ಗಾಂಧೀಜಿ ಕುರಿತ ಪ್ರಬಂಧ ಸ್ಪರ್ಧೆ ನಡೆಸಿ: ಶಿಕ್ಷಣ ಇಲಾಖೆಗೆ ಸಿದ್ದರಾಮಯ್ಯ ಸೂಚನೆ

By Kannadaprabha NewsFirst Published Jan 25, 2024, 3:30 AM IST
Highlights

‘21ನೇ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರು ಪ್ರತಿಪಾದಿಸುವ ಪರಿಹಾರಗಳು’ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. 
 

ಬೆಂಗಳೂರು (ಜ.25): ‘ಗಾಂಧೀಜಿ ಚಿಂತನೆಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರವಿರುವುದರಿಂದ ರಾಜ್ಯದಲ್ಲಿ ಎಲ್ಲ ಶಾಲೆ, ಕಾಲೇಜು, ವಿವಿಗಳಲ್ಲೂ 6ನೇ ತರಗತಿ ಮೇಲ್ಪಟ್ಟು ಸಂಶೋಧನಾ ವಿದ್ಯಾರ್ಥಿಗಳ ವರೆಗೂ (10 ಮತ್ತು 12ನೇ ತರಗತಿ ಹೊರತುಪಡಿಸಿ) ‘21ನೇ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರು ಪ್ರತಿಪಾದಿಸುವ ಪರಿಹಾರಗಳು’ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. 

ಈ ಸಂಬಂಧ ಎರಡೂ ಇಲಾಖೆಗಳ ಸಚಿವರಾದ ಮಧು ಬಂಗಾರಪ್ಪ ಮತ್ತು ಡಾ.ಎಂ.ಸಿ.ಸುಧಾಕರ್‌ ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿ ಅವರು ಪ್ರಬಂಧ ಸ್ಪರ್ಧೆ ಆಯೋಜಿಸಲು ಸೂಚಿಸಿದ್ದಾರೆ. ಈ ಸೂಚನೆ ಬೆನ್ನಲ್ಲೇ ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆ, ಪಿಯು ಕಾಲೇಜುಗಳಲ್ಲಿ 6ನೇ ತರಗತಿ ಮೇಲ್ಪಟ್ಟ ತರಗತಿ ವಿದ್ಯಾರ್ಥಿಗಳಿಗೆ ಜನವರಿ ಮಾಸಾಂತ್ಯದೊಳಗೆ ‘21ನೇ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರು ಪ್ರತಿಪಾದಿಸುವ ಪರಿಹಾರಗಳು’ ವಿಚಾರ ಕುರಿತು ಪ್ರಬಂಧ ಸ್ಪರ್ಧೆ ನಡೆಸಬೇಕು. 

Latest Videos

ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿ ತರಗತಿ ಮಕ್ಕಳಿಗೆ ಸೂಕ್ತ ಬಹುಮಾನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಂಸಾ ಪತ್ರ ನೀಡಬೇಕು ಎಂದು ಸೂಚಿಸಿದೆ. ಆದರೆ, ಮಾರ್ಚ್‌ ಏಪ್ರಿಲ್‌ನಲ್ಲಿ ಪಬ್ಲಿಕ್‌ ಪರೀಕ್ಷೆ ಎದುರಿಸಲಿರುವ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಿಂದ ವಿನಾಯಿತಿ ನೀಡಲು ಇಲಾಖೆಯ ನಿರ್ದೇಶಕಿ ವಿ. ಸುಮಂಗಲ ಸೂಚಿಸಿದ್ದಾರೆ.

ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸರ್ಕಾರದ ಆದ್ಯತೆ: ಸಿದ್ದರಾಮಯ್ಯ ಹೇಳಿದ್ದೇನು?

ಡಿಎಸ್‌ಇಆರ್‌ಟಿ ಸುತ್ತೋಲೆ ಶಾಲಾ ಶಿಕ್ಷಣ ಅಂದರೆ ದ್ವಿತೀಯ ಪಿಯುಸಿವರೆಗೆ (7, 8, 9 ಮತ್ತು 11ನೇ ತರಗತಿ) ಮಾತ್ರ ಅನ್ವಯಿಸುವುದರಿಂದ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆಗೆ ಉನ್ನತ ಶಿಕ್ಷಣ ಇಲಾಖೆಯು ಪ್ರತ್ಯೇಕ ಸುತ್ತೋಲೆ ಹೊರಡಿಸಬೇಕಿದೆ. ಸದ್ಯದಲ್ಲೇ ಆ ಇಲಾಖೆಯಿಂದಲೂ ಸುತ್ತೋಲೆ ಹೊರಬೀಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!