
ಬೀದರ್ (ಆ.15) : ‘ಕೇಂದ್ರ ಸಚಿವ ಭಗವಂತ ಖೂಬಾ ಅವರು ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡುವೆ. ವರಿಷ್ಠರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರು. ಮಾನನಷ್ಟಮೊಕದ್ದಮೆ ಹೂಡುತ್ತೇನೆ’ ಎಂದು ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ್ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಶಾಸಕರು, ಖೂಬಾ ಅವರು ಸ್ವತಃ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹೀಗಿರುವಾಗ ನಾನು ಕಾಂಗ್ರೆಸ್ ನಾಯಕರ ಜೊತೆ ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸಿರುವುದನ್ನು ಗಮನಿಸಿದರೆ ‘ಉಲ್ಟಾಚೋರ್ ಕೊತ್ವಾಲ್ ಕೊ ಡಾಟೆ’ ಎಂಬಂತಾಗಿದೆ. ಪಕ್ಷದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ಖೂಬಾ, ನಾನು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ. ಖೂಬಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಅವರಿಗೆ ಧಮ್ ಇದ್ದರೆ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
'ಮುಸ್ಲಿಮರ ವೋಟು ಬೇಡ' ಎಂಬ ಕೆಲವರ ತೆವಲಿಗೆ 30% ವೋಟುಗಳೂ ಹೋದ್ವು: ಛಲವಾದಿ
ತಮ್ಮ ವಿರುದ್ಧದ ಕೊಲೆ ಆರೋಪಕ್ಕೆ ಪ್ರತಿಯಾಗಿ ಖೂಬಾ ಅವರು, ಚವ್ಹಾಣ್ ವಿರುದ್ಧ ಪಕ್ಷ ವಿರೋಧಿ, ಹೊಂದಾಣಿಕೆ ರಾಜಕೀಯದ ಆರೋಪ ಮಾಡಿದ್ದರು. ಜೊತೆಗೆ, ಚವ್ಹಾಣ್ ವಿರುದ್ಧ 100 ಕೋಟಿ ರು. ಮಾನನಷ್ಟಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು. ಖೂಬಾ ಎಚ್ಚರಿಕೆಗೆ ಪ್ರತಿಯಾಗಿ ಚವ್ಹಾಣ್ ಹೇಳಿಕೆ ಹೊರಬಿದ್ದಿದೆ.
ಚವ್ಹಾಣ್ ಆರೋಪ ದೇವರ ಉಡಿಗೆ ಹಾಕಿರುವೆ: ಖೂಬಾ
ಶಾಸಕ ಪ್ರಭು ಚವ್ಹಾಣ್ ನನ್ನ ಮೇಲೆ ಮಾಡಿರುವ ಕೊಲೆ ಆರೋಪದಿಂದ ನನ್ನ ಮನಸ್ಸಿಗಾಗಿರುವ ನೋವಿನಿಂದ ಹೊರಬರಲಾಗುತ್ತಿಲ್ಲ, ನಾನು ಅದಕ್ಕೆ ವೃಥಾ ಉತ್ತರಿಸುವ ಬದಲು ಅಮರೇಶ್ವರನ ಉಡಿಗೆ ಹಾಕಿದ್ದೇನೆ ಎಂದು ಬಿಜೆಪಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.
ಔರಾದ್‌ನ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚವ್ಹಾಣ್ ಈ ಹಿಂದೆಯೂ ನನ್ನ ಮೇಲೆ ಆರೋಪಗಳನ್ನು ಮಾಡಿದ್ದರೂ, ಇಬ್ಬರೂ ಒಂದೇ ಪಕ್ಷದಲ್ಲಿದ್ದೇವೆ ಭಿನ್ನಾಭಿಪ್ರಾಯಗಳು ಕ್ರಮೇಣ ಶಮನಗೊಳ್ಳುತ್ತವೆ ಎಂದು ನಂಬಿ ಎಲ್ಲಿಯೂ ಅವರ ಆರೋಪಗಳಿಗೆ ಉತ್ತರ ನೀಡುತ್ತಿರಲಿಲ್ಲ. ಆದರೆ ಈ ಬಾರಿ ಕೊಲೆಯ ಗಂಭೀರ ಆರೋಪದಿಂದ ನಾನು, ನನ್ನ ಪರಿವಾರ, ಕಾರ್ಯಕರ್ತರು ಸಾಕಷ್ಟುನೋವಿನಲ್ಲಿದ್ದೇವೆ ಎಂದರು.
ಕೇಂದ್ರ ಸಚಿವ ಭಗವಂತ್ ಖೂಬಾಗೆ ಮತ್ತೊಂದು ಶಾಕ್!
ನಾನೇನಾದರೂ ಅಂಥ ಗೂಂಡಾ ಪ್ರವೃತ್ತಿ ಹೊಂದಿದವನಾಗಿದ್ದರೆ ಅವರು ಈ ಆರೋಪಗಳನ್ನು ಮಾಡುವ ಧೈರ್ಯ ಮಾಡುತ್ತಿದ್ದರೆ? ನಾನೊಬ್ಬ ಸಾತ್ವಿಕ ವಿಚಾರಧಾರೆಯ ಜನ ನಾಯಕ ಎಂದು ಶಾಸಕ ಪ್ರಭು ಚವ್ಹಾಣ್‌ಗೆ ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