ಕೋರ್ಟ್ ಹಾಲ್‌ನಲ್ಲಿ ದರ್ಶನ್ ರನ್ನು ಕಂಡು ಗೆಳತಿ ಪವಿತ್ರಾ ಗೌಡ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡರು. ಇದರಿಂದ ದರ್ಶನ್ ಪವಿತ್ರಾ ಗೌಡ ಹತ್ತಿರಕ್ಕೆ ಹೋಗಿ ಹೆಗಲಮೇಲೆ ಕೈ ಹಾಕಿ ಸಾಂತ್ವನ ಹೇಳಿದರು.
ಬೆಂಗಳೂರು(ಜ.11): ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಚಿತ್ರ ದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಇತರೆ ಆರೋಪಿಗಳು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಹಾಲ್‌ನಲ್ಲಿ ದರ್ಶನ್ ರನ್ನು ಕಂಡು ಗೆಳತಿ ಪವಿತ್ರಾ ಗೌಡ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡರು. ಇದರಿಂದ ದರ್ಶನ್ ಪವಿತ್ರಾ ಗೌಡ ಹತ್ತಿರಕ್ಕೆ ಹೋಗಿ ಹೆಗಲಮೇಲೆ ಕೈ ಹಾಕಿ ಸಾಂತ್ವನ ಹೇಳಿದರು.
ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿತು. ಇದೇ ವೇಳೆ ಜ.12ರಿಂದ 16ವರೆಗೆ ಮೈಸೂರಿಗೆ ಹೋಗಲು ದರ್ಶನ್‌ಗೆ ನ್ಯಾಯಾಲಯ ಅನುಮತಿ ನೀಡಿತು. ಅದೇ ರೀತಿ ತನ್ನ ಫ್ಯಾಷನ್ ಡಿಸೈನ್ ಸಂಸ್ಥೆಗಾಗಿ ಕಚ್ಚಾವಸ್ತುಗಳನ್ನು ಖರೀದಿಸುವುದ ಕ್ಕಾಗಿ ಪವಿತ್ರಾ ಗೌಡಗೆ ಜ.15 ರಿಂದ ಫೆ.10ರ ವರೆಗೆ ಮುಂಬೈ ಹಾಗೂ ದೇಶದ ಇತರೆ ಪ್ರದೇಶಕ್ಕೆ ಹೋಗಲು ನ್ಯಾಯಾಲಯ ಅನಮತಿಸಿತು. ಇನ್ನು ನಾಗರಾಜ್ ಗೆ ಫೆ.24ವರೆಗೆ ಮೈಸೂರಿಗೆ ತೆರಳಲು, ರಾಘವೇಂದ್ರ, ಜಗದೀಶ್, ಅನುಕುಮಾರ್ ಜ.10ರಿಂದ ಫೆ.24ರವರೆಗೆ ಚಿತ್ರದುರ್ಗದ ತಮ್ಮ ಹುಟ್ಟೂರಿಗೆ ಹೋಗಲು ನ್ಯಾಯಾಲಯ ಅನುಮತಿ ನೀಡಿತು.
ಕಣ್ಣಲ್ಲಿ ನೀರು:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿ ಇತರೆ ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್, ಪ್ರಕರಣ ಕುರಿತ ಅಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗ ಬೇಕು ಎಂದು ಷರತ್ತು ವಿಧಿಸಿತ್ತು. ಶುಕ್ರವಾರ ವಿಚಾರಣೆ ನಿಗದಿಯಾಗಿದ್ದರಿಂದ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ದರ್ಶನ್, ಪವಿತ್ರಾಗೌಡ, ನಾಗರಾಜು, ಜಗದೀಶ್, ಅನುಕುಮಾರ್, ರಾಘವೇಂದ್ರ ಹಾಜರಾಗಿದ್ದರು. ಇತರೆ ಆರೋಪಿಗಳ ಪರ ವಕೀಲರು ಹಾಜರಾತಿಗೆ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ ಬೆಳಗ್ಗೆ 10.55ರ ವೇಳೆಗೆ ಕೋರ್ಟ್‌ಗೆ ಬಂದ ಪವಿತ್ರಾ ಗೌಡ, ಕೋರ್ಟ್ ಹಾಲ್‌ನ ಒಂದು ಮೂಲೆಗೆ ಹೋಗಿ ನಿಂತರು. 11.10ರ ಸುಮಾರಿಗೆ ದರ್ಶನ್ ಸಹ ಕೋಟ್ ೯ಗೆ ಪ್ರವೇಶಿಸಿ ಮತ್ತೊಂದು ಬಾಗಿಲ ಬಳಿಯ ಮೂಲೆಯಲ್ಲಿ ನಿಂತರು.
