ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮತ್ವ. ಇಲ್ಲಿ ಕನ್ನಡವೇ ಉಸಿರು, ಕನ್ನಡವೇ ಬದುಕು, ಕನ್ನಡವೇ ಉದ್ಯೋಗವಾಗಿರಬೇಕು. ಕನ್ನಡವೆಂದರೆ ಸಂಸ್ಕೃತಿ, ಇತಿಹಾಸ ಭಾರತ್ ಜೋಡೋ ಅಂಗವಾಗಿ ಗುರುವಾರ ಸಂಜೆ ಮೊಳಕಾಲ್ಮುರಿನಲ್ಲಿ ನಡೆದ ಬಹಿರಂಗ ಅಧಿವೇಶದಲ್ಲಿ ರಾಹುಲ್ ಗಾಂಧಿ ಕನ್ನಡದ ಬಗ್ಗೆ ಸ್ವಾಭಿಮಾನಿ ಕಿಚ್ಚು ಹೊತ್ತಿಸಿದ ಬಗೆಯಿದು.
ಚಿತ್ರದುರ್ಗ (ಅ.14): ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮತ್ವ. ಇಲ್ಲಿ ಕನ್ನಡವೇ ಉಸಿರು, ಕನ್ನಡವೇ ಬದುಕು, ಕನ್ನಡವೇ ಉದ್ಯೋಗವಾಗಿರಬೇಕು. ಕನ್ನಡವೆಂದರೆ ಸಂಸ್ಕೃತಿ, ಇತಿಹಾಸ ಭಾರತ್ ಜೋಡೋ ಅಂಗವಾಗಿ ಗುರುವಾರ ಸಂಜೆ ಮೊಳಕಾಲ್ಮುರಿನಲ್ಲಿ ನಡೆದ ಬಹಿರಂಗ ಅಧಿವೇಶದಲ್ಲಿ ರಾಹುಲ್ ಗಾಂಧಿ ಕನ್ನಡದ ಬಗ್ಗೆ ಸ್ವಾಭಿಮಾನಿ ಕಿಚ್ಚು ಹೊತ್ತಿಸಿದ ಬಗೆಯಿದು. ರಾಜಕೀಯದ ಜೊತೆಗೆ ಪಕ್ಕಾ ಮಾತೃಭಾಷಾ ಹೋರಾಟಗಾರನಂತೆ ಕನ್ನಡಪರ ವಿಷಯ ಮಂಡಿಸಿದ ಅವರು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು. ಪಾದಯಾತ್ರೆ ವೇಳೆ ಅನೇಕ ನಿರುದ್ಯೋಗಿ ಯುವಕರು ಬಂದು ಉದ್ಯೋಗ ಇಲ್ಲದೇ ಇರುವುದನ್ನು ಪ್ರಸ್ತಾಪಿಸಿದ್ದಾರೆ. ಬಿಜೆಪಿಗೆ ಇಂಥದ್ದೆಲ್ಲ ಅರ್ಥವಾಗಬೇಕು ಎಂದರು.
ಕನ್ನಡಿಗರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಏಕೆ ಸಾಧ್ಯವಾಗುತ್ತಿಲ್ಲ? ಕನ್ನಡ ಬರೀ ಭಾಷೆಯಲ್ಲ. ಅದೊಂದು ಸಂಸ್ಕೃತಿ, ಇತಿಹಾಸ. ಕನ್ನಡಿಗರಿಗೆ ಇಂಥದ್ದೇ ಭಾಷೆಯಲ್ಲಿ ಪರೀಕ್ಷೆ ಬರೆಯಿರಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಕನ್ನಡ ಭಾಷೆ ಗೌರವಿಸಬೇಕು. ನೆರೆಯ ತಮಿಳುನಾಡು, ಕೇರಳದಲ್ಲಿ ಅಲ್ಲಿನ ಭಾಷೆ ಪ್ರಾಧಾನ್ಯತೆ ಪಡೆದಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡಲು ಹಿಂಜರಿಕೆ ಏಕೆ?. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಆದ್ಯತೆ ಆಗಬೇಕು. ಆದರೆ ಕೇಂದ್ರ ಸರ್ಕಾರ ಕನ್ನಡವನ್ನು 2ನೇ ದರ್ಜೆ ಭಾಷೆಯಾಗಿ ಪರಿಗಣನೆ ಮಾಡಿದೆ. ಬಿಜೆಪಿ, ಆರೆಸ್ಸೆಸ್ ಕರ್ನಾಟಕದ ಇತಿಹಾಸ, ಭಾಷೆ, ತತ್ವ ಸಿದ್ಧಾಂತದ ಮೇಲೆ ದಾಳಿ ಮಾಡುತ್ತಿದೆ ಎಂದು ಆರೋಪಿಸಿದರು.
