ಮಂಗಳೂರಿಗೆ ಹೋಗುವೆ, ಬೇಕಿದ್ದರೆ ಬಂಧಿಸಿ: ಸಿದ್ದರಾಮಯ್ಯ

By Kannadaprabha NewsFirst Published Dec 22, 2019, 7:53 AM IST
Highlights

ಮಂಗಳೂರಿಗೆ ಹೋಗುವೆ, ಬೇಕಿದ್ದರೆ ಬಂಧಿಸಿ: ಸಿದ್ದು| ಭೇಟಿ ನಿರ್ಬಂಧಿಸಿ ನನಗೇ ನೋಟಿಸ್‌ ನೀಡುವ ಮೂಲಕ ರಾಜ್ಯದಲ್ಲಿ ಅಘೋಷಿತ ತುರ್ತುಸ್ಥಿತಿ| ನಾಳೆ ಮಂಗಳೂರು ಭೇಟಿ ನಿಶ್ಚಿತ: ನಮ್ಮಿಂದ ಸರ್ಕಾರ ಏನನ್ನು ಬಚ್ಚಿಡುತ್ತಿದೆ?

ಬೆಂಗಳೂರು[ಡಿ.22]: ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಿಂದ ಗಲಭೆಪೀಡಿತವಾಗಿದ್ದ ಮಂಗಳೂರು ನಗರಕ್ಕೆ ತಮ್ಮ ಭೇಟಿಯನ್ನು ನಿರ್ಬಂಧಿಸಿರುವುದಕ್ಕೆ ಕೆಂಡಾಮಂಡಲಗೊಂಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಂಧನ ಭೀತಿಯನ್ನು ಲೆಕ್ಕಿಸದೆ ಸೋಮವಾರ (ಡಿ.23) ಮಂಗಳೂರಿಗೆ ಭೇಟಿ ನೀಡುವುದಾಗಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಎಂದರೆ ಛಾಯಾ ಮುಖ್ಯಮಂತ್ರಿ (ಶಾಡೋ ಸಿಎಂ) ಇದ್ದಂತೆ. ಇಂತಹ ಹುದ್ದೆಯಲ್ಲಿರುವ ನನಗೆ ನಿರ್ಬಂಧ ನೋಟಿಸ್‌ ನೀಡುವ ಮೂಲಕ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಸರ್ಕಾರ ನನ್ನನ್ನು ಬಂಧಿಸಿದರೂ ಸರಿ ಡಿ.23 ರಂದು ಸೋಮವಾರ ಮಂಗಳೂರಿಗೆ ತೆರಳುತ್ತೇನೆ ಎಂದರು.

ಅನಾರೋಗ್ಯದ ನಡುವೆಯೂ ಮಂಗಳೂರಿಗೆ ಹೋಗಲು ತೀರ್ಮಾನ ಮಾಡಿದ್ದೆ. ಆದರೆ, ಶುಕ್ರವಾರ ಬೆಂಗಳೂರಿನಿಂದ ನಾವು ತೆರಳಬೇಕಿದ್ದ ವಿಶೇಷ ವಿಮಾನಕ್ಕೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅನುಮತಿ ನಿರಾಕರಿಸಿದ್ದಾರೆ. ಇದೀಗ ಡಿ.22ರಂದು ರಾತ್ರಿ 12 ಗಂಟೆವರೆಗೆ ಯಾವುದೇ ರೀತಿಯಲ್ಲೂ ಮಂಗಳೂರು ಪ್ರವೇಶಿಸದಂತೆ ಮಂಗಳೂರು ಪೊಲೀಸ್‌ ಆಯುಕ್ತರು ನನಗೆ ನೋಟಿಸ್‌ ನೀಡಿದ್ದಾರೆ. ಕಾಂಗ್ರೆಸ್‌ನ ಯಾವ ನಾಯಕರೂ ಮಂಗಳೂರಿಗೆ ಹೋಗದಂತೆ ತಡೆಯುವ ಮೂಲಕ ಸರ್ಕಾರ ಏನನ್ನು ಬಚ್ಚಿಡಲು ಹೊರಟಿದೆ ಎಂದು ಪ್ರಶ್ನಿಸಿದರು. ಅಲ್ಲದೆ, ನಾವೇನು ಗಲಭೆ ಸೃಷ್ಟಿಸಲು ಹೋಗುತ್ತಿರಲಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕರೆ ನೀಡಲೇ ಹೋಗುತ್ತಿದ್ದೆವು. ಆದರೆ ನಮ್ಮ ಹಕ್ಕನ್ನು ಹತ್ತಿಕ್ಕುವ ಮೂಲಕ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಡಲು ಯತ್ನಿಸುತ್ತಿದೆ ಎಂದು ದೂರಿದರು.

