ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಮಲ ಮಗಳು ಹಾಗೂ ನಟಿ ರನ್ಯಾ ರಾವ್ ಶಿಷ್ಟಾಚಾರ ಸೌಲಭ್ಯ (ಪ್ರೋಟೋಕಾಲ್) ಪಡೆದಿರುವುದು ಡಿಜಿಪಿ ರಾಮಚಂದ್ರರಾವ್ ಅವರ ಅರಿವಿಗಿತ್ತು.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಮಾ.29): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಮಲ ಮಗಳು ಹಾಗೂ ನಟಿ ರನ್ಯಾರಾವ್ ಶಿಷ್ಟಾಚಾರ ಸೌಲಭ್ಯ (ಪ್ರೋಟೋಕಾಲ್) ಪಡೆದಿರುವುದು ಡಿಜಿಪಿ ರಾಮಚಂದ್ರರಾವ್ ಅವರ ಅರಿವಿಗಿತ್ತು. ಆದರೆ, ಅದಕ್ಕೆ ನಿರ್ಬಂಧ ಹೇರುವಂತೆ ಅವರು ನಿರ್ದೇಶನ ಕೊಟ್ಟಿರುವುದಕ್ಕೆ ಅಥವಾ ಆಕೆಗೆ ಪ್ರೋಟೋಕಾಲ್ ನೀಡುವಂತೆ ಪೊಲೀಸರಿಗೆ ಸೂಚಿಸಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ವಿಚಾರಣಾ ತಂಡ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.
ರನ್ಯಾ ಶಿಷ್ಟಾಚಾರ ಪಡೆದಿದ್ದರೂ ತಪಾಸಣೆ ನಡೆಸಲು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ಬಂಧವಿರಲಿಲ್ಲ. ಹೀಗಾಗಿ, ಪೊಲೀಸ್ ಶಿಷ್ಟಾಚಾರ ಬಳಸಿಕೊಂಡು ರನ್ಯಾ ಚಿನ್ನ ಕಳ್ಳ ಸಾಗಣೆ ಮಾಡಿದ್ದಾರೆಂಬ ಆರೋಪ ನಿರಾಧಾರವಾದದ್ದು ಎಂಬ ಅಂಶವನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಈ ಮೂಲಕ ನಟಿ ರನ್ಯಾ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಕೇಂದ್ರದ ಕಸ್ಟಮ್ಸ್ ವಿಭಾಗದ ಲೋಪದ ಬಗ್ಗೆ ವಿಚಾರಣಾ ವರದಿಯಲ್ಲಿ ಪರೋಕ್ಷವಾಗಿ ಪ್ರಸ್ತಾಪವಾಗಿದೆ.
ಚಿನ್ನ ಅಕ್ರಮ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಬೇಲ್ ಇಲ್ಲ, ಕಾರಣವೇನು?
230 ಪುಟಗಳ ವರದಿ: ವಿಮಾನ ನಿಲ್ದಾಣದಲ್ಲಿ ನಟಿಯಿಂದ ಶಿಷ್ಟಾಚಾರ ದುರ್ಬಳಕೆ ಆರೋಪ ಸಂಬಂಧ ವಿಚಾರಣೆ ನಡೆಸಿ 230 ಪುಟಗಳ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಗುರುವಾರ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕಸ್ಟಮ್ಸ್ ಲೋಪವೂ ಪ್ರಸ್ತಾಪ: ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಪಡೆದಿದ್ದರೂ ಯಾವುದೇ ಅಧಿಕಾರಿ ಅಥವಾ ಅವರ ಕುಟುಂಬದವರಿಗೆ ಕಸ್ಟಮ್ಸ್ ತಪಾಸಣೆ ವಿನಾಯಿತಿ ಇರುವುದಿಲ್ಲ. ಕಸ್ಟಮ್ಸ್ ಬಯಸಿದರೆ ಪೊಲೀಸ್ ಅಧಿಕಾರಿಗಳು ಸಹ ತಪಾಸಣೆಗೆ ಒಳಗಾಗಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ತನ್ಮೂಲಕ ನಟಿ ರನ್ಯಾ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಕಸ್ಟಮ್ಸ್ ಲೋಪದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ. ಮಾ.3ರಂದು ದುಬೈನಿಂದ ಚಿನ್ನ ಕಳ್ಳ ಸಾಗಣೆ ವೇಳೆ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಬಂಧಿಸಿದ್ದರು.
