
ಸೊರಬ (ಆ.15): ತಾಲೂಕಿನ ಚಂದ್ರಗುತ್ತಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದ ಆರೋಪಿಗಳನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ. ದೇಗುಲ ಸಮಿತಿಗೆ ಸೇರಿಸಿಕೊಳ್ಳಲಿಲ್ಲ ಎಂಬ ದ್ವೇಷದಿಂದ ಸಮಿತಿ ಅಧ್ಯಕ್ಷರ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ನ ನಡೆಸಲಾಗಿದೆ ಎಂಬುದು ವಿಚಾರಣೆಯಿಂದ ಬಯಲಾಗಿದೆ.
ಚಂದ್ರಗುತ್ತಿ(Chandragutti) ಗ್ರಾಮದ ಭೋವಿ ಕಾಲೋನಿಯ ಪ್ರವೀಣ (33), ದೇವರಾಜು (50) ಹಾಗೂ ಭೀಮಪ್ಪ (35) ಪ್ರಕರಣದ ಬಂಧಿತ ಆರೋಪಿಗಳು.ದೇವಸ್ಥಾನದ ಕಮಿಟಿಗೆ ಸೇರಲು ದೇವರಾಜು ಅರ್ಜಿ ಸಲ್ಲಿಸಿದ್ದ. ಆದರೆ ಈತನ ಅರ್ಜಿಯನ್ನು ತಿರಿಸ್ಕರಿಸಲಾಗಿತ್ತು. ಅರ್ಜಿ ತಿರಸ್ಕೃತಗೊಳ್ಳಲು ದೇವಸ್ಥಾನ ಕಮಿಟಿಯ ಹಾಲಿ ಅಧ್ಯಕ್ಷರೇ ಕಾರಣ ಎಂದು ದೇವರಾಜು ಭಾವಿಸಿದ್ದ ಆರೋಪಿ. ಹೀಗಾಗಿ ಕಳಂಕ ಬಂದರೆ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಸಬಹುದೆಂದು ಸಂಚು ಮಾಡಿದ್ದ. ಈ ಕೃತ್ಯಕ್ಕೆ ಪ್ರವೀಣ್ ಮತ್ತು ಭೀಮಪ್ಪ ಕೈಜೋಡಿಸಿದ್ದರು. ಮೂವರು ಸೇರಿಕೊಂಡು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದಂತೆ ನಾಟಕವಾಡಿದ್ದರು.
ಚಂದ್ರಗುತ್ತಿ ರೇಣುಕಾಂಬೆ ಬೆಳ್ಳಿ ಮುಖವಾಡವನ್ನೇ ಕಿತ್ತೆಸೆದ ಕಳ್ಳರು!
ಕಳೆದ ಆಗಸ್ಟ್ 3ರಂದು ಶ್ರೀ ರೇಣುಕಾಂಬಾ ದೇವಸ್ಥಾನದ(Renukamba temple chandragutti) ಬಾಗಿಲು ಬೀಗ ಮುರಿದು ದೇವಿಯ ಗರ್ಭಗುಡಿಯ ಸುರಂಗದಲ್ಲಿರುವ ಬೆಳ್ಳಿಮುಖವಾಡವನ್ನು ಕಿತ್ತು ದೇವಸ್ಥಾನದ ಪ್ರಾಂಗಣದಲ್ಲಿ ಎಸೆದಿದ್ದರು. ಅಲ್ಲದೇ ಕಾಣಿಕೆ ಹುಂಡಿ ಒಡೆಯಲು ವಿಫಲ ಯತ್ನ ನಡೆಸಿದ್ದರು.
ಈ ಸಂಬಂಧ ಆಗಸ್ಟ್ 3ರಂದು ದೇವಸ್ಥಾನ ಪ್ರಭಾರ ಕಾರ್ಯನಿರ್ವಾಣಾಧಿಕಾರಿ ಶಿವಪ್ರಸಾದ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸೊರಬ ಪೊಲೀಸರು ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದರು. ಸೊರಬ ಪೊಲೀಸರ ತಂಡ ಆಗಸ್ಟ್ 14ರಂದು ಕಡೆಗೂ ಕಿಡಿಗೇಡಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಸೊರಬ: ಚಂದ್ರಗುತ್ತಿ ರೇಣುಕೆ ಕ್ಷೇತ್ರದಲ್ಲಿ ಸೌಲಭ್ಯಗಳ ಕೊರತೆ
ಜಿಲ್ಲಾ ಎಸ್‌ಪಿ ಜಿ.ಕೆ. ಮಿಥುನ್‌ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‌ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಶಿಕಾರಿಪುರ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸೊರಬ ವೃತ್ತ ನಿರೀಕ್ಷಕ ರಾಜಶೇಖರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಾಗರಾಜ್ ಮತ್ತು ಸಬ್‌ಇನ್‌ಸ್ಪೆಕ್ಟರ್ ಮಾಳಪ್ಪ ವೈ. ಚಿಪ್ಪಲಕಟ್ಟಿನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಿ.ಸಿ. ರಾಘವೇಂದ್ರ, ವಿನಯ್, ಸಂದೀಪ್ ತಂಡ ಆರೋಪಿಗಳ ಪತ್ತೆಯಲ್ಲಿ ಯಶಸ್ವಿಯಾಗಿದೆ. ಪೊಲೀಸರ ಉತ್ತಮ ಕಾರ್ಯಕ್ಕೆ ಇಲಾಖೆ ಹಾಗೂ ಭಕ್ತರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಅಭಿನಂದಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