+++

ಶಾಂತಿಗೆ ಕರೆ ನೀಡಲು ಹೋಗುತ್ತಿದ್ದೆ:

ಶುಕ್ರವಾರ ನಮಗೆ ಅನುಮತಿ ನಿರಾಕರಿಸಿ ಶನಿವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಅನುಮತಿ ನೀಡಿದ್ದಾರೆ. ಶಾಡೋ ಸಿಎಂ ಎಂದೇ ಹೆಸರಾಗಿರುವ ವಿರೋಧಪಕ್ಷದ ನಾಯಕರಿಗೆ ಅನುಮತಿ ನೀಡುವುದಿಲ್ಲ ಎಂದರೆ ಹೇಗೆ? ನಾವೇನು ಗಲಭೆ ಸೃಷ್ಟಿಸಲು ಹೋಗುತ್ತಿರಲಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕರೆ ನೀಡಲೇ ಹೋಗುತ್ತಿದ್ದೆವು. ಆದರೆ ನಮ್ಮ ಹಕ್ಕನ್ನು ಹತ್ತಿಕ್ಕುವ ಮೂಲಕ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಡಲು ಯತ್ನಿಸುತ್ತಿದೆ ಎಂದು ದೂರಿದರು.

ಬಿಜೆಪಿಯವರು ದಿನಕ್ಕೊಬ್ಬರನ್ನು ಸಾಯಿಸಿ:

ಉತ್ತರ ಪ್ರದೇಶದಲ್ಲಿ ಹನ್ನೊಂದು ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ರಾಜ್ಯದಲ್ಲಿ ಇಬ್ಬರನ್ನು ಕೊಂದಿದ್ದಾರೆ. ಅನಗತ್ಯವಾಗಿ ಗಲಾಟೆ ಇಲ್ಲದ ಕಡೆಯೂ ನಿಷೇಧಾಜ್ಞೆ ಜಾರಿ ಮಾಡಿ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಒಂದು ಸಣ್ಣ ಲಾಠಿ ಚಾrfjf ಹಾಗೂ ಕಾವೇರಿ ಗಲಾಟೆ ವೇಳೆ 24 ಗಂಟೆ 144 ಸೆಕ್ಷನ್‌ ಜಾರಿ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಗೋಲಿಬಾರ್‌ ನಡೆಸಿ ಇಬ್ಬರು ರೈತರನ್ನು ಪೊಲೀಸರು ಕೊಂದಿದ್ದರು.

ಈ ವೇಳೆ ವಿರೋಧಪಕ್ಷದ ನಾಯಕರಾದ ನಾವೆಲ್ಲರೂ ಭೇಟಿ ನೀಡಿ ಸಾಂತ್ವನ ಹೇಳಿದ್ದೆವು. ಇದೀಗ ನಮಗೆ ಕಾನೂನು ಸುವ್ಯವಸ್ಥೆ ಪಾಠ ಮಾಡಲು ಬರುತ್ತಿದ್ದಾರೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದರೆ ಅದಕ್ಕೆ ಬಿಜೆಪಿಯ ಕುಮ್ಮಕ್ಕು ಕಾರಣ. ರೈಫಲ್‌ ಇಟ್ಟುಕೊಂಡಿರುವುದು ಪೂಜೆ ಮಾಡೋಕಾ ಎಂದು ಕೇಂದ್ರ ಸಚಿವರೊಬ್ಬರು ಪ್ರಶ್ನೆ ಮಾಡುತ್ತಾರೆ. ಇದು ಕುಮ್ಮಕ್ಕಲ್ಲವೇ? ಹಾಗಾದರೆ ಬಿಜೆಪಿಯವರು ದಿನಕ್ಕೊಬ್ಬರನ್ನು ಸಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!