ಕೂದಲು ಉದುರುವುದು, ದೋಸೆ, ಮುದ್ದೆ ಮಾಡಲು ಕೇಳುವುದು ದೌರ್ಜನ್ಯ ಹೇಗಾಗುತ್ತೆ? ಹೈಕೋರ್ಟ್‌

Published : Jul 29, 2026, 08:18 AM IST
Karnataka High court

ಸಾರಾಂಶ

ಪತಿಯ ಮನೆಯವರಿಂದ ದೌರ್ಜನ್ಯವಾಗಿದೆ ಎಂದು ಸೊಸೆಯೊಬ್ಬರು ದೂರು ನೀಡಿದ್ದರು. ಪೌಷ್ಠಿಕಾಂಶಯುಕ್ತ ಆಹಾರ ನೀಡದ ಕಾರಣ ಕೂದಲು ಉದುರಿದೆ ಎಂಬುದು ಅವರ ಆರೋಪಗಳಲ್ಲಿ ಒಂದಾಗಿತ್ತು. ಈ ವಾದವನ್ನು ಆಲಿಸಿದ ಹೈಕೋರ್ಟ್, ಕೂದಲು ಉದುರುವುದು ಮತ್ತು ದೋಸೆ ಮಾಡಲು ಕೇಳುವುದು ಸೆಕ್ಷನ್ 498ಎ ಅಡಿಯಲ್ಲಿ ಕ್ರೌರ್ಯವಾಗುತ್ತದೆಯೇ ಎಂದು ಪ್ರಶ್ನಿಸಿ, ತೀರ್ಪು ಕಾಯ್ದಿರಿಸಿದೆ.

ಬೆಂಗಳೂರು: ದೋಸೆ, ರಾಗಿ ಮುದ್ದೆ ಮಾಡುವಂತೆ ಅತ್ತೆ ಕೇಳುವುದು. ಪತ್ನಿಯ ತಲೆ ಕೂದಲು ಉದುರುವುದು ಕೌಟುಂಬಿಕ ದೌರ್ಜನ್ಯ ಆಗುತ್ತದೆಯೇ ಎಂದು ಮಹಿಳೆಯೊಬ್ಬರಿಗೆ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಪ್ರಶ್ನಿಸಿದೆ.

ಸೊಸೆ ನೀಡಿರುವ ದೂರಿನ ಅನ್ವಯ ಪೊಲೀಸರು ತಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498ಎ ಅಡಿಯಲ್ಲಿ (ವಿವಾಹಿತ ಮಹಿಳೆಗೆ ಆಕೆಯ ಪತಿ ಅಥವಾ ಪತಿಯ ಸಂಬಂಧಿಕರಿಂದ ವರದಕ್ಷಿಣೆ ಕಿರುಕುಳ, ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ನೀಡುವುದು) ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಅತ್ತೆ ಮತ್ತು ಆಕೆಯ ಸಂಬಂಧಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ನಡೆಸಿತು.