ತನಿಖೆ ವೇಳೆ ಏರ್‌ಪೋರ್ಟ್‌ನಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ಹೆಸರು ಬಳಸಿ ಪ್ರೋಟೋಕಾಲ್ ಸೌಲಭ್ಯವನ್ನು ರನ್ಯಾ ಪಡೆದಿರುವುದು ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರೋಟೋಕಾಲ್ ದುರ್ಬಳಕೆ ಆರೋಪ ಕುರಿತು ಡಿಜಿಪಿ ರಾಮಚಂದ್ರರಾವ್ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದಲ್ಲಿ ಸಿಐಡಿ ಡಿಐಜಿ ವಂಶಿಕೃಷ್ಣ ಅವರನ್ನೊಳಗೊಂಡ ತಂಡವನ್ನು ಸರ್ಕಾರ ನೇಮಿಸಿತ್ತು. ಈ ಬಗ್ಗೆ 7 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ ಸೂಚಿಸಿತ್ತು. ಆದರೆ ಮೂರು ವಾರಗಳ ಸುದೀರ್ಘ ವಿಚಾರಣೆ ಬಳಿಕ ಸರ್ಕಾರಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ತಂಡ ವರದಿ ಸಲ್ಲಿಸಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ತಂದೆ ಸರ್ಕಾರಿ ಕಾರು ಬಳಸಿದ್ದ ರನ್ಯಾ: ಹಲವು ಬಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾರಾವ್ ಪೊಲೀಸ್ ಪ್ರೋಟೋಕಾಲ್, ಪೊಲೀಸ್ ವಾಹನ ಸೌಲಭ್ಯ ಪಡೆದಿದ್ದಾರೆ. ಇದು ಅರಿವಿಗೆ ಬಂದಿದ್ದರೂ ಡಿಜಿಪಿ ರಾಮಚಂದ್ರರಾವ್ ಅವರು ಮಗಳಿಗೆ ನಿರ್ಬಂಧಿಸಿರುವ ಬಗ್ಗೆ ಯಾವುದೇ ಸಾಕ್ಷ್ಯವಿಲ್ಲ. ಹಾಗೆಯೇ ಮಗಳಿಗೆ ಪ್ರೋಟೋಕಾಲ್ ನೀಡುವಂತೆ ಅವರು ಪೊಲೀಸ್ ಸಿಬ್ಬಂದಿಗೆ ಸೂಚಿಸಿರುವುದಕ್ಕೂ ಪುರಾವೆ ಸಿಕ್ಕಿಲ್ಲವೆಂದು ಗೌರವ್ ಗುಪ್ತಾ ಅವರ ವರದಿಯಲ್ಲಿ ಉಲ್ಲೇಖವಾಗಿರುವುದಾಗಿ ಮೂಲಗಳು ತಿಳಿಸಿವೆ.
