ಲಾ ಓದಲು ಬಿಡದಿದ್ರೆ ಆಸ್ತಿಯಲ್ಲಿ ಪಾಲು ಕೊಡು ಎಂದಿದ್ದೆ: ಸಿಎಂ ಸಿದ್ದರಾಮಯ್ಯ

Published : Oct 17, 2023, 02:00 AM IST
ಲಾ ಓದಲು ಬಿಡದಿದ್ರೆ ಆಸ್ತಿಯಲ್ಲಿ ಪಾಲು ಕೊಡು ಎಂದಿದ್ದೆ: ಸಿಎಂ ಸಿದ್ದರಾಮಯ್ಯ

ಸಾರಾಂಶ

ನನ್ನನ್ನು ಕಾನೂನು ಓದಲು ಕಳುಹಿಸದಿದ್ದರೆ ಆಸ್ತಿಯಲ್ಲಿ ಪಾಲು ಕೊಡಿ ಎಂದು ಪಟ್ಟು ಹಿಡಿದಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ. 

ಮೈಸೂರು (ಅ.17): ನನ್ನನ್ನು ಕಾನೂನು ಓದಲು ಕಳುಹಿಸದಿದ್ದರೆ ಆಸ್ತಿಯಲ್ಲಿ ಪಾಲು ಕೊಡಿ ಎಂದು ಪಟ್ಟು ಹಿಡಿದಿದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ. ನಗರದ ಯುವರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ 20ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯಲ್ಲಿ ಕಾಲೇಜು ದಿನಗಳನ್ನು ಮೆಲುಕು ಹಾಕಿದ ಸಿದ್ದರಾಮಯ್ಯ ಅವರು, ನಾನು ಡಾಕ್ಟರ್‌ ಆಗಬೇಕೆಂಬ ಆಸೆ ಅಪ್ಪನಿಗಿತ್ತು. ಆದರೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಒಂದು ವೇಳೆ ಸೀಟು ಸಿಕ್ಕಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಲೂ ಇರಲಿಲ್ಲ. ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಪರಿಚಯ ಆಗದಿದ್ದರೆ ರಾಜಕೀಯಕ್ಕೂ ಬರುತ್ತಿರಲಿಲ್ಲ ಎಂದರು.

ನಾನು ಓದುವಾಗ ಮುಖ್ಯಮಂತ್ರಿ ಆಗುತ್ತೇನೆ ಎಂಬ ಕುರಿತು ಆಲೋಚನೆಯೂ ಇರಲಿಲ್ಲ. ನಮ್ಮಪ್ಪ ಡಾಕ್ಟರ್ ಮಾಡಿಸಬೇಕು ಅಂತ ಆಸೆ ಇಟ್ಟುಕೊಂಡಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಫಸ್ಟ್ ಕ್ಲಾಸ್‌ ನಲ್ಲಿ ಪಾಸಾಗಿದ್ದೆ. ಆದರೆ ಪಿಯುಸಿಯಲ್ಲಿ ಸೆಕೆಂಡ್‌ ಕ್ಲಾಸ್‌ನಲ್ಲಿ ಪಾಸ್‌ ಆದೆ. ನಮ್ಮೂರಿನ ಹೊಂಬಯ್ಯನ ಮಗ ಮೆಡಿಕಲ್ ಸೇರಿದ್ದಾನೆ, ನೀನು ಮೆಡಿಕಲ್ ಮಾಡಲೇಬೇಕು ಅಂತ ಹಠ ಹಿಡಿದು ಕೂತಿದ್ದರು. ನಂತರ ಬಿಎಸ್ಸಿ ಸೇರಿಕೊಂಡು ಮೂರು ವರ್ಷ ಓದಿ ಪಾಸು ಮಾಡಿದೆ. ಆದರೆ, ಬಾಟನಿಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಎಂ.ಎಸ್ಸಿ ಪ್ರವೇಶಕ್ಕೆ ಸೀಟು ಸಿಗಲಿಲ್ಲ ಎಂದು ಹೇಳಿದರು.

ಬರಗಾಲವಿದ್ದರೂ ಅರ್ಥಪೂರ್ಣ ದಸರಾ ಆಚರಣೆಗೆ ಒತ್ತು: ಸಿಎಂ ಸಿದ್ದರಾಮಯ್ಯ

ಅಯ್ಯೋ, ಏನು ಮಾಡೋದು ಸೀಟು ಸಿಗದಿದ್ದರೆ ಅಂತ ಪ್ರಿನ್ಸಿಪಾಲ್ ಆಗಿದ್ದ ಕೇಶವ ಹೆಗಡೆ ಅವರ ಬೆಂಗಳೂರು ಮನೆಗೆ ಹೋಗಿ ಗೋಗರೆದು ಬಂದಿದ್ದೆ. ಆಗ 1,200 ರು. ಆದಾಯ ಪ್ರಮಾಣ ಪತ್ರ ತಂದರೆ ಸೀಟು ಕೊಡುತ್ತೇನೆಂದು ಹೇಳಿದ್ದರು. ನಮ್ಮೂರಿನ ಶಾನುಭೋಗರಿಗೆ ಕೇಳಿದರೆ, 4,500 ರು. ಆದಾಯ ಪ್ರಮಾಣ ಪತ್ರ ಕೊಟ್ಟಿದ್ದರಿಂದ ಸೀಟು ಕೈತಪ್ಪಿತು ಎಂದು ಮೆಲುಕು ಹಾಕಿದರು.