ಭಾರತ್ ಜೋಡೋ ಯಾತ್ರೆಲಿ ರಾಹುಲ್ ಫುಶ್ಅಪ್ಸ್: ಸಾಧ್ಯ ಇಲ್ಲ ಅಂತ ಕೈ ಚೆಲ್ಲಿದ DKS: ವಿಡಿಯೋ ವೈರಲ್
ಕರ್ನಾಟಕದ ಶೇಂಗಾ, ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಟೊಮೆಟೋವನ್ನು ಬೀದಿಗೆ ಸುರಿಯಲಾಗುತ್ತಿದೆ. ಅನ್ನದಾತರ ಈ ಸಮಸ್ಯೆ ಹಾಗೂ ರೈತರು ಜಿಎಸ್‌ಟಿ ಕಟ್ಟುವಂಥ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಬಿಜೆಪಿ ಉತ್ತರಿಸಬೇಕು. ಅಲ್ಲದೆ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಳಕ್ಕೂ ದೇಶದ ಜನರಿಗೆ ವಿವರಣೆ ಕೊಡಬೇಕು. ಬೆಲೆ ಏರಿಕೆಯನ್ನು ಬಡವರು ಯಾಕೆ ಸಹಿಸಿಕೊಂಡು ಇರಬೇಕು. ಬೆರಳೆಣಿಕೆಯಷ್ಟು ಬಂಡವಾಳಶಾಹಿಗಳು ನೆಮ್ಮದಿಯಿಂದ ಇರಬೇಕಾ ಎಂದು ರಾಹುಲ್ ಪ್ರಶ್ನಿಸಿದರು.
ಜಿಟಿ ಜಿಟಿ ಮಳೆಯ ನಡುವೆಯೂ ರಾಹುಲ್ ಗಾಂಧಿ ಪಾದಯಾತ್ರೆ: ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಯನ್ನು ಸುರಿವ ಜಿಟಿ ಜಿಟಿ ಮಳೆಯ ನಡುವೆಯೂ ತಾಲೂಕಿನ ಬಿಜಿಕೆರೆ ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ತಾಲೂಕಿನ ಬಿಜಿಕೆರೆ ಗ್ರಾಮದ ಅಂಡರ್ ಪಾಸ್‌ಗೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಗ್ರಾಮದ ಮಹಿಳೆಯರು ಹಣೆಗೆ ತಿಲಕ ಇಟ್ಟು ಅದ್ಧೂರಿಯಾಗಿ ಬರಮಾಡಿಕೊಂಡರು. ರಾತ್ರಿ ಇಡೀ ಮಳೆ ಸುರಿದರೂ ಮುಂಜಾನೆಯಿಂದಲೇ ರಾಹುಲ್ ನೋಡುವುದಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಕಾದು ಕುಳಿತಿದ್ದರು.
ರಾಹುಲ್ ಗಾಂಧಿಯವರು ಆಗಮಿಸುತ್ತಿದ್ದಂತೆ ನಾಮು ತಾಮುಂದು ಹೋಗುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿತ್ತಾದರೂ ರಾಹುಲ್ ಗಾಂಧಿಯವರನ್ನು ಕಂಡ ಜನತೆ ಪುಳಕಿತರಾದಂತೆ ಕಂಡುಬಂತು. ರಾಹುಲ್ ಗಾಂಧಿಯವರ ಅದ್ಧೂರಿ ಸ್ವಾಗತಕ್ಕಾಗಿ ಗ್ರಾಮದಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ತಮಟೆ, ಡೊಳ್ಳು ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಪಾದಯಾತ್ರೆಗೆ ಮೆರಗು ತಂದಿತು. ರಾಹುಲ್ ಗಾಂಧಿಯವರು ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲೆಗಳಲ್ಲಿ ಮಕ್ಕಳು, ವಯೋವೃದ್ಧರಾದಿಯಾಗಿ ಕಾದು ಕುಳಿತಿದ್ದ ಜನತೆಯತ್ತ ಕೈ ಬೀಸುತ್ತಾ ಸಾಗಿದರು. ಜತೆಗೆ ಸಿದ್ದರಾಮಯ್ಯ, ಎಚ್.ಆಂಜನೇಯ ವಿವಿಧ ನಾಯಕರ ಬಳಿ ಬಂದು ಸೆಲ್ಪಿ ತೆಗೆದುಕೊಳ್ಳುವುದು ಕಂಡುಬಂತು.
ಬಿಎಸ್‌ವೈ, ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದೇಕೆ: ರಾಹುಲ್ ಪ್ರಶ್ನೆ
ರಾಹುಲ್ ಗಾಂಧಿಯವರ ಪಾದಯಾತ್ರೆಯನ್ನು ಬೆಂಬಲಿಸಿ ಸಾಗುತ್ತಿದ್ದ ಗಾಂಧಿ ವೇಷಧಾರಿಯೊಬ್ಬರು ಜನರತ್ತ ಕೈ ಬೀಸುತ್ತಿರುವುದು ವಿಶೇಷವಾಗಿತ್ತು. ಇದರೊಟ್ಟಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಆಗಮಿಸಿದ್ದ ಮಹಿಳೆಯೊಬ್ಬರು ಕಾಂಗ್ರೆಸ್ ಪಕ್ಷದ ಚಿಹ್ನೆ ಹೊಂದಿರುವ ಸೀರೆಯುಟ್ಟು ನೋಡುಗರ ಗಮನ ಸೆಳೆದರು. ಮಾರ್ಗದುದ್ದಕ್ಕೂ ಪುಟಾಣಿ ಮಕ್ಕಳು ರಾಹುಲ್ ಗಾಂಧಿಯವರನ್ನು ನೋಡಲು ಕಾದು ಕುಳಿತಿದ್ದು ವಿಶೇಷವಾಗಿತ್ತು. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಮುಖಂಡ ಡಾ.ಬಿ.ಯೋಗೇಶ ಬಾಬು ರಾಹುಲ್ ಗಾಂಧಿಯವರ ಜತೆಗೆ ಹೆಜ್ಜೆ ಹಾಕಿದರು.