ತಾಯಿಗಾಗಿಯೇ ಐಎಎಸ್ ಅಧಿಕಾರಿಯಾದ ಮಗ: ತಾಯಿ ಸಮಾಧಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ!

Published : Nov 26, 2025, 04:17 PM IST
Mahantesh Bilagi

ಸಾರಾಂಶ

ಕಾರು ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಜೀವನವು ನೋವಿನಿಂದ ಪ್ರೇರಿತವಾಗಿತ್ತು. ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ತಾಯಿಯ ಪಿಂಚಣಿ ನೋವಿನಿಂದ ಪ್ರೇರಿತರಾಗಿ 'ಪಿಂಚಣಿ ಅದಾಲತ್' ಜಾರಿಗೆ ತಂದಿದ್ದರು. ರಾಮದುರ್ಗದಲ್ಲಿ ಅವರ ತಾಯಿಯ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

ಕಲಬುರಗಿ (ನ.26): ನಿನ್ನೆ ಸಂಜೆ ವೇಳೆ ಕಾರು ಅಪಘಾತದಲ್ಲಿ ಅಕಾಲಿಕವಾಗಿ ನಿಧನರಾದ ಜನಪ್ರಿಯ ಮತ್ತು ದಕ್ಷ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಜೀವನಗಾಥೆ ಇದೀಗ ಎಲ್ಲರ ಕಣ್ಣಂಚಲ್ಲಿ ನೀರು ತರಿಸುತ್ತಿದೆ. ಬರೀ ಅಧಿಕಾರಿಯಾಗಿರದೇ, ಜನರ ನಾಡಿಮಿಡಿತ ಅರಿತ ನಾಯಕನಂತಿದ್ದ ಬೀಳಗಿ ಅವರ ಅಂತ್ಯಕ್ರಿಯೆಯು ಇಂದು (ನ.26) ರಾಮದುರ್ಗದಲ್ಲಿ ಅವರ ತಾಯಿಯ ಸಮಾಧಿಯ ಪಕ್ಕದಲ್ಲೇ ನೆರವೇರಲಿದ್ದು, ಇದು ಮತ್ತಷ್ಟು ನೋವಿನ ಸನ್ನಿವೇಶ ಸೃಷ್ಟಿಸಿದೆ.

₹25 ಪಿಂಚಣಿಗಾಗಿ ₹100 ಲಂಚದ ನೋವು

ಮಹಾಂತೇಶ್ ಬೀಳಗಿ ಅವರು ತಾವೇಕೆ ಐಎಎಸ್ ಅಧಿಕಾರಿಯಾದೆ ಎಂಬುದರ ಕುರಿತು ಒಂದು ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಯು ಅವರ ಸಮಾಜಮುಖಿ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಮಹಾಂತೇಶ್ ಅವರಿಗೆ ಕೇವಲ 5 ವರ್ಷ ವಯಸ್ಸಿದ್ದಾಗಲೇ ತಂದೆ ಮೃತರಾಗಿದ್ದರು. ಆ ಕಷ್ಟದ ದಿನಗಳಲ್ಲಿ, ಅವರ ತಾಯಿ ಮಾಸಿಕ ₹25 ವಿಧವಾ ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಹಲವು ದಿನ ಅಲೆದಾಡಿದ್ದರು.

ಕೊನೆಗೆ ನನ್ನ ತಾಯಿ ಆ 25 ರೂಪಾಯಿ ಪಿಂಚಣಿಯ ಆದೇಶ ಪತ್ರ ಪಡೆಯಲು ಅಧಿಕಾರಿಗಳಿಗೆ ₹100 ಲಂಚ ನೀಡಬೇಕಾಯಿತು' ಎಂದು ಮಹಾಂತೇಶ್ ಬೀಳಗಿ ಅಂದು ನೋವಿನಿಂದ ಹೇಳಿಕೊಂಡಿದ್ದರು. ಬಡತನದಲ್ಲೂ ತಾಯಿಗೆ ಆದ ಈ ಅನ್ಯಾಯವನ್ನು ಬರಿ ಕಣ್ಣಾರೆ ಕಂಡಿದ್ದ ಮಹಾಂತೇಶ್, ಈ ನೋವು ಸಮಾಜದ ಬೇರೆ ಯಾರಿಗೂ ಆಗಬಾರದು ಎಂದು ಅಂದೇ ದೃಢ ಸಂಕಲ್ಪ ಮಾಡಿದ್ದರು. ಬಡತನವನ್ನೂ ಲೆಕ್ಕಿಸದೆ ಶ್ರದ್ಧೆಯಿಂದ ಓದಿ ಅವರು ಐಎಎಸ್ ಅಧಿಕಾರಿಯಾದರು.

