ಪಂಚಮಸಾಲಿಗಳಿಗೆ ಮೀಸಲಾತಿ ತಪ್ಪಿಸಿದ್ದು ಯಡಿಯೂರಪ್ಪ: ಕಾಶಪ್ಪನವರ

By Kannadaprabha NewsFirst Published Aug 24, 2022, 3:00 AM IST
Highlights

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಿರುಪತಿಗೆ ಕರೆದುಕೊಂಡು ಹೋಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬಾರದು ಎಂದು ಬಿಎಸ್‌ವೈ ಆಣೆ ಮಾಡಿಸಿದ್ದಾರೆ: ವಿಜಯಾನಂದ ಕಾಶಪ್ಪನವರ

ಶಿಗ್ಗಾಂವಿ(ಆ.24):  ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಂತೆ ತಡೆದದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಎಂದು ನೇರ ಆರೋಪ ಮಾಡಿರುವ ಮಾಜಿ ಶಾಸಕ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಿರುಪತಿಗೆ ಕರೆದುಕೊಂಡು ಹೋಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬಾರದು ಎಂದು ಬಿಎಸ್‌ವೈ ಆಣೆ ಮಾಡಿಸಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದರು.

ಪಟ್ಟಣದಲ್ಲಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಬಿಎಸ್‌ವೈ ವಿರೋಧ ನಮಗೆ ಸದ್ಯ ಮೀಸಲಾತಿಗೆ ತೊಡಕಾಗಿದೆ ಎಂದರು. ಇದಕ್ಕೂ ಮುನ್ನ ಮಾತನಾಡಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸಹ ಒಬ್ಬ ವ್ಯಕ್ತಿಯಿಂದಾಗಿ ನಮ್ಮ ಸಮಾಜಕ್ಕೆ ಮೀಸಲಾತಿ ಸಿಗುತ್ತಿಲ್ಲ. ಮುಂದಿನ ದಿನದಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಯಾರ ಹೆಸರು ಎತ್ತದೇ ಎಚ್ಚರಿಕೆ ನೀಡಿದ್ದರು.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡೋಕೆ ಈಗ ಜಾಗ ಖಾಲಿ ಇಲ್ಲ: ಸಚಿವ ಸಿ‌.ಸಿ‌ ಪಾಟೀಲ್

ಮೀಸಲಾತಿ ನೀಡದಿದ್ದರೆ ಎಲ್ಲರೂ ಸೇರಿ ಒಂದು ಪಕ್ಷ ಮಾಡೋಣ. ಮೀಸಲಾತಿ ಹೋರಾಟ ಸಮಿತಿಯಿಂದಲೇ ಅಭ್ಯರ್ಥಿ ಹಾಕೋಣ ಎಂದ ಕಾಶಪ್ಪನವರ, ನಮ್ಮದು ಮೀಸಲಾತಿ ಪಕ್ಷ ಅಂತ ಹೆಸರು. ಆಗ ನಾವು ನಮ್ಮ ಹುಲಿ ಬಸವನಗೌಡ ಪಾಟೀಲ… ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡೋಣ. ಮೀಸಲಾತಿ ಪಕ್ಷಕ್ಕೆ ಯತ್ನಾಳ ಅವರೇ ಸಿಎಂ ಅಭ್ಯರ್ಥಿ ಎಂದು ಹೇಳಿದರು.

ಮೀಸಲಾತಿ ನೀಡದಿದ್ದರೆ ನಾವೆಲ್ಲ ವಿಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ- ಯತ್ನಾಳ್‌ ಎಚ್ಚರಿಕೆ

ನನಗೆ ಮಂತ್ರಿ ಸ್ಥಾನ ಕೊಡುವುದಾಗಿ ಆಮಿಷ ಒಡ್ಡಿದ್ದರು. ಆದರೆ, ನಾನು ಮೀಸಲಾತಿ ಕೊಡಿ ಎಂದು ಕೇಳಿದ್ದೇನೆ. ಮೀಸಲಾತಿ ಕೊಡಲಿಲ್ಲ ಅಂದರೆ ಬೊಮ್ಮಾಯಿಯವರೇ, ನಿಮ್ಮ ನಮ್ಮ ದೀಪ ಆರುತ್ತೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