ದೌರ್ಜನ್ಯದಿಂದ ಕೂದಲು ಉದುರುತ್ತಿದೆ ಎಂದ ಮಹಿಳೆ

ವಿಚಾರಣೆ ವೇಳೆ ಪ್ರಕರಣದ ದೂರುದಾರೆಯಾದ ಅರ್ಜಿದಾರರ ಸೊಸೆ ಸ್ವತಃ ತಾವೇ ನ್ಯಾಯಾಲಯದ ಮುಂದೆ ಹಾಜರಾಗಿ, ಪತಿಯ ಮನೆಯ ಕಡೆಯವರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ನನಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ನೀಡಲ್ಲ, ಪ್ರತಿದಿನ ದೋಸೆ, ಅನ್ನ, ಸೊಪ್ಪು ಮತ್ತು ಬೇಳೆ ಸಾರು ನೀಡುತ್ತಿದ್ದರು. ಆದರೆ, ಅವರು ಮಾತ್ರ ದಿನ ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುತ್ತಿದ್ದರು. ನನ್ನ ಮೇಲಿನ ದೌರ್ಜನ್ಯದಿಂದಾಗಿ ನನಗೆ ತಲೆಕೂದಲು ಉದುರಿದೆ. ಅಡುಗೆ ಮನೆಗೆ ಹೋಗಲು ಅತ್ತೆ ನನ್ನನ್ನು ಬಿಡುತ್ತಿರಲಿಲ್ಲ. ನನಗೆ ಬರುತ್ತಿದ್ದ ಸಂಬಳವನ್ನೆಲ್ಲಾ ಪತಿಗೆ ನೀಡುತ್ತಿದ್ದು, ಖರ್ಚಿಗೆ ಏನೂ ಉಳಿಯುತ್ತಿರಲಿಲ್ಲ. ಪತಿಯನ್ನು ತನ್ನ ಕೊಠಡಿಯಲ್ಲಿಯೇ ಮಲಗುವಂತೆ ಅತ್ತೆ ಮಾಡಿದ್ದಳು. ನಾನು ನನ್ನ ಕೊಠಡಿಯಲ್ಲಿ ಏಕಾಂಗಿಯಾಗಿದ್ದೆ. ಐದೂವರೆ ತಿಂಗಳು ಈ ದುರಂತಮಯ ಬದುಕು ಅನುಭವಿಸಿ, ಪತಿಯ ಮನೆಯಿಂದ ಹೊರಬೀಳಬೇಕಾಯಿತು ಎಂದರು.

ಆಗ ಪೀಠ, ಉಸಿರುಗಟ್ಟಿಸುವ ಅತ್ತೆ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ನೀವು ದೂರಿನಲ್ಲಿ ಹೇಳಿದ್ದೀರಿ. ಪತಿ ಊಟ ಮಾಡುವವರೆಗೆ ನನ್ನನ್ನು ಊಟ ಮಾಡಲು ಬಿಡುತ್ತಿರಲಿಲ್ಲ. ಪತಿಗೆ ಬಿಸಿ ದೋಸೆ, ಪತಿ ಬೆಳಗ್ಗೆ 10 ಗಂಟೆಗೆ ತಿಂಡಿ ತಿಂದ ಬಳಿಕ ನಾನು ತಿಂಡಿ ತಿನ್ನಬೇಕಿತ್ತು ಎಂದು ಹೇಳಿದ್ದೀರಿ. ಇದನ್ನು ಆಧರಿಸಿ ಐಪಿಸಿ ಸೆಕ್ಷನ್‌ 498ಎ ಅಡಿ ಪ್ರಕರಣವನ್ನು ಅನ್ವಯಿಸಬಹುದೇ ಎಂದು ಕಟುವಾಗಿ ಪ್ರಶ್ನಿಸಿತು.

ಮಾನಹಾನಿ ಪ್ರಕರಣ

ದೂರದಾರೆಯು ಉತ್ತರಿಸಿ, ನನ್ನ ತಾಯಿ ಮನೆ ಬಳಿ ಬಂದು ರಸ್ತೆಯಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಅರ್ಜಿದಾರರು ನಿಂದಿಸಿದ್ದಾರೆ. ನನ್ನ ಘನತೆಯನ್ನು ಪ್ರಶ್ನಿಸಿದ್ದಾರೆ. ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆ ಎಂದು ನಿಂದಿಸಿದ್ದಾರೆ. ಇದರಿಂದ ನೆರೆಹೊರೆಯವರು ನನ್ನನ್ನು ಏನೆಂದು ಕೊಳ್ಳಬೇಡ. ಹೀಗಾಗಿ, ಅವರ ವಿರುದ್ಧ ಮಾನಹಾನಿ ಪ್ರಕರಣವನ್ನೂ ದಾಖಲಿಸಿದ್ದೇನೆ ಎಂದು ಸಮರ್ಥಸಿಕೊಂಡರು.