'ಪಿಂಚಣಿ ಅದಾಲತ್' ಜಾರಿಗೆ ತಂದ ಜನಪ್ರಿಯತೆ

ಜಿಲ್ಲಾಧಿಕಾರಿಯಾದ ತಕ್ಷಣವೇ ಮಹಾಂತೇಶ್ ಬೀಳಗಿ ಅವರು ಮೊದಲಿಗೆ ಜಾರಿಗೆ ತಂದ ಜನಪರ ಕಾರ್ಯಕ್ರಮವೇ ಪಿಂಚಣಿ ಅದಾಲತ್. 'ಜಿಲ್ಲಾಧಿಕಾರಿಯಾದ ತಕ್ಷಣವೇ ನಾನು ಪಿಂಚಣಿ ಅದಾಲತ್ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದೆ. ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಹೋಗುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ತೆರಳಿ ಅರ್ಹ ಫಲಾನುಭವಿಗಳಿಗೆ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸಬೇಕು' ಎಂದು ಅವರು ಈ ಯೋಜನೆಯ ಉದ್ದೇಶವನ್ನು ವಿವರಿಸಿದ್ದರು. ತಮ್ಮ ತಾಯಿಗೆ ಆದ ಅನ್ಯಾಯದ ನೆನಪು, ಅವರನ್ನು ಸಾಮಾನ್ಯ ಜನರ ಸೇವಕರನ್ನಾಗಿ ಮಾಡಿತ್ತು.

ಸಾಮಾನ್ಯ ಜನರೊಂದಿಗಿನ ಒಡನಾಟ

ಹಿರಿಯ ಅಧಿಕಾರಿಯಾಗಿದ್ದರೂ ಮಹಾಂತೇಶ್ ಬೀಳಗಿ ಅವರು ಎಂದಿಗೂ ಜನರೊಂದಿಗೆ ಸಾಮಾನ್ಯರಂತೆ ಬೆರೆಯುತ್ತಿದ್ದರು. ಇವರ ಜನಪರವಾದ ಅನೇಕ ಕೆಲಸಗಳು ಮತ್ತು ಅಧಿಕಾರಿಶಾಹಿಯ ಗಡಸುತನ ಇಲ್ಲದ ಇವರ ಸರಳ ಸ್ವಭಾವದಿಂದಾಗಿ ಅವರು ರಾಜ್ಯಾದ್ಯಂತ ಜನಪ್ರಿಯರಾಗಿದ್ದರು. ಇಂತಹ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯ ಅಕಾಲಿಕ ನಿಧನವು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಇಂದು ರಾಮದುರ್ಗದಲ್ಲಿ ನಡೆಯಲಿರುವ ಅವರ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ. ತಾಯಿ ಅನುಭವಿಸಿದ ನೋವಿನಿಂದ ಪ್ರೇರಿತರಾಗಿ ಅಧಿಕಾರಿಯಾಗಿ, ಅಂತಿಮವಾಗಿ ಅದೇ ತಾಯಿಯ ಸಮಾಧಿಯ ಪಕ್ಕದಲ್ಲೇ ಚಿರನಿದ್ರೆಗೆ ಜಾರುತ್ತಿರುವ ಮಹಾಂತೇಶ್ ಬೀಳಗಿಯವರ ಕಥೆ ಎಲ್ಲರಿಗೂ ಪ್ರೇರಣೆಯಾಗುವುದರಲ್ಲಿ ಸಂಶಯವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!