ಎಂಎಸ್ಸಿ ಸೀಟು ಸಿಗದಿದ್ದಕ್ಕೆ ಓದಿನ ಸಹವಾಸವೇ ಬೇಡ ಎಂದು ಅರ್ಧಕ್ಕೇ ನಿಲ್ಲಿಸಿ ವಾಪಸ್ ಊರಿಗೆ ಹೋಗಿ ಜಮೀನಿನಲ್ಲಿ ಹೊಲ-ಗದ್ದೆ ಉಳುತ್ತಿದ್ದೆ. ನಮ್ಮ ಪಕ್ಕದ ಜಮೀನಿನವರಿಗೂ ನಮಗೂ ಗಲಾಟೆ ಆಗಿದ್ದರಿಂದ ನಾನು ಊರ ಸಹವಾಸವೇ ಬೇಡ ಅಂತ ಕಾನೂನು ಮಾಡುತ್ತೇನೆಂದು ನಮ್ಮಪ್ಪನಿಗೆ ಹೇಳಿದ್ದೆ. ನಮ್ಮೂರಿನ ಶಾನುಭೋಗ ಚನ್ನಪ್ಪಯ್ಯ ಮಾತು ಕೇಳಿಕೊಂಡು ಏನಾದರೂ ಒಪ್ಪಿರಲಿಲ್ಲ. ಇದು ಯಾಕೋ ಸರಿಯಿಲ್ಲ ಎಂದು ಊರಲ್ಲಿ ಪಂಚಾಯಿತಿ ಸೇರಿಸಿ ಲಾ ಕಾಲೇಜಿಗೆ ಸೇರಿಸದಿದ್ದರೆ ನನ್ನ ಪಾಲು ನನಗೆ ಕೊಟ್ಟುಬಿಡು ಅಂತ ಪಟ್ಟು ಹಿಡಿದುಬಿಟ್ಟಿದ್ದರಿಂದ ಒಪ್ಪಿಕೊಂಡರು.

ನಂತರ ಶಾರದಾವಿಲಾಸ ಲಾ ಕಾಲೇಜಿನಲ್ಲಿ ಎಲ್‌.ಎಲ್‌.ಬಿ ಸೇರಿದಾಗ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪರಿಚಯವಾಯಿತು. ಸಮಾಜವಾದಿ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದ ನನಗೆ ಪ್ರೊ.ಎಂಡಿಎನ್ ರಾಜಕೀಯ ಪ್ರವೇಶ ಮಾಡುವಂತೆ ಮಾಡಿದರು. ಅಂದು ಪ್ರೊ.ಎಂಡಿಎನ್ ಪರಿಚಯ ಇಲ್ಲದಿದ್ದರೆ ರಾಜಕೀಯಕ್ಕೆ ಬರುತ್ತಿರಲಿಲ್ಲ. ಎಂಎಸ್ಸಿ ಸೀಟು ಸಿಕ್ಕಿದ್ದರೆ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಇದಕ್ಕೆ ಏನೆನ್ನಬೇಕು ಎಂದರು.

ಬದುಕಿನ ಸಂದೇಶವುಳ್ಳ ಚಲನಚಿತ್ರಗಳಿಂದ ಸಮಾಜಕ್ಕೆ ಉಪಯುಕ್ತ: ಸಿಎಂ ಸಿದ್ದರಾಮಯ್ಯ

ವೇದಿಕೆ ಬಳಿ ಇದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಅದೆಲ್ಲಾ ಹಣೆಬರಹ ಅಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಯಾವ ಹಣೆ ಬರಹ? ಸೈನ್ಸ್ ಓದಿದವರೇ ವೈಜ್ಞಾನಿಕ, ವೈಚಾರಿಕತೆಯಿಂದ ಯೋಚನೆ ಮಾಡದಿರುವುದು ದುರಂತ. ಹಣೆಬರಹವನ್ನು ಯಾವನೂ ಬರೆದಿಲ್ಲ. ನನ್ನನ್ನು ಲಾ ಮಾಡು ಅಂತ ಬರೆದು, ನಮ್ಮ ಅಣ್ಣ-ತಮ್ಮಂದಿರನ್ನು ಹೊಲ ಉತ್ತು, ಅಡುಗೆ ಮಾಡು ಅಂತೇಳಿ ಬರೆದಿದ್ದನೇ? ಹಣೆಬರಹ ಎನ್ನುವುದನ್ನು ಯಾರೋ ಹೇಳಿ ಕೊಟ್ಟಿರುವುದು. ಅದನ್ನು ನಾವು ಕಣ್ಮುಚ್ಚಿ ಫಾಲೋ ಮಾಡುತ್ತಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