ಬಿಜೆಪಿ ಸೇರಿ ಒಳ್ಳೆಯ ಕೆಲಸ ಮಾಡಿದೆ- ಕಾಂಗ್ರೆಸ್‌ಗೆ ಇದೇ ಶತ್ರು : ಕೃಷ್ಣ

By Suvarna NewsFirst Published Aug 14, 2020, 9:15 AM IST
Highlights

ನಾನು ನನ್ನ ತೀರ್ಮಾನದಿಂದ ಅತ್ಯಂತ ಸಂತೋಷವಾಗಿದ್ದೇನೆ. ಬಿಜೆಪಿ ಸೇರಿ ಒಳ್ಳೆಯ ಕೆಲಸ ಮಾಡಿದೆ. ಕಾಂಗ್ರೆಸಿಗೆ ಶತ್ರುವಾಗಿರುವುದೆ ಈ ವಿಚಾರ ಎಮದುಹಿರಿಯ ಮುಖಂಡ ಎಸ್ ಎಮ್ ಕಷ್ಣ ಹೇಳಿದ್ದಾರೆ.

ಬೆಂಗಳೂರು (ಆ.14):  ನಾನು ಬಿಜೆಪಿ ಸೇರ್ಪಡೆಯಾಗಿ ಒಳ್ಳೆಯ ಕೆಲಸ ಮಾಡಿದೆ. ನಾನಿಲ್ಲಿ ಖುಷಿಯಾಗಿದ್ದೇನೆ. ಬಿಜೆಪಿ, ಇದರ ನಾಯಕರು ಹಾಗೂ ಕಾರ್ಯಕರ್ತರನ್ನು ನಾನು ಒಂದು ಅಂತರದಿಂದಲೇ ಗಮನಿಸುತ್ತಿದ್ದರೂ ಬಹಳ ಹತ್ತಿರದಿಂದ ಅವರ ಒಡನಾಟ ಲಭಿಸಿರುವುದು ಸಂತೋಷದಾಯಕ ಅನುಭವ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಸ್‌.ಎಂ. ಕೃಷ್ಣ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ದೇಶದ ಈ ಅಭಿವೃದ್ಧಿಯ ಯಾನದಲ್ಲಿ ನಾವೆಲ್ಲ ಪಾಲುದಾರರಾಗಿದ್ದೇವೆ ಎಂಬುದೇ ನಮಗೆ ಹೆಮ್ಮೆಯ ವಿಷಯ. 2024ರಲ್ಲೂ ಮತ್ತೆ ಮೋದಿ ಗೆದ್ದು ಪ್ರಧಾನಿಯಾಗುವುದು ನಿಶ್ಚಿತ. ಪ್ರಾದೇಶಿಕ ಪಕ್ಷಗಳ ಜೊತೆಗೆ ಸೇರಿಕೊಂಡು ಬಿಜೆಪಿಗೆ ಪೈಪೋಟಿ ನೀಡುವ ಶಕ್ತಿ ಈಗಲೂ ಕಾಂಗ್ರೆಸ್‌ ಪಕ್ಷಕ್ಕಿದೆ. ಆದರೆ, ಮೋದಿ ಗೆಲ್ಲುವುದನ್ನು ತಪ್ಪಿಸಲಾಗದು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಡಿಕೆಶಿ ಪುತ್ರಿ ಮದುವೆ ಯಾವಾಗ, ಡೇಟ್ ಫಿಕ್ಸ್ ಆಯ್ತಾ?...

ಸುದ್ದಿಸಂಸ್ಥೆಗೆ ಗುರುವಾರ ಸಂದರ್ಶನ ನೀಡಿರುವ ಅವರು, ಬಿಜೆಪಿಯ ಆಂತರ್ಯದಲ್ಲೊಂದು ವಿಶಿಷ್ಟಶಕ್ತಿಯಿದೆ. ಮೊದಲನೆಯದಾಗಿ, ಮೋದಿ ಮತ್ತು ಅವರ ತಂಡ ನೀಡಿದ ಒಳ್ಳೆಯ ಆಡಳಿತದಿಂದ ಪಕ್ಷಕ್ಕೆ ಜನರ ದೊಡ್ಡ ಬೆಂಬಲ ಲಭಿಸಿದೆ. ಎರಡನೆಯದಾಗಿ ಪಕ್ಷದ ಸಾಂಸ್ಥಿಕ ರಚನೆ ಗಟ್ಟಿಯಾಗಿದೆ. ಬೂತ್‌ ಮಟ್ಟ, ಪಂಚಾಯ್ತಿ ಮಟ್ಟದಿಂದ ಸಂಸತ್ತಿನವರೆಗೆ ಪಕ್ಷದ ಕಾರ್ಯಕರ್ತರು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ಡೈನಾಮಿಕ್‌ ನಾಯಕ:

