ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿಗಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತಿದಿನ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ. ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೆ ಮನೆಯಿಂದ ಹೊರ ಬರುವುದಿಲ್ಲ. ಯಾವ ಶಕ್ತಿಯನ್ನು ನಂಬುತ್ತೇನೋ ಅದರ ಮೇಲೆ ಭಕ್ತಿ, ಪ್ರೀತಿ ಇರುತ್ತದೆ ಎಂದ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು(ಜ.11): ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಯಾರೂ ಭವಿಷ್ಯ ನುಡಿಯುವ ಅಗತ್ಯವಿಲ್ಲ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಜೊತೆಗೆ ನಾನು ಯಾವುದೇ ಔತಣಕೂಟ ತಡೆಯುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾಗುತ್ತಾರೆ ಎಂಬ ವಿನಯ್ ಗುರೂಜಿ ಭವಿಷ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಸ್ವಾಮೀಜಿ, ಗುರೂಜಿಗಳಿಗೂ ನಾನು ಮನವಿ ಮಾಡುವೆ. ಯಾರೂ ಈ ರೀತಿ ಹೇಳಿಕೆ ನೀಡಬಾರದು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಕುರಿತಂತೆ ಯಾರೂ ಭವಿಷ್ಯ ನುಡಿಯುವ ಅವಶ್ಯಕತೆಯಿಲ್ಲ ಎಂದರು.
ಡಿಕೆಶಿ ವಿರುದ್ಧ ಸಿಡಿದ ಇಬ್ಬರು ಸಚಿವರು: 5 ವರ್ಷವೂ ಸಿದ್ದು ಸಿಎಂ ಆಗಿ ಮುಂದುವರಿಲೆಂದು ಅಗ್ರಹ!
ಔತಣಕೂಟ ನಾನು ತಡೆದಿಲ್ಲ:
ಇದೇ ವೇಳೆ ದಲಿತರ ಔತಣ ಕೂಟಕ್ಕೆ ತಡೆಯೊಡ್ಡಿದ್ದಾರೆ ಎಂಬಆ ರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಔತಣಕೂಟ ತಡೆಯಲು ಹೋಗಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನಡೆಯುತ್ತದೆ. ಯಾವ ಪವರೂ ಇಲ್ಲ, ಯಾವ ಶೇರೂ ಇಲ್ಲ ಎಂದರು. ಸಚಿವ ರಾಜಣ್ಣ ತಮ್ಮ ಬಗ್ಗೆ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು ಅದೇ ರೀತಿ ದೊಡ್ಡವರ ಬಗ್ಗೆ ಮಾತನಾಡುವುದೂ ಇಲ್ಲ. ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸುವ ಕುರಿತು ಪ್ರತಿಕ್ರಿಯಿಸಿ, ಜಾತಿ ಗಣತಿ ವರದಿ ಕುರಿತು ನಾವು ಯಾವುದೇ ಪ್ರತ್ಯೇಕ ಸಭೆ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆಗೆ ತರುತ್ತೇವೆ ಎಂದು ಹೇಳಿದ್ದಾರೆ. ಸಂಪುಟದಲ್ಲಿ ಮಂಡನೆ ಆದ ನಂತರ ಅದರ ಬಗ್ಗೆ ಚರ್ಚೆಯಾಗಲಿದೆ. ಅಲ್ಲಿಯವರೆಗೆ ಏನನ್ನೂ ಹೇಳುವುದಿಲ್ಲ ಮತ್ತು ಚರ್ಚೆ, ಸಭೆಯನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
13ರ ಪದಾಧಿಕಾರಿಗಳ ಸಭೆಗೆ ಸುರ್ಜೇವಾಲ
ಪಕ್ಷ ಸಂಘಟನೆ ಕುರಿತು ಚರ್ಚಿಸಲು ಜ.13ರಂದು ಬೆಳಗ್ಗೆ ಎಲ್ಲ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಭಾರತ್ ಜೋಡೋ ಭವನದಲ್ಲಿ ಸಭೆ ನಡೆಸಲಾಗುವುದು. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕೂಡ ಇರಲಿದ್ದಾರೆ.
ಸಂಜೆ 4 ಗಂಟೆಗೆ ನಾನು ಪ್ರತ್ಯೇಕವಾಗಿ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಲಿದ್ದೇನೆ. ಸಚಿವರಿಗೆ ಮತ್ತು ಶಾಸಕರಿಗೆ ಪಕ್ಷ ಸಂಘಟನೆ ಕುರಿತ ಜವಾಬ್ದಾರಿ ನೀಡಲು ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುವುದು. ಜ.14ಕ್ಕೆ ಕಾಂಗ್ರೆಸ್ ಪಕ್ಷದ ನೂತನ ಕಟ್ಟಡ ಉದ್ಘಾಟನೆಗಾಗಿ ನಾನು ಮತ್ತು ಮುಖ್ಯಮಂತ್ರಿ ಗಳು ದೆಹಲಿಗೆ ತೆರಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
'ಅಧಿಕಾರ ಒದ್ದು ಕಿತ್ಕೋಬೇಕು..' ಎಂದಿದ್ದ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ? ವಿನಯ್ ಗುರೂಜಿ ಹೇಳಿದ್ದೇನು?
ತೊಂದರೆ ಕೊಡುವವರಿಂದ ರಕ್ಷಣೆಗೆ ಹೋಮ: ಡಿ.ಕೆ.ಶಿವಕುಮಾರ್
ಬೆಂಗಳೂರು: ನನಗೆ ಯಾರಾರು ತೊಂದರೆ ಕೊಡುತ್ತಾರೋ ಅವರಿಂದ ರಕ್ಷಣೆ ಸಿಗಲಿ ಎಂಬ ಕಾರಣಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿರುತ್ತೇನೆ. ಅದೇ ರೀತಿ ನೆಮ್ಮದಿ, ರಕ್ಷಣೆಗಾಗಿ ತಮಿಳುನಾಡಿನಲ್ಲಿ ಹೋಮ ಮಾಡಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶತ್ರು ನಾಶಕ್ಕೆ ಡಿ.ಕೆ.ಶಿವಕುಮಾರ್ ಹೋಮ ಮಾಡಿಸಿದ್ದಾರೆಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿಗಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತಿದಿನ ಪೂಜೆ, ಹೋಮ, ದೇವರ ದರ್ಶನ ಮಾಡುವ ವ್ಯಕ್ತಿ. ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೆ ಮನೆಯಿಂದ ಹೊರ ಬರುವುದಿಲ್ಲ. ಯಾವ ಶಕ್ತಿಯನ್ನು ನಂಬುತ್ತೇನೋ ಅದರ ಮೇಲೆ ಭಕ್ತಿ, ಪ್ರೀತಿ ಇರುತ್ತದೆ ಎಂದರು. ಮಾಧ್ಯಮಗಳೂ ನನಗೆ ಬೇಕಾದಷ್ಟು ತೊಂದರೆ ಕೊಡುತ್ತಿರುತ್ತೀರಿ. ಇಲ್ಲದೇ ಇರುವ ಸುದ್ದಿಗಳನ್ನು ಸೃಷ್ಟಿ ಮಾಡುತ್ತಿರುತ್ತೀರಿ. ಅದಕ್ಕಾಗಿ ಮಾಧ್ಯಮಗಳಿಂದಲೂ ರಕ್ಷಣೆ ಸಿಗಲಿ ಎಂದು ಪ್ರಾ ರ್ಥಿಸುತ್ತಿರುತ್ತೇನೆ ಎಂದು ಹೇಳಿದರು.