
ಮಂಗಳೂರು[ಡಿ.22]: ನಾನು ಹೇಳಿಕೆ ನೀಡಿದ್ದು ಸರಿಯಲ್ಲ ಎಂದಾಗಿದ್ದರೆ, ಸಚಿವ ಸುರೇಶ್ ಅಂಗಡಿ ‘ಬಂದೂಕು ಇರುವುದು ಪೂಜೆ ಮಾಡಲಿಕ್ಕಲ್ಲ’ ಎಂದು ಹೇಳಿದ್ದು ಉದ್ವೇಗಕಾರಿ ಅಲ್ಲವಾ ಎಂದು ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.
ನಾನು ಜನರ ಭಾವನೆ ಏನಿದೆ ಅಂತ ಹೇಳಿದ್ದೇನೆಯೇ ಹೊರತು ಅದರಲ್ಲಿ ಯಾರಿಗೂ ಕೇಡು ಬಯಸಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ರಾಜ್ಯದಲ್ಲಿ ಹೀಗಾಗುವುದು ಬೇಡ, ಅದಕ್ಕಾಗಿ ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದೆ. ಆದರೆ ಅದನ್ನೇ ಮುಂದಿಟ್ಟುಕೊಂಡು ಗಲಭೆಗೆ ನಾನೇ ಕಾರಣ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂಗಡಿ ರಾಜೀನಾಮೆ ನೀಡಲಿ: ನಾನು ಮಾತನಾಡಿದರೆ ತಪ್ಪು. ಆದರೆ ಸುರೇಶ್ ಅಂಗಡಿ, ಸಿ.ಟಿ. ರವಿ ಮಾತನಾಡಿದರೆ ಸರಿಯಾ? ಗೋಲಿಬಾರ್‌ನ್ನು ಸಮರ್ಥಿಸಿಕೊಂಡಿರುವ ಸುರೇಶ್ ಅಂಗಡಿ ತಕ್ಷಣ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ ಖಾದರ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತನ್ನ ತಪ್ಪನ್ನು ಈಗ ಬೇರೆಯವರ ಮೇಲೆ ಹಾಕಿ ಗೂಬೆ ಕೂರಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಜನರಲ್ಲಿರುವ ಭಯದ ವಾತಾವರಣವನ್ನು ಸರ್ಕಾರ ತಿಳಿಗೊಳಿಸುವ ಕೆಲಸವನ್ನು ಮಾಡುವುದು ಬಿಟ್ಟು ಇಂಥ ವಿಚಾರಗಳನ್ನು ಮುಂದಿಟ್ಟು ಜನರ ದಿಕ್ಕು ತಪ್ಪಿಸಬೇಡಿ ಎಂದರು.
ಸುಳ್ಳುಗಳಿಗೆ ತಲೆ ಕೆಡಿಸಲ್ಲ: ನಾನು ಇಂಥ ಸುಳ್ಳು ಆರೋಪಗಳಿಗೆ ತಲೆಕೆಡಿಸಲ್ಲ. ನಾನು ಕಾಲೇಜು ನಾಯಕನಾಗಿದ್ದಾಗಿನಿಂದಲೇ ನನ್ನ ನಾಯಕತ್ವ ದಮನಕ್ಕೆ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದಾರೆ. ನಾನು ಶಾಸಕ ಆಗಿಲ್ಲದಿದ್ದ ಸಂದರ್ಭದಲ್ಲೂ ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದರು. ಆದರೆ ಕ್ಷೇತ್ರದ ಸರ್ವ ಧರ್ಮದ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ, ಕ್ಯಾಬಿನೆಟ್‌ನಲ್ಲೂ ಕೂರಿಸಿದ್ದಾರೆ. ಅಪಪ್ರಚಾರ ಮಾಡುವವರ ದುರುದ್ದೇಶ ಮುಂದೆಯೂ ಈಡೇರುವುದಿಲ್ಲ ಎಂದು ಖಾದರ್ ಹೇಳಿದರು.
ಕೇರಳದವರನ್ನು ಯಾಕೆ ಹಿಡೀಲಿಲ್ಲ?: ಮಂಗಳೂರಿನಲ್ಲಿ ಗಲಭೆಗೆ ಕೇರಳದಿಂದ ಜನ ಬಂದಿದ್ದಾರೆ ಎಂದು ಸರ್ಕಾರವೇ ಹೇಳುತ್ತದೆ. ಹಾಗೆ ಬಂದಿದ್ದರೆ ಒಬ್ಬರನ್ನೂ ಏಕೆ ಹಿಡಿಯಲಿಲ್ಲ? ಇದು ಸರ್ಕಾರದ ವೈಫಲ್ಯ ಅಲ್ಲವಾ? ಒಂದು ವೇಳೆ ಹಿಡಿದಿದ್ದರೆ ಅದರ ಲೆಕ್ಕ ನೀಡಲಿ ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸೆಕ್ಷನ್ 144 ಇದ್ದರೂ ಸಾವಿರಾರು ಮಂದಿ ಪ್ರತಿಭಟನೆ ನಡೆಸುತ್ತಾರೆ. ಆದರೆ ಮಂಗಳೂರಿನಲ್ಲಿ ನೂರಿನ್ನೂರು ಮಂದಿಗೂ ಏಕೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ? ಸಿಎಂ ಸ್ವತಃ ಗೋಲಿಬಾರ್‌ಗೆ ಆದೇಶ ನೀಡಿಲ್ಲ ಎನ್ನುತ್ತಾರೆ. ಹಾಗಾದರೆ ಫೈರಿಂಗ್ ಆದೇಶ ನೀಡಿದ್ದು ಯಾರು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಇದ್ದರು.
ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಏಕಿಲ್ಲ?
ಮಂಗಳೂರಿನಲ್ಲಿ ಗೋಲಿಬಾರ್ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ‘ಇಷ್ಟುಗುಂಡು ಹೊಡೆದರೂ ಒಬ್ಬರೂ ಸಾಯಲಿಲ್ಲವಲ್ಲ’ ಎಂದು ಹೇಳುವುದಾಗಿದ್ದರೆ, ಸರ್ಕಾರವೇ ಗೋಲಿಬಾರ್‌ಗೆ ಆದೇಶ ಮಾಡಿರುವ ಸಂಶಯ ಬಲವಾಗಿದೆ. ಸರ್ಕಾರ ಸರಿಯಾಗಿದ್ದಿದ್ದರೆ ಹೀಗೆ ಹೇಳಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿತ್ತು. ಕನಿಷ್ಠ ನೋಟಿಸ್ ಕೂಡ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ಗಲಭೆಗೆ ಬೇರೆಯವರು ಕಾರಣ ಎನ್ನುತ್ತಾರೆ. ಕೂಡಲೆ ಈ ಕುರಿತು ತನಿಖೆ ನಡೆಯಬೇಕು ಎಂದು ಖಾದರ್ ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