ಸುಪಾರಿ ಹಂತಕರಿಂದ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿ ಡಿಜಿಗೆ ಗುರುವಾರ ದೂರು ನೀಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಹಾಗೂ ಶಾಸಕ ರಾಜೇಂದ್ರ, ಡಿಜಿ ಸೂಚನೆಯಂತೆ ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪೆನ್‌ಡ್ರೈವ್ ಸಮೇತ ದೂರು ನೀಡಿದ್ದಾರೆ.
ತುಮಕೂರು (ಮಾ.29): ಸುಪಾರಿ ಹಂತಕರಿಂದ ತಮ್ಮ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿ ಡಿಜಿಗೆ ಗುರುವಾರ ದೂರು ನೀಡಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪುತ್ರ ಹಾಗೂ ಶಾಸಕ ರಾಜೇಂದ್ರ, ಡಿಜಿ ಸೂಚನೆಯಂತೆ ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪೆನ್‌ಡ್ರೈವ್ ಸಮೇತ ದೂರು ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮಗಳ ಹುಟ್ಟಿದ ಹಬ್ಬದ ದಿನ ಕೊಲೆಗೆ ಯತ್ನ ನಡೆದಿತ್ತು. 70 ಲಕ್ಷ ರು.ಗೆ ಸುಪಾರಿ ನೀಡಲಾಗಿದ್ದು, ₹5 ಲಕ್ಷವನ್ನು ಪಾವತಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಂದು ಹುಡುಗಿಯು ಹುಡುಗನ ಜೊತೆ ಮಾತನಾಡುವ 18 ನಿಮಿಷದ ಆಡಿಯೋ ಇದೆ.
ಸೋಮ ಮತ್ತು ಭರತ್ ಎನ್ನುವ ಹೆಸರು ಆಡಿಯೋದಲ್ಲಿ ಕೇಳಿ ಬಂದಿದೆ. ಅವರಿಬ್ಬರು ಯಾರಂತ ನನಗೆ ಗೊತ್ತಿಲ್ಲ. ದೂರಿನೊಂದಿಗೆ ಆಡಿಯೋ ಇರುವ ಪೆನ್‌ಡ್ರೈವ್ ಕೊಟ್ಟು ಭದ್ರತೆ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು. ಜಿಪಿಎಸ್ ಚಿಪ್ ಅನ್ನು ಕಾರಿಗೆ ಅಳವಡಿಸಬೇಕೆಂದು ಸ್ಕೆಚ್ ಹಾಕಲಾಗಿತ್ತಂತೆ. ಜನವರಿಯಲ್ಲಿ ನನ್ನ ಸರ್ಕಲ್‌ನಲ್ಲಿ ಆಡಿಯೋ ಸಿಕ್ಕಿತು. ತಮಾಷೆ ಅಂತಾ ಸುಮ್ಮನಾಗಿದ್ದೆ. ಅದರೆ ಅದು ಗಂಭೀರ ವಿಷಯ ಎಂದು ಗೊತ್ತಾಗಿ ದೂರು ನೀಡಿದ್ದೇನೆ ಎಂದರು. ಹನಿಟ್ಯಾಪ್ ವಿಚಾರವಾಗಿ ಸಿಐಡಿ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ರಾಜೇಂದ್ರ ಪ್ರತಿಕ್ರಿಯಿಸಿದರು.
ನಟಿ ರನ್ಯಾ ರಾವ್ ಪ್ರೋಟೋಕಾಲ್ ಬಗ್ಗೆ ತಂದೆಗೆ ಗೊತ್ತಿತ್ತು: ಸರ್ಕಾರಕ್ಕೆ ಗೌರವ್ ಗುಪ್ತಾ ವರದಿ
ದೂರು ಸ್ವೀಕರಿಸಿದ್ದೇವೆ- ಎಸ್ಪಿ: ತುಮಕೂರು ಎಸ್ಪಿ ಅಶೋಕ್ ಕೆ.ವಿ. ಅವರು ಮಾಧ್ಯಮದವರ ಜೊತೆ ಮಾತನಾಡಿ, ರಾಜೇಂದ್ರ ದೂರನ್ನು ವಿಚಾರಣೆಗೆ ತೆಗೆದುಕೊಂಡಿದ್ದೇವೆ. ಕ್ಯಾತಸಂದ್ರ ಠಾಣೆಗೆ ದೂರು ಕೊಡಲಾಗಿದೆ. ಜೊತೆಗೆ ಒಂದು ಪೆನ್ ಡ್ರೈವ್ ಕೊಟ್ಟಿದ್ದಾರೆ. ಅದರಲ್ಲಿ ಏನು ಇದೆ ಎಂದು ಗೊತ್ತಿಲ್ಲ. ಚೆಕ್ ಮಾಡಿ ಹೇಳುತ್ತೇನೆ. ತಡವಾಗಿ ದೂರು ನೀಡಿದ್ದಕ್ಕೆ ಕಾರಣ ಕೊಟ್ಟಿಲ್ಲ ಎಂದು ತಿಳಿಸಿದರು. ಆಡಿಯೋದಲ್ಲಿ ಭರತ್ ಮತ್ತು ಸೋಮ ಎನ್ನುವವರ ಹೆಸರಿದೆ ಎಂದು ಹೇಳಿದ್ದಾರೆ. ಸೋಮ ತುಮಕೂರು ನಗರ ಪೊಲೀಸ್ ಠಾಣೆಯ ರೌಡಿಶೀಟರ್, ಈ ಹಿಂದೆ ತುಮಕೂರು ಜೈಲಿಗೆ ಕಳುಹಿಸಲಾಗಿತ್ತು. ಸದ್ಯ ಬೇಲ್ ಮೇಲೆ ಹೊರಗಡೆ ಇದ್ದಾನೆ. ಈ ಬಗ್ಗೆಯೂ ಸಹ ತನಿಖೆ ನಡೆಸಲಾಗುತ್ತದೆ ಎಂದರು.