ಪುತ್ರಿ ಪ್ರೋಟೋಕಾಲ್ ಹಾಗೂ ಸರ್ಕಾರಿ ವಾಹನ ಬಳಸಿರುವುದು ಸರ್ಕಾರಿ ಸೇವೆಯ ನಿಯಾಮವಳಿಗಳ ಸ್ಪಷ್ಟ ಉಲ್ಲಂಘನೆ. ವಿಚಾರಣೆ ವೇಳೆ ಡಿಜಿಪಿ ರಾಮಚಂದ್ರರಾವ್ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ತಮಗೆ ಇದ್ಯಾವುದೂ ಗೊತ್ತಿಲ್ಲ ಎಂದಿದ್ದಾರೆ. ಡಿಜಿಪಿ ಸೂಚನೆ ಮೇರೆಗೆ ಅವರ ಪುತ್ರಿಗೆ ಶಿಷ್ಟಾಚಾರ ಸೌಲಭ್ಯ ನೀಡಿದ್ದೆ ಎಂದು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್‌ಸ್ಟೇಬಲ್ ಡಿಆರ್‌ಐ ಮುಂದೆ ನೀಡಿದ್ದ ಹೇಳಿಕೆಯನ್ನು ಡಿಜಿಪಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ರನ್ಯಾ ಒಂದಕ್ಕಿಂತ ಹೆಚ್ಚಿನ ಬಾರಿ ಸರ್ಕಾರಿ ಕಾರನ್ನು ಬಳಸಿದ್ದಾರೆ ಎಂಬುದಕ್ಕೆ ವಿಮಾನ ನಿಲ್ದಾಣದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಸ್ಟಮ್ಸ್ ತಪಾಸಣೆ ನಡೆಸಿಲ್ಲ: ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಹೊಂದಿದ ಚುನಾಯಿತ ಪ್ರತಿನಿಧಿಗಳು ಅಥವಾ ಸರ್ಕಾರಿ ಅಧಿಕಾರಿಗಳಿಗೆ ಕಸ್ಟಮ್ಸ್ ತಪಾಸಣೆಯಿಂದ ಕಾನೂನು ಪ್ರಕಾರ ಯಾವುದೇ ವಿನಾಯಿತಿ ಇಲ್ಲ. ಅಂತೆಯೇ ಮಾ.3 ರಂದು ದುಬೈನಿಂದ ಆಗಮಿಸಿದ್ದ ರನ್ಯಾ ರಾವ್ ರನ್ನು ಕಸ್ಟಮ್ಸ್ ತಪಾಸಣೆ ಬಳಿಕ ಡಿಆರ್‌ಐ ಅಧಿಕಾರಿಗಳು ಬಂಧಿಸಿದಾಗ 14.2 ಕೆ.ಜಿ. ಚಿನ್ನ ಪತ್ತೆಯಾಗಿದೆ. ಹೀಗಾಗಿ ಈ ಮೊದಲು ಸಹ ಅವರನ್ನು ತಪಾಸಣೆ ನಡೆಸಲು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ಬಂಧವಿರಲಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನ ಕಳ್ಳ ಸಾಗಣೆಗೆ ರನ್ಯಾರಾವ್ ಅವರು ಪೊಲೀಸ್ ಪ್ರೋಟೋಕಾಲ್ ಬಳಸಿದ್ದಾರೆ ಎಂಬ ಆರೋಪ ನಿರಾಧಾರ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ವರದಿ ಮುಂದೇನು?: ಪೊಲೀಸ್ ಪ್ರೋಟೋಕಾಲ್ ದುರ್ಬಳಕೆ ಪ್ರಕರಣ ಸಂಬಂಧ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳ ವರದಿ ಆಧರಿಸಿ ಮುಂದಿನ ಕ್ರಮ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಮಾಲೋಚಿಸಿದ ಬಳಿಕ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣ: ಬಳ್ಳಾರಿ ಚಿನ್ನದ ವ್ಯಾಪಾರಿ ಬಂಧನ
ವರದಿಯಲ್ಲಿ ಏನಿದೆ?
- ಮಲಮಗಳು ರನ್ಯಾರಾವ್ ಶಿಷ್ಟಾಚಾರ ಸೌಲಭ್ಯ ಪಡದಿರುವುದು ಮಲತಂದೆ ರಾವ್‌ಗೆ ಗೊತ್ತಿತ್ತು
- ಆದರೆ ಅದನ್ನು ಕೊಡಬೇಡಿ ಎಂದು ಡಿಜಿಪಿ ರಾಮಚಂದ್ರ ರಾವ್ ಅವರು ಪೊಲೀಸರಿಗೆ ಸೂಚಿಸಿರಲಿಲ್ಲ
- ಪುತ್ರಿಗೆ ಏರ್‌ಪೋರ್ಟಲ್ಲಿ ಶಿಷ್ಟಾಚಾರ ನೀಡುವಂತೆ ಪೊಲೀಸರಿಗೆ ನಿರ್ದೇಶನ ಕೊಟ್ಟಿದ್ದಕ್ಕೆ ಪುರಾವೆ ಇಲ್ಲ
- ಶಿಷ್ಟಾಚಾರ ಪಡೆದಿದ್ದರೂ ತಪಾಸಣೆ ನಡೆಸಲು ಕಸ್ಟಮ್ಸ್ ಅಧಿಕಾರಿಗಳಿಗೆ ನಿರ್ಬಂಧ ಏನೂ ಇರಲಿಲ್ಲ