'ಕೊರೋನಾ ವಾರಿಯರ್ಸ್‌ಗೆ ಸ್ವಾತಂತ್ರ್ಯೋತ್ಸವದ ಗೌರವ'

By Kannadaprabha NewsFirst Published Aug 14, 2020, 9:06 AM IST
Highlights

ಈ ಬಾರಿ ಸರಳ ಆಚರಣೆ| ಕೊರೋನಾ ವಾರಿಯರ್ಸ್‌ಗೆ ಸ್ವಾತಂತ್ರ್ಯೋತ್ಸವದ ಗೌರವ| 75 ಕೊರೋನಾ ವಾರಿಯರ್ಸ್‌, 25 ಮಂದಿ ಕೊರೋನಾ ಗೆದ್ದವರಿಗೆ ಆಹ್ವಾನ| ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಕಾರ್ಯಕ್ರಮ| ಸಿಎಂ ಬಿಎಸ್‌ವೈರಿಂದ ಧ್ವಜಾರೋಹಣ|

ಬೆಂಗಳೂರು(ಆ.14): ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ 75 ಕೊರೋನಾ ವಾರಿಯರ್ಸ್‌ ಹಾಗೂ 25 ಮಂದಿ ಕೊರೋನಾದಿಂದ ಗುಣಮುಖರಾದವರನ್ನು ಆಹ್ವಾನಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಆ.15ರಂದು ನಡೆಯುವ 74ನೇ ಸ್ವಾತಂತ್ರ್ಯ ದಿನಾಚರಣೆಯ ರಾಜ್ಯಮಟ್ಟದ ಸಮಾರಂಭಕ್ಕೆ ಪೂರ್ವ ಸಿದ್ಧತೆ ಪೂರ್ಣಗೊಂಡಿದ್ದು, ಕೇವಲ 500 ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಲಿದೆ.

ನಾಳೆ ಸ್ವಾತಂತ್ರ್ಯ ದಿನಾಚರಣೆಯನ್ನು ಈ ರೀತಿ ಆಚರಿಸಿ:ಕೇಂದ್ರದಿಂದ ಮಹತ್ವದ ಸೂಚನೆ

ಗುರುವಾರ ಸ್ವಾತಂತ್ರ್ಯ ದಿನಾಚರಣೆ ಕುರಿತು ಪೂರ್ವ ಸಿದ್ಧತೆ ವೀಕ್ಷಣೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಜತೆಗೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಪರೇಡ್‌ (ಮಾರ್ಚ್‌ ಪಾಸ್ಟ್‌) ಇರದೆ ಸರಳವಾಗಿ ಆಚರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಳಗ್ಗೆ 8.58ಕ್ಕೆ ಮೈದಾನಕ್ಕೆ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಜನತೆಯನ್ನು ಉದ್ದೇಶಿಸಿ ಸಂದೇಶ ನೀಡಲಿದ್ದಾರೆ. ಬಳಿಕ ರಾಷ್ಟ್ರಗೀತೆ, ನಾಡಗೀತೆ ಮತ್ತು ರೈತಗೀತೆ ಹಾಡಲಾಗುವುದು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರಕ್ಷಣಾ ಅಧಿಕಾರಿಗಳು ಸೇರಿ 500 ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಾಗರೀಕರು ದೂರದರ್ಶನದ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಣೆ ಮಾಡುವಂತೆ ಮನವಿ ಮಾಡಿದರು.

ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಮಾತನಾಡಿ, ಈ ಬಾರಿಯ ಪರೇಡ್‌ ಉಸ್ತುವಾರಿಯನ್ನು ದಕ್ಷಿಣ ವಿಭಾಗದ ಡಿಸಿಪಿ ಗಿರೀಶ್‌ ವಹಿಸಿಕೊಂಡಿದ್ದಾರೆ. ಕವಾಯತಿನಲ್ಲಿ ಕೆಎಸ್‌ಆರ್‌ಪಿ, ಬಿಎಸ್‌ಎಫ್‌ ಸೇರಿ 16 ತುಕಡಿ ಹಾಗೂ 4 ಬ್ಯಾಂಡ್‌ಗಳು ಭಾಗಿಯಾಗಲಿವೆ. ಭದ್ರತೆಗಾಗಿ 680 ಜನರ ನಿಯೋಜನೆ ಮಾಡಲಾಗಿದೆ. 47 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 10 ಕೆಎಸ್‌ಆರ್‌ಪಿ ತುಕಡಿ, 10 ಕೆಎಸ್‌ಆರ್‌ಪಿ ಪ್ಲಟೂನ್‌ ತುಕಡಿ, 1 ಗರುಡಾ ಫೋರ್ಸ್‌ ಇರಲಿದೆ ಎಂದು ಹೇಳಿದರು. ನಗರ ಜಿಲ್ಲೆ ಜಿಲ್ಲಾಧಿಕಾರಿಗಳು ಜಿ.ಎನ್‌. ಶಿವಮೂರ್ತಿ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
 

click me!