ನಕಲಿ ನಂದಿನಿ ತುಪ್ಪ ಹಗರಣದ ಕಿಂಗ್‌ಪಿನ್ ಶಿವಕುಮಾರ್, ರಮ್ಯಾ ಬಂಧನ; ತಮಿಳುನಾಡಲ್ಲಿ ಫ್ಯಾಕ್ಟರಿ ಪತ್ತೆ!

Published : Nov 26, 2025, 12:31 PM IST
Nandini Ghee

ಸಾರಾಂಶ

ಬೆಂಗಳೂರು ಸಿಸಿಬಿ ಪೊಲೀಸರು ನಕಲಿ ನಂದಿನಿ ತುಪ್ಪ ತಯಾರಿಕೆ ಹಗರಣದ ಪ್ರಮುಖ ಸೂತ್ರಧಾರರಾದ ಮೈಸೂರು ಮೂಲದ ದಂಪತಿಯನ್ನು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದ ಈ ದಂಪತಿ, ರಾಜ್ಯಾದ್ಯಂತ ನಕಲಿ ಉತ್ಪನ್ನಗಳನ್ನು ವಿತರಿಸುತ್ತಿದ್ದರು.

ಬೆಂಗಳೂರು (ನ.26): ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ನಕಲಿ ನಂದಿನಿ ತುಪ್ಪ ತಯಾರಿಕೆ ಮತ್ತು ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಸಿಸಿಬಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಈ ಹಗರಣದ ಪ್ರಮುಖ ಸೂತ್ರಧಾರರಾದ ಮೈಸೂರು ಮೂಲದ ಗಂಡ ಮತ್ತು ಹೆಂಡತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಿವಕುಮಾರ್ ಮತ್ತು ಅವರ ಪತ್ನಿ ರಮ್ಯಾ ಎಂದು ಗುರುತಿಸಲಾಗಿದೆ. ಸಿಸಿಬಿ ಪೊಲೀಸರ ತನಿಖೆ ವೇಳೆ ಈ ದಂಪತಿಯೇ ನಕಲಿ ನಂದಿನಿ ಉತ್ಪನ್ನಗಳ ತಯಾರಿಕೆ ಘಟಕದ ಕಿಂಗ್‌ಪಿನ್‌ಗಳು ಎಂಬುದು ದೃಢಪಟ್ಟಿದೆ.

ತಮಿಳುನಾಡಿನಲ್ಲಿ ನಕಲಿ ಉತ್ಪಾದನಾ ಘಟಕ

ಸಿಸಿಬಿ ಡಿಸಿಪಿ-1 ಶ್ರೀಹರಿಬಾಬು ಅವರು ನೀಡಿರುವ ಮಾಹಿತಿ ಪ್ರಕಾರ, ಆರೋಪಿ ದಂಪತಿಗಳು ನೆರೆಯ ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಸ್ಥಾಪಿಸಿದ್ದರು. ಈ ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ನಕಲಿ ತುಪ್ಪ ತಯಾರಿಸಲು ಬಳಸುತ್ತಿದ್ದ ದೊಡ್ಡ ದೊಡ್ಡ ಹೈಟೆಕ್ ಮೆಷಿನರಿಗಳು ಮತ್ತು ಅತ್ಯಾಧುನಿಕ ಯಂತ್ರಗಳು ಪತ್ತೆಯಾಗಿವೆ. ಈ ಯಂತ್ರಗಳನ್ನು ಬಳಸಿಕೊಂಡು ದಂಪತಿಗಳು ನಂದಿನಿ ಲೇಬಲ್‌ನ ನಕಲಿ ತುಪ್ಪಗಳನ್ನು ತಯಾರಿಸಿ, ರೀ-ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು. ದಾಳಿ ವೇಳೆ ಪೊಲೀಸರು ಮೆಷಿನರಿಗಳನ್ನು ವಶಪಡಿಸಿಕೊಂಡಿದ್ದಾರೆ.

ನ. 14ರ ದಾಳಿಯ ಮುಂದುವರಿದ ಭಾಗ

ಸಿಸಿಬಿ ಪೊಲೀಸರು ನವೆಂಬರ್ 14ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೋಡೌನ್ ಮೇಲೆ ದಾಳಿ ನಡೆಸಿ, ಮೊದಲಿಗೆ 8,136 ಲೀಟರ್ ನಕಲಿ ನಂದಿನಿ ತುಪ್ಪವನ್ನು ವಶಪಡಿಸಿಕೊಂಡಿದ್ದರು. ಈ ನಕಲಿ ಉತ್ಪನ್ನಗಳನ್ನು ಕೆಲ ನಂದಿನಿ ಪಾರ್ಲರ್‌ಗಳು ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆ ಸಮಯದಲ್ಲಿ ಪ್ರಕರಣ ದಾಖಲಿಸಿ, ವಿತರಣಾ ಜಾಲದಲ್ಲಿದ್ದ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಆತನ ಮಗ ದೀಪಕ್, ಮತ್ತು ಮುನಿರಾಜು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿತ್ತು. ಸದ್ಯ ಬಂಧಿತರಾಗಿರುವ ಶಿವಕುಮಾರ್ ಮತ್ತು ರಮ್ಯಾ ದಂಪತಿಗಳು ತಯಾರಿಸಿದ ನಕಲಿ ಉತ್ಪನ್ನಗಳನ್ನೇ ಈ ಮಹೇಂದ್ರ ಆ್ಯಂಡ್ ಗ್ಯಾಂಗ್ ರಾಜ್ಯಾದ್ಯಂತ ವಿತರಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

₹60 ಲಕ್ಷ ಫ್ರೀಜ್, ಮೈಸೂರಿನಲ್ಲೂ ಕೇಸ್

ಪ್ರಕರಣದ ಗಂಭೀರತೆ ಅರಿತು ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಆರೋಪಿ ದಂಪತಿಗಳ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 60 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿದ್ದಾರೆ. ಅಲ್ಲದೆ, ನಕಲಿ ತುಪ್ಪದಲ್ಲಿ ಏನೆಲ್ಲಾ ಕಳಪೆ ವಸ್ತುಗಳನ್ನು ಮಿಶ್ರಣ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲು, ವಶಪಡಿಸಿಕೊಂಡ ಮಾದರಿಗಳನ್ನು ಎಫ್‌ಎಸ್‌ಎಲ್ (FSL) ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಈ ದಂಪತಿ ಮೇಲೆ ಈ ಹಿಂದೆ ಮೈಸೂರಿನಲ್ಲಿಯೂ ಇದೇ ರೀತಿಯ ನಕಲಿ ಉತ್ಪನ್ನ ತಯಾರಿಕೆಯ ಒಂದು ಕೇಸ್ ದಾಖಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯಕ್ಕೆ ದಂಪತಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಈ ನಕಲಿ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಈ ಉತ್ಪನ್ನಗಳು ಎಲ್ಲೆಲ್ಲಾ ವಿತರಣೆಯಾಗಿವೆ ಎಂಬ ಬಗ್ಗೆ ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