆದು ಮಾತನಾಡಿದ ಸಂದರ್ಭದಲ್ಲಿ ಎಲ್ಲ ವಿವರಗಳನ್ನು ನೀಡುತ್ತೇನೆ ಎಂದು ಹೇಳುವ ಮೂಲಕ ವರಿಷ್ಠರ ತೀರ್ಮಾನವೇ ಅಂತಿಮ ಎಂಬ ಮಾತನ್ನು ಪರೋಕ್ಷವಾಗಿ ಹೇಳಿದರು.

ಮುಂಬರುವ ಚುನಾವಣೆಯನ್ನು ಗುರಿಯಾಗಿಸಿಕೊಂಡು ಸಂಪುಟದಲ್ಲಿ ಹಲವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಪ್ರಸ್ತಾಪ ಪಕ್ಷದ ವರಿಷ್ಠರಲ್ಲಿಯೂ ಇದೆ. ಆದರೆ, ಆ ಬಗ್ಗೆ ಚರ್ಚೆ ನಡೆಸಲು ಈಗ ಅವರಿಗೆ ಸಮಯವಿಲ್ಲದಂತಾಗಿದೆ. ಹೀಗಾಗಿ, ಪಂಚ ರಾಜ್ಯಗಳ ಚುನಾವಣೆ ಬಳಿಕ ಕರ್ನಾಟಕದ ಬಗ್ಗೆ ಗಮನಹರಿಸೋಣ ಎಂಬ ನಿಲವಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.

Cabinet Reshuffle ಸಂಪುಟ ಪುನಾರಚನೆಗೆ ಡೆಡ್‌ಲೈನ್ ಕೊಟ್ಟ ಬಿಜೆಪಿ ಶಾಸಕ ಯತ್ನಾಳ್

ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಂಪುಟ ಪುನಾರಚನೆಗಿಂತ ವಿಸ್ತರಣೆಯೇ ಸುರಕ್ಷಿತ ಎಂಬ ಭಾವನೆ ಬಂದಂತಿದೆ. ಪುನಾರಚನೆ ಸುಗಮವಾಗಿ ನಡೆದರೆ ಪರವಾಗಿಲ್ಲ. ಒಂದು ವೇಳೆ ಅದರಿಂದ ಅಸಮಾಧಾನ ತಲೆದೋರಿದರೆ ಅದನ್ನು ನಿಭಾಯಿಸುವುದರಲ್ಲೇ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಮೇಲಾಗಿ ಅದರ ನೇರ ಪರಿಣಾಮ ಮುಂದಿನ ಚುನಾವಣೆ ಮೇಲೆ ಬೀಳಬಹುದು ಎಂಬ ಆತಂಕವೂ ಅವರನ್ನು ಕಾಡುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಹೀಗಾಗಿಯೇ ಅವರು ಸಂಪುಟದ ಬಗ್ಗೆ ವರಿಷ್ಠರೇ ನಿರ್ಧಾರ ಕೈಗೊಳ್ಳಲಿ. ವಿಸ್ತರಣೆಯಾದರೂ ಮಾಡಲಿ ಅಥವಾ ಪುನಾರಚನೆಯನ್ನಾದರೂ ಮಾಡಲಿ. ಮುಂದಿನ ಬೆಳವಣಿಗೆಗಳನ್ನು ವರಿಷ್ಠರೇ ನಿಭಾಯಿಸಲಿ ಎಂಬ ನಿಲುವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಪಕ್ಷದ ರಾಜ್ಯ ನಾಯಕರಿಗೂ ಸಂಪುಟ ಕುರಿತಂತೆ ಯಾವ ನಿಲುವು ಕೈಗೊಳ್ಳಬೇಕು ಎಂಬ ಗೊಂದಲವಿದೆ. ಪುನಾರಚನೆಯಿಂದ ಗೊಂದಲ ಗೂಡಾದರೆ ಅದು ಮುಂದೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅದರ ಬದಲು ಒಂದಿಬ್ಬರನ್ನು ಕೈಬಿಟ್ಟು ಈಗಿರುವ ನಾಲ್ಕು ಸ್ಥಾನಗಳ ಜತೆಗೆ ಹೊಸಬರಿಗೆ ಅವಕಾಶ ನೀಡುವ ಮೂಲಕ ಸುಗಮವಾಗಿ ಪ್ರಕ್ರಿಯೆ ಮಾಡಿ ಮುಗಿಸುವುದು ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದಾರೆ ಎನ್ನಲಾಗಿದೆ.