ಶಿಗ್ಗಾಂವಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಸಮಾವೇಶ ಹೊಸ ಕ್ರಾಂತಿಗೆ ಕಾರಣವಾಗಲಿದೆ. ಅಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ. ನುಡಿದಂತೆ ನಡೆಯಲು ಪ್ರಯತ್ನ ಮಾಡುತ್ತಿದ್ದೇವೆ. ತಿರುಪತಿಯಲ್ಲಿ ಒಂದು ಒಪ್ಪಂದ, ಆರ್‌ಟಿ ನಗರದಲ್ಲಿ ಒಂದು ಒಪ್ಪಂದ, ನಮಗೊಂದು ಹೇಳುತ್ತಾರೆ. ಇಂತಹ ಸರ್ಕಾರದಲ್ಲಿ ಮಂತ್ರಿ ಆಗುವುದು ಬೇಡ ಅಂತ ನಿರ್ಧಾರ ಮಾಡಿದ್ದೇನೆ. ಆರು ತಿಂಗಳಿಗಾಗಿ ಮಂತ್ರಿ ಆಗಲ್ಲ ಎಂದು ಹೇಳಿದರು.

ಪ್ರತಿಭಟನೆಗೆ ಸೀಮಿತವಾದ ರಾಣಿಬೆನ್ನೂರು ಬಂದ್‌

ಕಳೆದ ಎರಡು ತಿಂಗಳ ಹಿಂದೆ ನಮ್ಮನ್ನು ಕರೆದು, ಗೌಡ್ರೇ ಮೂರು ತಿಂಗಳು ಟೈಂ ಕೊಡಿ ಎಂದು ಹೇಳಿದರು. ಮೀಸಲಾತಿಯನ್ನು ಯಾವುದೇ ಪರಿಸ್ಥಿತಿಯಲ್ಲಿ ಕೊಡ್ತೀನಿ ಅಂತ ಸಿಎಂ ಹೇಳಿದ್ದರು. ನನಗೆ ಹೊಂದಾಣಿಕೆ ರಾಜಕಾರಣ ಗೊತ್ತಿಲ್ಲ. ಆ ರೀತಿ ಮಾಡಿದ್ದರೆ ಇಂದು ನಾನೇ ಸಿಎಂ ಆಗಿರುತ್ತಿದ್ದೆ ಎಂದರು.

ಅವತ್ತು ಬಸವರಾಜ ಬೊಮ್ಮಾಯಿ ಬಹಳ ವಿಶ್ವಾಸದಿಂದ ಮಾತು ಕೊಟ್ಟಿದ್ದರು. ಅವರು ನೀಡಿದ ಗಡುವು ಸೋಮವಾರ ಮುಗಿದಿದೆ. ನಮ್ಮ ಹೋರಾಟದಿಂದ ಹಾಲುಮತ ಸಮಾಜ ಎಸ್ಟಿಗೆ, ವಾಲ್ಮೀಕಿ ಸಮಾಜಕ್ಕೂ ಅನುಕೂಲವಾಗಲಿದೆ. ದನಿ ಇಲ್ಲದ ಸಮಾಜಗಳಿಗೆ ಜಯಮೃತ್ಯುಂಜಯ ಸ್ವಾಮೀಜಿ ಧ್ವನಿಯಾಗಿದ್ದಾರೆ. ಮತ್ತೆ ಶಾಸಕ, ಮಂತ್ರಿಯಾಗಬೇಕು ಎನ್ನುವವರು ಯಾರಿದ್ದೀರೋ ಅವರು ಬೆಂಗಳೂರು ಸಮಾವೇಶಕ್ಕೆ ಜತೆಯಾಗಬೇಕು. ಇಲ್ಲದಿದ್ದರೆ ಮಾಜಿಯಾಗುತ್ತೀರಿ. ನಮ್ಮ ಮೇಲೆ, ಗುರುಗಳ ಮೇಲೆ ಸಂಶಯ ಪಡಬೇಡಿ. ಗುರುಗಳನ್ನು ಬುಕ್‌ ಮಾಡಿದ್ದಾರೆæ ಅಂತ ಸಂಶಯ ಪಡಬೇಡಿ. ಇದು ಕೊನೆಯ ಹೋರಾಟ. ಈ ಹಿಂದೆ ಒಬ್ಬ ಮುಖ್ಯಮಂತ್ರಿ ಮೋಸ ಮಾಡಿದರು. ಅದಕ್ಕಾಗಿ ಈ ಸಲ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
 

click me!