ಪಠ್ಯದಲ್ಲಿ ಹಿಂದಿ ಕಲಿಕೆ ಕನ್ನಡಿಗರಿಗಿಂತ ವಲಸಿಗರಿಗೇ ಲಾಭ! ಉದ್ಯೋಗ ನೀಡದ ಭಾಷೆ ನಮಗೆ ಬೇಕೆ?

Published : Apr 09, 2026, 08:08 AM IST
third language Hindi

ಸಾರಾಂಶ

ರಾಜ್ಯದ ಶಾಲೆಗಳಲ್ಲಿ ಶೇ.93ಕ್ಕೂ ಹೆಚ್ಚು ಮಕ್ಕಳು ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಯುತ್ತಿದ್ದಾರೆ. ಈ ನೀತಿಯು ಕನ್ನಡಿಗರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಬದಲು, ಹಿಂದಿ ವಲಸಿಗರು ಕರ್ನಾಟಕದಲ್ಲಿ ಸುಲಭವಾಗಿ ನೆಲೆಸಲು ಸಹಕಾರಿಯಾಗುತ್ತಿದೆ ಎಂದು ತಜ್ಞರು ವಾದಿಸಿದ್ದಾರೆ. 

ಲಿಂಗರಾಜು ಕೋರಾ

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.9): ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಶೇಕಡ 93ಕ್ಕಿಂತಲೂ ಹೆಚ್ಚು ಮಕ್ಕಳು ಬಹು ಆಯ್ಕೆಗಳಿಲ್ಲದೆ ಹಿಂದಿಯನ್ನೇ ತೃತೀಯ ಭಾಷೆಯಾಗಿ ಕಲಿಯುತ್ತಿದ್ದಾರೆ. ಇದು ಕನ್ನಡಿಗರ ಮಕ್ಕಳಿಗೆ ಸ್ವಂತ ಅನುಕೂಲಕ್ಕಿಂತ ಹೆಚ್ಚಾಗಿ ಹಿಂದಿ ರಾಜ್ಯಗಳ ವಲಸಿಗರು ಕರ್ನಾಟಕದಲ್ಲಿ ಸಲೀಸಾಗಿ ನೆಲೆಯೂರಲು ಸಹಕಾರಿ ಎನ್ನುವ ವಾದ ಬಲವಾಗಿದೆ. ಇದಕ್ಕೆ ಸಾಕ್ಷಿ. ಹಿಂದಿ ಕಲಿತು ದೆಹಲಿ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿ ಉತ್ತರದ ವಿವಿಧ ರಾಜ್ಯಗಳಲ್ಲಿ ಉದ್ಯೋಗ, ವ್ಯಾಪಾರ, ಉದ್ಯಮ ನಡೆಸುತ್ತಿರುವ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ. ಅದು 20 ಸಾವಿರಕ್ಕಿಂತ ಕಡಿಮೆ ಎಂದು ಅಂದಾಜಿಸಲಾಗಿದೆ. 2011ರ ಜನಗಣತಿ ಪ್ರಕಾರ ದೆಹಲಿಯಲ್ಲಿನ ಕನ್ನಡಿಗರ ಸಂಖ್ಯೆ 11 ಸಾವಿರ ಎನ್ನುತ್ತಾರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು.

ಉತ್ತರದ ರಾಜ್ಯಗಳಿಗೆ ಉದ್ಯೋಗ ಬೇರೆ ಬೇರೆ ಕಾರಣಕ್ಕೆ ಹೋದ ಕನ್ನಡಿಗರು ಅನಿವಾರ್ಯವಾಗಿ ವ್ಯಹಹಾರಕ್ಕೆ ಬೇಕಾದಷ್ಟು ಹಿಂದಿ ಕಲಿಯುತ್ತಾರೆ. ಇದಕ್ಕಾಗಿ ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ 7.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಹಿಂದಿ ಕಡ್ಡಾಯವಾಗಿ ಕಲಿಸುವ ಪರೀಕ್ಷಾ ಫಲಿತಾಂಶಕ್ಕೆ ಸೇರಿಸುವ ಅಗತ್ಯವೇನಿದೆ ಎನ್ನುವುದು ತಜ್ಞರ ಪ್ರಶ್ನೆ.

