ಕೊಡಗಿನಲ್ಲಿ ದೇಗುಲಕ್ಕೆ ಹೋದ ದಿನ ಮಾಂಸ ತಿಂದಿರಲಿಲ್ಲ: ಸಿದ್ದು

By Govindaraj SFirst Published Aug 24, 2022, 6:26 AM IST
Highlights

‘ಕೊಡಗಿನಲ್ಲಿ ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಅಂದು ಅಕ್ಕಿರೊಟ್ಟಿ, ಕಳಲೆ ಪಲ್ಯ ತಿಂದಿದ್ದೆ. ಇದೇ ವಾಸ್ತವ ವಿಚಾರ. ಕೇವಲ ವಾದದ ಉದ್ದೇಶದಿಂದ ಮಾಂಸ ತಿಂದು ಬಂದರೆ ಸಮಸ್ಯೆ ಏನು ಎಂದು ಪ್ರಶ್ನಿಸಿದ್ದೆ ಅಷ್ಟೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಆ.24): ‘ಕೊಡಗಿನಲ್ಲಿ ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಅಂದು ಅಕ್ಕಿರೊಟ್ಟಿ, ಕಳಲೆ ಪಲ್ಯ ತಿಂದಿದ್ದೆ. ಇದೇ ವಾಸ್ತವ ವಿಚಾರ. ಕೇವಲ ವಾದದ ಉದ್ದೇಶದಿಂದ ಮಾಂಸ ತಿಂದು ಬಂದರೆ ಸಮಸ್ಯೆ ಏನು ಎಂದು ಪ್ರಶ್ನಿಸಿದ್ದೆ ಅಷ್ಟೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಡಗಿನಲ್ಲಿ ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಆವತ್ತು ವಿಧಾನ ಪರಿಷತ್‌ ಸದಸ್ಯರಾದ ನಮ್ಮ ಪಕ್ಷದ ವೀಣಾ ಅಚ್ಚಯ್ಯ ಅವರು ನಾಟಿ ಕೋಳಿ ಸಾರು ಮಾಡಿಕೊಂಡು ಬಂದಿದ್ದರು. ಜೊತೆಗೆ ಅಕ್ಕಿರೊಟ್ಟಿ, ಕಳಲೆ ಪಲ್ಯ ತಂದಿದ್ದರು. ಆದರೆ, ನನಗೆ ಅಂದು ಮಾಂಸದೂಟ ಮಾಡಲು ಇಷ್ಟವಾಗಲಿಲ್ಲ. ಹಾಗಾಗಿ ರೊಟ್ಟಿಪಲ್ಯ ತಿಂದೆ. ಇದನ್ನು ವೀಣಾ ಅಚ್ಚಯ್ಯ ಅವರೂ ಹೇಳಿದ್ದಾರೆ. ಪ್ರಮೋದ್‌ ಮುತಾಲಿಕ್‌ ಕೂಡ ನಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅವರು ಹಿಂದೂ ಸಂಘಟನೆ ಅಧ್ಯಕ್ಷರಲ್ಲವೇ?’ ಎಂದು ಪ್ರಶ್ನಿಸಿದರು.

ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

‘ಮಾಂಸ ತಿನ್ನೋದು ಒಂದು ವಿಚಾರವೇ ಅಲ್ಲ. ತಿನ್ನೋದು ಬಿಡೋದು ಅವರವರ ವೈಯಕ್ತಿಕ ವಿಚಾರ. ಇದರಿಂದ ಸಮಾಜಕ್ಕೆ ಯಾವ ಉಪಯೋಗ ಇಲ್ಲ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಅನಗತ್ಯ ವಿಚಾರಗಳನ್ನು ಇಟ್ಟುಕೊಂಡು ಜನರ ಮನಸಲ್ಲಿ ಹುಳಿ ಹಿಂಡೋದು, ವಿವಾದ ಸೃಷ್ಟಿಸೋದೆ ಕೆಲಸ. ನಾನು ಅನೇಕ ಬಾರಿ, ತಿರುಪತಿ, ಚಾಮುಂಡೇಶ್ವರಿ, ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದೇನೆ. ಊರಿನಲ್ಲಿರುವ ದೇವಸ್ಥಾನಕ್ಕೂ ಹೋಗಿದ್ದೇನೆ. ಆದರೆ ಎಲ್ಲಾ ಕಡೆ ಇರುವ ದೇವರು ಒಬ್ಬನೇ ಎಂಬುದು ನನ್ನ ನಂಬಿಕೆ. ಎಷ್ಟೊದೇವರುಗಳಿಗೆ ಮಾಂಸದ ಎಡೆ ಇಡುತ್ತಾರೆ, ಅದನ್ನು ತಪ್ಪು ಎನ್ನೋಕಾಗುತ್ತಾ? ಇವೆಲ್ಲಾ ವಿಷಯಗಳೇ ಅಲ್ಲ’ ಎಂದರು.

ಸಿಂಹ ಬೇಕಿದ್ರೆ ಹಂದಿ ತಿನ್ನಲಿ: ‘ಹಂದಿ ಮಾಂಸ ತಿಂದು ದರ್ಗಾಕ್ಕೆ ಹೋಗಿ’ ಎಂಬ ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ನಾನು ಜೀವನದಲ್ಲಿ ಹಂದಿ ಮಾಂಸ ತಿಂದೇ ಇಲ್ಲ. ತಿನ್ನುವವರಿಗೆ ಬೇಡ ಎಂದು ನಾನು ಹೇಳಲ್ಲ. ಬೇಕಾದರೆ ಪ್ರತಾಪ್‌ ಸಿಂಹನೇ ಹಂದಿ ಮಾಂಸ ತಿಂದು ಎಲ್ಲಿಗಾದರೂ ಹೋಗಲಿ, ನನ್ನ ತಕರಾರಿಲ್ಲ’ ಎಂದರು.

ಸಿದ್ದುಗೆ ಮೊಟ್ಟೆ ಎಸೆತ ಬಗ್ಗೆ ತನಿಖೆ: ಸಿಎಂ ಬೊಮ್ಮಾಯಿ

ಸರ್ಕಾರಿ ಪ್ರಾಯೋಜಿತ ಪ್ರತಿಭಟನೆ: ಮಡಿಕೇರಿಯಲ್ಲಿ ನನ್ನ ವಿರುದ್ಧ ನಡೆದದ್ದು ಸರ್ಕಾರಿ ಪ್ರಾಯೋಜಿತ ಪ್ರತಿಭಟನೆ ಎಂದು ಸಿದ್ದರಾಮಯ್ಯ ಆಪಾದಿಸಿದರು. ‘ಕೊಡಗು ಜಿಲ್ಲೆಯ ಮಿನಿ ವಿಧಾನಸೌಧಕ್ಕೆ ನಿರ್ಮಿಸಿರುವ ತಡೆಗೋಡೆ ಕಾಮಗಾರಿ ಕಳಪೆಯಾಗಿದೆ. ಸ್ಥಳೀಯ ಶಾಸಕರು ಮತ್ತು ಗುತ್ತಿಗೆದಾರರು ಕಾಮಗಾರಿಯ ಹಣ ಲೂಟಿ ಹೊಡೆದಿದ್ದಾರೆ. 7.5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ತಡೆಗೋಡೆ ಕೆಲವೇ ಸಮಯದಲ್ಲಿ ಬಿದ್ದುಹೋಗುತ್ತಿದೆ. ನಾನು ಅಲ್ಲಿಗೆ ಹೋದಾಗ ಇದನ್ನು ನೋಡಬಾರದು ಎಂಬ ಉದ್ದೇಶಕ್ಕೆ ಪ್ರತಿಭಟನೆ ಮಾಡಿ, ಮೊಟ್ಟೆಎಸೆದರು’ ಎಂದು ಹೇಳಿದರು.

click me!