ಪ್ರಧಾನಿ ಮೋದಿಯವರ ಸೂಕ್ಷ್ಮ ಚಿಂತನೆ, ಡೈನಾಮಿಕ್‌ ನಾಯಕತ್ವ, ದೂರದರ್ಶಿತ್ವ ಮತ್ತು ಎಲ್ಲರಿಗೂ ಸ್ಪಂದಿಸುವ ಗುಣದಿಂದ ದೇಶದಲ್ಲೀಗ ಉಜ್ವಲ ಆರ್ಥಿಕ ವಾತಾವರಣ ಮತ್ತು ರಾಜಕೀಯ ಸ್ಥಿರತೆಯಿದೆ. ಎಲ್ಲೆಡೆ ಧನಾತ್ಮಕತೆ ತುಂಬಿದೆ. ಪ್ರಧಾನಿ ಅಥವಾ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಆರೋಪ ಮಾಡಲು ಬಂದವರೇ ಮಣ್ಣು ಮುಕ್ಕಿದ್ದಾರೆ. ಇಡೀ ಜಗತ್ತು ಭಾರತವನ್ನು ಅಚ್ಚರಿಯಿಂದ ನೋಡಿ ಗೌರವಿಸುತ್ತಿದೆ. ಜನಜೀವನದ ಎಲ್ಲ ಸ್ತರವನ್ನೂ ಗುಣಾತ್ಮಕವಾಗಿ ರೂಪಾಂತರಗೊಳಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾರೆ. ಅವರೊಬ್ಬ ತಾಳ್ಮೆಯ ಕೇಳುಗ. ಹೊಸತನ್ನು ಕಲಿಯುವ ಉತ್ಸಾಹ ಅವರಲ್ಲಿದೆ. ಅವರು ಗಡಿಬಿಡಿ ಮಾಡುವುದಿಲ್ಲ. ನಿರ್ಧಾರ ಕೈಗೊಳ್ಳುವ ಮುನ್ನ ಸಾವಿರ ಬಾರಿ ಯೋಚಿಸುತ್ತಾರೆ. ಬಹಳಷ್ಟುಜನರ ಸಲಹೆ ಕೇಳುತ್ತಾರೆ. ಆದರೆ, ಕೊನೆಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ತಪ್ಪಿಗೆ ಅವರು ಯಾರನ್ನೂ ದೂಷಿಸುವುದಿಲ್ಲ. ಯಶಸ್ಸಿನ ಹೆಗ್ಗಳಿಕೆಯನ್ನು ಎಲ್ಲರಿಗೂ ನೀಡಿ ಸೋಲಿನ ಹೊಣೆಯನ್ನು ತಾವು ಹೊತ್ತುಕೊಳ್ಳುತ್ತಾರೆ ಎಂದು ಕೃಷ್ಣ ಪ್ರಶಂಸಿಸಿದರು.

ಮದ್ವೆ ಮಾತುಕತೆ ಮುಗಿಸಿದ ಡಿಕೆಶಿ-ಕೃಷ್ಣ ಕುಟುಂಬ: ಹಾರ ಬದಲಾಯಿಸಿಕೊಂಡ ಅಮರ್ಥ್ಯ-ಐಶ್ವರ್ಯ

ಹಗೆತನವೇ ಕಾಂಗ್ರೆಸ್ಸಿನ ಶತ್ರು:

ಕಾಂಗ್ರೆಸ್‌ ಪಕ್ಷದಲ್ಲಿ ಆಳವಾಗಿ ಬೇರೂರಿರುವ ಹಗೆತನವಿದೆ. ಯುವಕರಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಲ್ಲಿ ಸರಿಯಾದ ವಾತಾವರಣವಿಲ್ಲ. ಅದರ ಪರಿಣಾಮವೇ ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಸಚಿನ್‌ ಪೈಲಟ್‌ ಪ್ರಕರಣಗಳು. ಯುವಕರಿಗೆ ಜಾಗ ಮಾಡಿಕೊಡುವ ಪದ್ಧತಿ ಅಲ್ಲಿಲ್ಲ. ಹಿರಿಯರು ಯುವಕರಿಗೆ ಸ್ಥಳಾವಕಾಶ ಮಾಡಿಕೊಟ್ಟು ಅವರಿಗೆ ಮಾರ್ಗದರ್ಶನ ನೀಡುವ ಕೇಂದ್ರ ಸ್ಥಾನದಲ್ಲಿ ಉಳಿದುಕೊಳ್ಳಬೇಕು ಎಂದು ಕೃಷ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಂತರಿಕ ಪ್ರಜಾಪ್ರಭುತ್ವ ಬೇಕು:

ದೇಶದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳಲ್ಲೂ ಆಂತರಿಕ ಪ್ರಜಾಪ್ರಭುತ್ವದ ಕೊರತೆಯಿದೆ. ನಾಯಕತ್ವವನ್ನು ಟೀಕಿಸಲು ಎಲ್ಲರೂ ಹೆದರುತ್ತಾರೆ. ಇದು ಹೋಗಬೇಕು. ಗಾಂಧಿ, ನೇತಾಜಿ, ಸುಭಾಷ್‌ ಚಂದ್ರ ಬೋಸ್‌ರ ಕಾಲದಲ್ಲಿದ್ದ ಆಂತರಿಕ ಪ್ರಜಾಪ್ರಭುತ್ವ ನಮಗೆ ಬೇಕಿದೆ. ಅದನ್ನು ಮಾದರಿಯಾಗಿಟ್ಟುಕೊಂಡು, ಬದಲಾದ ಕಾಲಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಜಾಗ ಮಾಡಿಕೊಡಬೇಕಿದೆ ಎಂದೂ ಕೃಷ್ಣ ಅಭಿಪ್ರಾಯಪಟ್ಟರು.

click me!