ಹಿಂದಿ ಓದಿದ ಮಾತ್ರಕ್ಕೆ ಉದ್ಯೋಗ ಸಿಕ್ಕವರ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಇದ್ದರೆ ತೋರಿಸಲಿ. ದೆಹಲಿ, ಗುರುಗಾವ್‌ ಸೇರಿ ಕೇಂದ್ರಾಡಳಿತ ಪ್ರದೇಶಗಳ ಖಾಸಗಿ ಕಂಪನಿಗಳ ಉದ್ಯೋಗಿಗಳ ಒಟ್ಟು ಸಂಖ್ಯೆ 10 ಲಕ್ಷ ಇದ್ದರೆ, ನಾಲ್ಕೂವರೆ ಲಕ್ಷ ತಮಿಳಿಗರಿದ್ದಾರೆ. ಆದರೆ ಅವರಲ್ಲಿ ಯಾರೂ ಹಿಂದಿ ಓದಿಲ್ಲ. ಇಂಗ್ಲಿಷ್‌ ಮತ್ತು ತಂತ್ರಜ್ಞಾನ ಹಿಡಿತದಿಂದ ಅವರು ಅಲ್ಲಿ ಉದ್ಯೋಗ ಪಡೆದಿದ್ದಾರೆ.

ನಮ್ಮ ಕನ್ನಡಿಗರಿಗೆ 30 ವರ್ಷಗಳಿಂದ ಹಿಂದಿ ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಕನ್ನಡಿಗರ ಸಂಖ್ಯೆ 800 ಮಾತ್ರ. ಹಾಗಾದರೆ ಹಿಂದಿ ಓದಿದರೆ ಉದ್ಯೋಗ ಎಲ್ಲಿ ಸಿಗುತ್ತದೆ? ಬದಲಿಗೆ ಕನ್ನಡಿಗರು ಹಿಂದಿ ಕಲಿಯುತ್ತಿರುವುದು ಹಿಂದಿ ರಾಜ್ಯಗಳಿಂದ ಬರುವ ವಲಸಿಗರಿಗೆ ಕರ್ನಾಟಕದಲ್ಲಿ ತಮ್ಮ ಭಾಷೆಯಲ್ಲೇ ವ್ಯವಹರಿಸಲು ನೆರವಾಗಿ ಸುಲಭವಾಗಿ ನೆಲೆಯೂರಲು ನೆರವಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿ ಮಲೆ ಅವರು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.

ಕರ್ನಾಟಕದಲ್ಲಿ ಹಿಂದಿ ವಲಸಿಗರು ಲಕ್ಷೋಪಲಕ್ಷ

ಕರ್ನಾಟಕದಾದ್ಯಂತ ಹಿಂದಿ ರಾಜ್ಯಗಳಿಂದ ಬಂದು ಉದ್ಯೋಗ, ವ್ಯಾಪಾರ ಮತ್ತಿತರ ಕಾರಣಗಳಿಂದ ನೆಲೆಯೂರಿರುವ ವಲಸಿಗರ ಸಂಖ್ಯೆ ಲಕ್ಷಾಂತರ ಸಂಖ್ಯೆಯಲ್ಲಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರು ಸೇರಿ ಸುತ್ತಮುತ್ತಲ ಇನ್ನೂ ಹಲವು ಜಿಲ್ಲೆಗಳು ಮಂಗಳೂರು, ಬೆಳಗಾವಿ ಸೇರಿ ಇನ್ನೂ ಅನೇಕ ಜಿಲ್ಲಾ ಕೇಂದ್ರಗಳಷ್ಟೇ ಅಲ್ಲದೆ ಇಂದು ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಹಿಂದಿ ವಲಸಿಗರನ್ನು ಕಾಣಬಹುದು. ವಲಸೆಗೆ ಕಾರಣ ಉತ್ತರದ ರಾಜ್ಯಗಳಲ್ಲಿನ ಹೆಚ್ಚು ಜನಸಂಖ್ಯೆ, ಬಡತನದ ಜೊತೆಗೆ ಕರ್ನಾಟಕದಲ್ಲಿ ಕಡಿಮೆ ದರ್ಜೆಯ ಉದ್ಯೋಗ, ಕಡಿಮೆ ಸಂಬಳಕ್ಕೆ ದುಡಿಯುವವರು ಸಿಗದಿರುವುದು ಹೀಗೆ ಬೇರೆ ಬೇರೆ ಕಾರಣಗಳೇನಿದ್ದರೂ ರಾಜ್ಯಾದ್ಯಂತ ಹಿಂದಿ ವಲಸಿಗರು ವ್ಯಾಪಿಸುತ್ತಿರುವುದು ಮಾತ್ರ ಸುಳ್ಳಲ್ಲ. ಅವರು ಕರ್ನಾಟಕಕ್ಕೆ ಬಂದು ನೆಲೆಯೂರಲು ಹೆಚ್ಚು ಸಮಸ್ಯೆ ಆಗುತ್ತಿಲ್ಲ. ಇದಕ್ಕೆ ಮೊದಲ ಕಾರಣ ಅವರಿಗೆ ಹಳ್ಳಿಗಾಡಿನಲ್ಲೂ ಹಿಂದಿ ಮಾತನಾಡುವ ಕನ್ನಡಿಗರು ಸಿಗುತ್ತಿರುವುದು ಎನ್ನುತ್ತಾರೆ ಕನ್ನಡಪರ ಸಂಘಟನೆಗಳ ಮುಖಂಡರು.