ಶಾಮಿಯಾನ ಹಾಕಲು ಬಂದು ಕೊಲೆ ಯತ್ನ: ಪೊಲೀಸ್ ಮಹಾನಿರ್ದೇಶಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ, ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ಆದರೆ ಕೊಲೆಗೆ ವಿಫಲ ಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು. ಕಳೆದ ನವೆಂಬರ್ 16ನೇ ತಾರೀಖು ನನ್ನ ಮಗಳ ಹುಟ್ಟುಹಬ್ಬ ಇತ್ತು. ಆ ಕಾರ್ಯಕ್ರಮದ ಹಿಂದಿನ ಅಂದರೆ ನ.15 ರಂದು ನಮ್ಮ ಮನೆಗೆ ಶಾಮಿಯಾನ ಹಾಕುವ ನೆಪದಲ್ಲಿ ಬಂದು ನನ್ನ ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಕೊಲೆ ಯತ್ನದ ಸಂಗತಿ ನನಗೆ ಜನವರಿಯಲ್ಲಿ ಗೊತ್ತಾಯಿತು. ಆಗ ನನಗೆ ಬಾತ್ಮಿದಾರರ ಮೂಲಕ ಒಂದು ವಾಯ್ಸ್ ರೆಕಾರ್ಡ್ (ಧ್ವನಿ ಮುದ್ರಿಕೆ) ಸಿಕ್ಕಿತು. ಆ ಆಡಿಯೋದಲ್ಲಿ ತುಮಕೂರಿನ ಮೂವರ ಹೆಸರುಗಳು ಉಲ್ಲೇಖವಾಗಿವೆ ಎಂದು ಹೇಳಿದರು.
ಹಾಲಿನ ದರ ಏರಿಕೆ: ಮೋಸ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ನಂ.1: ಆರ್.ಅಶೋಕ್
ಅಲ್ಲದೆ ಆ ವ್ಯಕ್ತಿಗಳ ಪೈಕಿ ಒಬ್ಬಾತನ ಖಾತೆಗೆ 5 ಲಕ್ಷ ರು. ಹಣ ವರ್ಗಾವಣೆಯಾಗಿದೆ. ನನ್ನ ಹತ್ಯೆಗೆ ನೀಡಿದ ಹಣ ಇದಾಗಿದೆ. ಈ ಕೊಲೆ ಯತ್ನದ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ತಿಳಿಸಿದೆ. ಮುಖ್ಯಮಂತ್ರಿಗಳು ಸೂಕ್ತ ದಾಖಲೆಗಳೊಂದಿಗೆ ಡಿಜಿಪಿಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು. ಅಂತೆಯೇ ಡಿಜಿಪಿ ಅವರನ್ನು ಭೇಟಿಯಾಗಿ ದೂರು ನೀಡಿದೆ. ಆದರೆ ತುಮಕೂರಿನಲ್ಲಿ ಕೃತ್ಯ ನಡೆದಿರುವುದರಿಂದ ಆ ಜಿಲ್ಲೆಯ ಎಸ್ಪಿಯವರಿಗೆ ದೂರು ಕೊಡುವಂತೆ ಡಿಜಿಪಿರವರು ಸೂಚಿಸಿ ಕಳುಹಿಸಿದ್ದಾರೆ. ಹಾಗಾಗಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ದೂರು ಸಲ್ಲಿಸುತ್ತೇನೆ ಎಂದು ಹೇಳಿದರು.