ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧದ ವಿಚಾರಣೆಗೆ ಯುಗಾದಿ ಹಬ್ಬದ ನಂತರ ಹಾಜರಾಗುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಿಐಡಿ ಅಧಿಕಾರಿಗಳಿಗೆ ವಿನಂತಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಮಾ.29): ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧದ ವಿಚಾರಣೆಗೆ ಯುಗಾದಿ ಹಬ್ಬದ ನಂತರ ಹಾಜರಾಗುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಿಐಡಿ ಅಧಿಕಾರಿಗಳಿಗೆ ವಿನಂತಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಸಚಿವರನ್ನು ಸಂಪರ್ಕಿಸಿ ಹೇಳಿಕೆ ಪಡೆಯಲು ಅಧಿಕಾರಿಗಳು ಶುಕ್ರವಾರ ಕರೆ ಮಾಡಿದ್ದರು.
ಕರೆ ಸ್ವೀಕರಿಸಿದ ರಾಜಣ್ಣ ಅವರು, ಯುಗಾದಿ ಹಾಗೂ ಹೊಸತೊಡಕು ಮುಗಿದ ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ, ಪ್ರಕರಣದ ಬಗ್ಗೆ ವಿವರ ಕೊಡುತ್ತೇನೆ ಎಂದು ಸಮಯಾವಕಾಶ ಕೋರಿದ್ದಾರೆ. ಇದಕ್ಕೆ ಸಮ್ಮತಿಸಿದ ಅಧಿಕಾರಿಗಳು, ಯುಗಾದಿ ನಂತರ ವಿಚಾರಣೆ ಚುರುಕುಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಹನಿಟ್ರ್ಯಾಪ್ ಯತ್ನ ಕುರಿತು ವಿಚಾರಣೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು, ನಗರದಲ್ಲಿರುವ ಸಚಿವರ ಸರ್ಕಾರಿ ಅಧಿಕೃತ ನಿವಾಸಕ್ಕೆ ತೆರಳಿ ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದ್ದರು.
ಪೆನ್‌ಡ್ರೈವ್ ಸಮೇತ ರಾಜಣ್ಣ ಪುತ್ರ ಪೊಲೀಸರಿಗೆ ದೂರು: ತುಮಕೂರು ಎಸ್‌ಪಿಗೆ ದೂರು ಸಲ್ಲಿಸಿದ ರಾಜೇಂದ್ರ
ದೆಹಲಿ ಭೇಟಿ ವೇಳೆ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿದಾಗ ಹನಿಟ್ರ್ಯಾಪ್ ಬಗ್ಗೆ ದೂರು ನೀಡಿಲ್ಲ. ವರಿಷ್ಠರು ಅವರದ್ದೇ ಮೂಲಗಳಿಂದ ಮಾಹಿತಿ ಪಡೆದಿರುತ್ತಾರೆ. ಹೈಕಮಾಂಡ್‌ಗೆ ನಾವು ಹೇಳುವ ಅಗತ್ಯವಿಲ್ಲ.
- ಸತೀಶ್ ಜಾರಕಿಹೊಳಿ, ಸಚಿವ
ಸಿಐಡಿ ಎಂಟ್ರಿ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣದ ವಿಚಾರಣೆಯನ್ನು (ತನಿಖೆ ಅಲ್ಲ) ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಿದೆ. ಈಗಾಗಲೇ ಸಿಐಡಿ ವಿಚಾರಣೆ ಆರಂಭಿಸಿದ್ದು, ಈ ಪ್ರಕರಣದಲ್ಲಿ ವಿವರಣೆ ಪಡೆಯುವ ಸಂಬಂಧ ಸಚಿವರಿಗೆ ನೋಟಿಸ್ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಸಚಿವ ರಾಜಣ್ಣ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರು.
ನಟಿ ರನ್ಯಾ ರಾವ್ ಪ್ರೋಟೋಕಾಲ್ ಬಗ್ಗೆ ತಂದೆಗೆ ಗೊತ್ತಿತ್ತು: ಸರ್ಕಾರಕ್ಕೆ ಗೌರವ್ ಗುಪ್ತಾ ವರದಿ
ಈ ಪತ್ರವನ್ನು ಸಿಐಡಿಗೆ ಕಳುಹಿಸಿದ ಸರ್ಕಾರವು, ಹನಿಟ್ರ್ಯಾಪ್ ಕುರಿತು ವಿಚಾರಣೆ ನಡೆಸಿ ತ್ವರಿತವಾಗಿ ವರದಿ ನೀಡುವಂತೆ ಸೂಚಿಸಿದೆ. ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ವಿಚಾರಣೆ ಕೈಗೆತ್ತಿಕೊಂಡಿರುವ ಸಿಐಡಿ ಡಿಐಜಿ ವಂಶಿಕೃಷ್ಣ ನೇತೃತ್ವದ ಎಸ್ಪಿ ರಾಘವೇಂದ್ರ ಹೆಗಡೆ, ಡಿವೈಎಸ್ಪಿ ಕೇಶವಮೂರ್ತಿ ಅವರನ್ನು ಒಳಗೊಂಡ ತಂಡವು, ಜಯಮಹಲ್ ರಸ್ತೆಯಲ್ಲಿರುವ ಸಚಿವರ ಅಧಿಕೃತ ಸರ್ಕಾರಿ ನಿವಾಸಕ್ಕೆ ತೆರಳಿ ಪ್ರಾಥಮಿಕ ಹಂತದ ಮಾಹಿತಿ ಕಲೆ ಹಾಕಿತು. ಆ ಮನೆಯ ಭದ್ರತಾ ಸಿಬ್ಬಂದಿ ಹಾಗೂ ಮನೆ ಕೆಲಸಗಾರರನ್ನು ವಿಚಾರಣೆ ನಡೆಸಿ ಘಟನೆ ಕುರಿತು ವಿವರ ಸಂಗ್ರಹಿಸಿ ಅಧಿಕಾರಿಗಳು ಮರಳಿದ್ದಾರೆ.