ಆಗ ನ್ಯಾಯಪೀಠ, ಪತಿಗೆ ರಾಗಿ ಮುದ್ದೆ ಮಾಡಿಕೊಡಿ ಎಂದು ಅತ್ತೆ ಹೇಳುವುದು ತಪ್ಪೇ? ನಿಮ್ಮ ತಲೆಕೂದಲು ಉದುರಿದ್ದಕ್ಕೆ ಐಪಿಸಿ ಸೆಕ್ಷನ್‌ 498ಎ? ನಿಮಗೆ ತಲೆ ಕೂದಲು ಉದುರುವುದು, ಪತಿಗೆ ದೋಸೆ, ರಾಗಿ ಮುದ್ದೆ ಮಾಡಿಕೊಡಿ ಎಂದು ಹೇಳುವುದು, ನಿಮಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಿಲ್ಲ ಎಂಬುದು ವರದಕ್ಷಿಣೆ ಕಿರುಕುಳವೇ? ಕೆಲವೊಂದು ಆರೋಪಗಳನ್ನು ಕ್ರೌರ್ಯಕ್ಕೆ ಸಮನಾಗಿಸಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.

ಅಲ್ಲದೇ, ದೂರುದಾರೆಯ ದೃಷ್ಟಿಯಲ್ಲಿನ ಕ್ರೌರ್ಯವು ಕ್ರೌರ್ಯವಲ್ಲ. ಕಾನೂನಿನ ಅಡಿ ಕ್ರೌರ್ಯ ಮಾತ್ರ ಕ್ರೌರ್ಯವಾಗುತ್ತದೆ. ಎಲ್ಲ ಅಹವಾಲುಗಳನ್ನು ಕ್ರೌರ್ಯಕ್ಕೆ ಹೋಲಿಕೆ ಮಾಡಲಾಗದು. ನೀವಿಬ್ಬರೂ ಪರಸ್ಪರ ದೂರು-ಪ್ರತಿದೂರು ದಾಖಲಿಸುವುದು ಕ್ರೌರ್ಯವಲ್ಲ ಎಂದು ಹೇಳಿತು.

ಅರ್ಜಿದಾರರ ಪರ ವಕೀಲರು, ಅತ್ತೆ ಮತ್ತು ಆಕೆಯ ಇಬ್ಬರು ಸಹೋದರರು ಮತ್ತು ಪತಿಯ ಸ್ನೇಹಿತನ ವಿರುದ್ಧ ಪತ್ನಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಲಾಗಿದೆ. ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪತಿ ಈಗಾಗಲೇ ಹಿಂಪಡೆದಿದ್ದಾರೆ. ಪ್ರಕರಣ ಎಫ್‌ಐಆರ್‌ ಹಂತದಲ್ಲಿದೆ ಎಂದು ತಿಳಿಸಿದರು.

ಅಂತಿಮವಾಗಿ ಅರ್ಜಿಯಲ್ಲಿ ಎಲ್ಲ‌ ಪಕ್ಷಕಾರರ ವಾದ-ಪ್ರತಿವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಕಳ್ಳತನ ಮಾಡ್ಬೇಕಂತ ಮನ್ಸಿಗೆ ಅನಿಸ್ತು ಮಾಡಿದೆ': ಯೂಟ್ಯೂಬ್‌ ನೋಡಿ 11 ಮೊಬೈಲ್‌, 9 ಲ್ಯಾಪ್‌ಟಾಪ್‌, 2 ಟ್ಯಾಬ್‌ ಕದ್ದಿದ್ದವ ಅರೆಸ್ಟ್!
ಧರ್ಮಸ್ಥಳ ಕೇಸ್‌ನಲ್ಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ; ನ್ಯಾಯಾಲಯದಿಂದ ಸಮನ್ಸ್