ಈ ವೇಳೆ ದರ್ಶನ್ ಅನ್ನು ಕಂಡು ಭಾವುಕಾರದ ಪವಿತ್ರಾ ಕಣ್ಣಲ್ಲಿ ನೀರು ತುಂಬಿಕೊಂಡಿತು. ಈ ದೃಶ್ಯಕಂಡ ದರ್ಶನ್, ಜನಸಂದಣಿ ನಡುವೆಯೇ ಮತ್ತೊಂದು ಮೂಲೆಯಲ್ಲಿ ನಿಂತಿದ್ದ ಪವಿತ್ರಾ ಬಳಿಗೆ ತೆರಳಿದರು. ಹತ್ತಿರದಿಂದ ದರ್ಶನ್ ಮುಖ ಕಂಡಾಗ ಪವಿತ್ರಾ ಮತ್ತಷ್ಟು ಭಾವುಕ ವಾದರು. ಇದರಿಂದ ದರ್ಶನ್ ಆಕೆ ಹೆಗಲ ಮೇಲೆ ಕೈ ಹಾಕಿ ಸಾಂತ್ವನ ಹೇಳಿದರು. ಇದಾದ ಕೆಲವೇ ನಿಮಿಷಗಳಲ್ಲಿ ವಿಚಾರಣೆ ಆರಂಭವಾಯಿತು. ದರ್ಶನ್, ಪವಿತ್ರಾ ಸೇರಿ ಇತರೆ ಆರೋಪಿಗಳ ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿತು. ಇದಾದ ಬಳಿಕ ಎಲ್ಲಾ ಆರೋಪಿಗಳು ಕೋರ್ಟ್ ಹಾಲ್‌ನಿಂದ ತೆರಳಿದರು. ನಂತರ ಆರೋಪಿಗಳ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ಬೆಂಗಳೂರು ಬಿಟ್ಟು ತೆರಳಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು. ಅದರಂತೆ ಜ.12ರಿಂದ 18ರವರೆಗೆ 6 ದಿನ ಮೈಸೂರಿಗೆ ಹೋಗಲು ದರ್ಶನ್‌ಗೆ ಅನುಮತಿ ನೀಡಲು ಕೋರಲಾಯಿತು.
ಫ್ಯಾಷನ್ ಡಿಸೈನ್ ಸಂಸ್ಥೆಗೆ ಕಚ್ಚಾವಸ್ತು ತರಲು 30 ದಿನಗಳ ಕಾಲ ಮುಂಬೈ ಹಾಗೂ ದೇಶದ ಇತರೆ ಪ್ರದೇಶಗಳಿಗೆ ತೆರಳಲು ಪವಿತ್ರಾ ಗೌಡಗೆ ಅನುಮತಿ ಕೋರಿ ಆಕೆ ಪರ ವಕೀಲರು ಅರ್ಜಿ ಸಲ್ಲಿಸಿದರು. ಚಿತ್ರದುರ್ಗದ ತನ್ನ ಹುಟ್ಟೂರಿಗೆ ತೆರಳಲು ರಾಘವೇಂದ್ರ ಜಗದೀಶ್, ಅನುಕುಮಾರ್ ಮತ್ತು ಮೈಸೂರಿಗೆ ಹೋಗಲು ನಾಗರಾಜ್‌ಗೆ ಅನುಮತಿ ಕೋರಿ ಅವರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ನ್ಯಾಯಪೀಠ ಮಾನ್ಯ ಮಾಡಿತು.