ಶೇ.93ರಷ್ಟು ಮಕ್ಕಳ ತೃತೀಯ ಭಾಷೆ ಹಿಂದಿ

ರಾಜ್ಯದ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕಲಿಯಲು ಒಂಬತ್ತು ಭಾಷೆಗಳಿವೆ. ಆದರೆ, ಶೇ.93ಕ್ಕಿಂತ ಹೆಚ್ಚು ಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಿರುವುದು ಹಿಂದಿಯನ್ನು ಮಾತ್ರ. ಪ್ರಸಕ್ತ (2025-26) ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನೇ ನೋಡುವುದಾದರೆ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 7.52 ಲಕ್ಷಕ್ಕೂ ಹೆಚ್ಚು ಮಕ್ಕಳು ಹಿಂದಿಯನ್ನೇ ತೃತೀಯ ಭಾಷೆಯಾಗಿ ಅಧ್ಯಯನ ಮಾಡಿದ್ದಾರೆ. ಉಳಿದ ಸುಮಾರು 55 ಸಾವಿರಕ್ಕೂ ಹೆಚ್ಚು ಮಕ್ಕಳು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಇರುವ ಇತರೆ ಎಂಟು ಭಾಷೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಹಿಂದಿ ಅನಗತ್ಯ ಹೊರೆ

ರಾಜ್ಯದಲ್ಲಿ 30 ವರ್ಷದಿಂದ ಹಿಂದಿ ಕಡ್ಡಾಯವಾಗಿದೆ. ಆದರೂ, ಕರ್ನಾಟಕದ ಬ್ಯಾಂಕುಗಳಲ್ಲಿ, ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಹಿಂದಿಯವರೇ ಬಂದು ಸುಲಭವಾಗಿ ವ್ಯವಹರಿಸುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಹಿಂದಿ ಕಲಿತರೂ ಉತ್ತರದ ರಾಜ್ಯಗಳಲ್ಲಿ ಕೆಲಸ ಪಡೆದ ಕನ್ನಡಿಗರ ಸಂಖ್ಯೆ ಸಾವಿರ ಸಂಖ್ಯೆಯಲ್ಲಿದ್ದರೆ, ಕರ್ನಾಟಕದಲ್ಲಿ ಹಿಂದಿ ವಲಸಗರು ಲಕ್ಷಗಟ್ಟಲೆ ಸಿಗುತ್ತಾರೆ. ಇಷ್ಟೇ ಸಾಕು ಹಿಂದಿ ಕಲಿತರೆ ಉದ್ಯೋಗ ಸಿಗಲ್ಲ. ಹಿಂದಿ ಅನಗತ್ಯ ಹೊರೆ ಎಂಬುದಕ್ಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಅರುಣ್‌ ಜಾಗವಲ್‌ ಹೇಳಿದ್ದಾರೆ.

ಭಾಷಾ ನೀತಿ ಬೇಕು

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಕೂಡ ಮಾತನಾಡಿದ್ದು, 60ರ ದಶಕದಲ್ಲಿ ಹಿಂದಿ ಕಡ್ಡಾಯ ಇರಲಿಲ್ಲ. ಗ್ರೇಡಿಂಗ್‌ ಪದ್ಧತಿಯೇ ಇತ್ತು. ನಂತರ ಇದನ್ನು ಕಡ್ಡಾಯೊಗೊಳಿಸಿ ಪರೀಕ್ಷಾ ಫಲಿತಾಂಶಕ್ಕೂ ಸೇರಿಸಲಾಯಿತು. ಆದರೆ, ಇದರಿಂದ ಕನ್ನಡಿಗರಿಗಿಂತ ಹಿಂದಿ ವಲಸಿಗರು ಕರ್ನಾಟಕಕ್ಕೆ ಬಂದು ನೆಲೆಯೂರಲು ಹೆಚ್ಚು ಅನುಕೂಲವಾಗುತ್ತಿದೆ. ಹಿಂದಿ ಮಾತ್ರವಲ್ಲದೆ ಭಾರತದ ಎಲ್ಲಾ ಮಾತೃಭಾಷೆಗಳನ್ನು ಉಳಿಸಲು ಶಿಕ್ಷಣ ಪದ್ಧತಿಯೊಳಗೆ 3ನೇ ಭಾಷೆಯಾಗಿ ಕಲಿಸಲು ಸೂಕ್ತ ಭಾಷಾ ನೀತಿ ತರಬೇಕು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Assembly Bypolls 2026 Live: ಸಿದ್ದು ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾದ ಬಾಗಲಕೋಟೆ, ದಾವಣಗೆರೆಗೆ ಇಂದು ಉಪಚುನಾವಣೆ
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