ನಮಗೆ ಮಂತ್ರಿಗಿರಿ ಕೊಟ್ಟು ನೋಡಲಿ-ರೇಣು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಆದವರೇ ಸಚಿವರಾಗಬೇಕಾ? ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಪತನಕ್ಕೆ ನಾನು, ಯತ್ನಾಳ್‌ ಎಷ್ಟುಪ್ರಯತ್ನ ಮಾಡಿದ್ದೇವೆ ಗೊತ್ತಾ?, ಸಚಿವ ಸ್ಥಾನ ಕೊಟ್ಟು ನೋಡಲಿ, ಕೆಲಸ ಮಾಡಿ ತೋರಿಸುವ ತಾಕತ್ತು ನಮಗಿದೆ.
-ರೇಣುಕಾಚಾರ್ಯ, ಹೊನ್ನಾಳಿ ಶಾಸಕ

ಏನ್‌ಮಾಡ್ತಾರೋ ನೋಡೋಣ: ದಾವಣಗೆರೆಗೆ ಸಚಿವ ಸ್ಥಾನ ನೀಡುವಂತೆ ನಾವೆಲ್ಲಾ ಶಾಸಕರೂ ಕೇಳಿದ್ದೇವೆ. ಏನು ಮಾಡುತ್ತಾರೋ ನೋಡೋಣ. ಗುಜರಾತ್‌ ಮಾದರಿ ಸಂಪುಟ ನಮ್ಮ ರಾಜ್ಯದಲ್ಲೂ ಬಂದರೆ ನಾನೂ ಇರಲ್ಲ, ರೇಣುಕಾಚಾರ್ಯನೂ ಇರಲ್ಲ.
-ಎಸ್‌.ಎ.ರವೀಂದ್ರನಾಥ್‌, ದಾವಣಗೆರೆ ಶಾಸಕ

ಸಚಿವಗಿರಿ ಸಿಗದೆ ಬಿಜೆಪಿ ನಾಯಕರು ಅಸಮಾಧಾನ, ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದ ಸಿದ್ದು!

ಸಿಎಂ ಬದಲಾವಣೆ ಇಲ್ಲ-ಸೋಮಣ್ಣ: ರಾಜ್ಯದಲ್ಲೀಗ ಸಚಿವ ಸಂಪುಟ ವಿಚಾರಕ್ಕಿಂತ ಕೊರೋನಾ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ, 2023ರ ಚುನಾವಣೆ ಸಹ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ. ಈ ವಿಚಾರವನ್ನು ಪಕ್ಷದ ವರಿಷ್ಠರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
-ವಿ.ಸೋಮಣ್ಣ, ವಸತಿ ಸಚಿವರು

ಪಕ್ಷ ಸಂಘಟನೆಗೂ ಸಿದ್ಧ-ಈಶ್ವರಪ್ಪ: ನನಗೆ ಯಾವುದೇ ಜವಾಬ್ದಾರಿ ನೀಡಿದರೂ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸಲು ಸಿದ್ಧ. ವರಿಷ್ಠರು ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರೆ ಅದನ್ನೂ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಸಚಿವ ಸ್ಥಾನಕ್ಕಿಂತ ಪಕ್ಷ ಸಂಘಟನೆಯೇ ತಮಗೆ ಹೆಚ್ಚು ಪ್ರಿಯವಾದುದು.
-ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್ - ಪೊಲೀಸರ ಬಲೆಗೆ ಬಿದ್ದ ಮೂವರು!